ಗೋದಾಮಿನ ಮೇಲೆ ದಾಳಿ; ಸವದತ್ತಿ ಜೆಡಿಎಸ್ ಅಭ್ಯರ್ಥಿ ಹೆಸರಿನಲ್ಲಿರುವ 42.92 ಲಕ್ಷ ರೂ. ಮೊತ್ತದ ಪರಿಕರಗಳು ವಶಕ್ಕೆ

ಪ್ರಗತಿವಾಹಿನಿ ಸುದ್ದಿ, ಸವದತ್ತಿ: ಗೋದಾಮೊಂದರ ಮೇಲೆ ದಾಳಿ ನಡೆಸಿರುವ ಎಫ್‌ಎಸ್‌ಟಿ ಪೊಲೀಸ್ ಮತ್ತು ಜಿಎಸ್‌ಟಿ ಅಧಿಕಾರಿ ತಂಡ ಸವದತ್ತಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸೌರಭ ಆನಂದ ಚೋಪ್ರಾ ಅವರ ಹೆಸರಿನಲ್ಲಿ ಮತದಾರರಿಗೆ ಹಂಚಲು ದಾಸ್ತಾನು ಮಾಡಿದ್ದ ಅಪಾರ ಪ್ರಮಾಣದ ಹೊಲಿಗೆ ಯಂತ್ರಗಳು, ಕಬ್ಬಿಣದ ಸ್ಟ್ಯಾಂಡ್ ಹಾಗೂ ಟಿಫಿನ್ ಬಾಕ್ಸ್ ಗಳನ್ನು ವಶಪಡಿಸಿಕೊಂಡಿದೆ.

ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದಾಗ ಗೋದಾಮಿನಲ್ಲಿ 23,84,272 ರೂ. ಮೊತ್ತದ ಒಟ್ಟು 1012 ಹೊಲಿಗೆ ಯಂತ್ರಗಳು,
4,56,000 ರೂ. ಮೊತ್ತದ 1200 ಹೊಲಿಗೆ ಯಂತ್ರಗಳ ಕೋಷ್ಟಕಗಳು, 11,27,840 ರೂ. ಮೊತ್ತದ 1060 ಹೊಲಿಗೆ ಯಂತ್ರ ಕಬ್ಬಿಣದ ಸ್ಟ್ಯಾಂಡ್ ಗಳು, 3,24,000ರೂ. ಬೆಲೆ ಬಾಳುವ 2160 ಟಿಫಿನ್ ಬಾಕ್ಸ್ ಸೇರಿದಂತೆ ಒಟ್ಟು 42,92,112 ರೂ. ಮೊತ್ತದ ಪರಿಕರಗಳು ಪತ್ತೆಯಾಗಿದ್ದು ಇವೆಲ್ಲವನ್ನೂ ವಶಪಡಿಸಿಕೊಂಡು ಇಡೀ ಗೋದಾಮನ್ನೇ ಸೀಜ್ ಮಾಡಲಾಗಿದೆ.

ಗೋದಾಮಿನಲ್ಲಿ ಪತ್ತೆಯಾದ ಎಲ್ಲ ವಸ್ತುಗಳ ಮೇಲೆ ಚೋಪ್ರಾ ಅವರ ಹೆಸರಿದ್ದು ಟಿಫಿನ್ ಬಾಕ್ಸ್ ಗಳ ಪ್ಯಾಕ್ ಗಳ ಮೇಲೆ ‘ಗೌರಿ- ಗಣೇಶ ಹಬ್ಬದ ಶುಭಾಶಯಗಳು’ ಎಂದು ನಮೂದಿಸಿ ಸೌರಭ ಚೋಪ್ರಾ ಅವರ ಭಾವಚಿತ್ರ, ಪ್ರಣಾಳಿಗೆಗಳನ್ನು ಪ್ರಕಟಿಸಲಾಗಿದೆ.
ಇದಕ್ಕೆ ಸಂಬಂಧಿಸಿ ಪ್ರಸ್ತುತ ಚುನಾವಣೆ ಕರ್ತವ್ಯದಡಿ ಸವದತ್ತಿ FST ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿರುವ ನೀರಾವರಿ ಇಲಾಖೆ ಸಹಾಯಕ ಅಭಿಯಂತರ ಮೋಹನ್ ಕರೆಹನುಮಂತಪ್ಪ ಎಲಿಗಾರ ಅವರ ದೂರಿನನ್ವಯ ಎನ್‌ಸಿ ನಂ 6/2023 u/s 171(e) (f) IPC ಅಡಿ ಪ್ರಕರಣ ದಾಖಲಾಗಿದೆ ಎಂದು ಸವದತ್ತಿ ವಿದಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ