ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಲಾಕ್‍ಡೌನ್ ವೇಳೆ ದೂರದರ್ಶನ 33 ವರ್ಷಗಳ ನಂತರ ಮತ್ತೆ ’ರಾಮಾಯಣ’ ಧಾರಾವಾಹಿ ಮರು ಪ್ರಸಾರ ಮಾಡುತ್ತಿದ್ದು, ಇದೀಗ ‘ರಾಮಾಯಣ’ ಧಾರಾವಾಹಿ ಮತ್ತೆ ವಿಶ್ವ ದಾಖಲೆ ನಿರ್ಮಿಸಿದೆ.
ಹೌದು. ‘ರಾಮಾಯಣ’ ಧಾರಾವಾಹಿ ದೇಶಾದ್ಯಂತ ಕೊರೊನಾ ಲಾಕ್ ಡೌನ್ ನಡುವೆ ಜನರ ಬೇಸರ ಕಳೆಯುವಂತೆ ಮಾಡಿದೆ. ದಿನದ ಎರಡು ಸಮಯ ಮರು ಪ್ರಸಾರ ಆರಂಭಿಸಿತ್ತು. ನಿರೀಕ್ಷೆಗೂ ಮೀರಿದ ಜನಪ್ರಿಯತೆ ಪಡೆದುಕೊಂಡಿದೆ.
ಈ ಬಗ್ಗೆ ಸ್ವತಃ ದೂರದರ್ಶನ ಟ್ವೀಟ್ ಮಾಡುವ ಮೂಲಕ ಖುಷಿಯನ್ನು ಹಂಚಿಕೊಂಡಿದೆ. ಮರು ಪ್ರಸಾರವಾದ ‘ರಾಮಾಯಣ’ ವಿಶ್ವದಾಖಲೆಯನ್ನೇ ಬರೆದಿದೆ. ಜಗತ್ತಿನಲ್ಲಿಯೇ ಅತಿ ಹೆಚ್ಚು ವೀಕ್ಷಿಸಿದ ಮನರಂಜನಾ ಕಾರ್ಯಕ್ರಮ ಎಂಬ ಹೆಗ್ಗಳಿಕೆಯನ್ನು ಸಹ ‘ರಾಮಾಯಣ’ ಪಡೆದುಕೊಂಡಿದೆ. ಅಷ್ಟೇ ಅಲ್ಲದೇ ದೂರದರ್ಶನದಲ್ಲಿ ‘ರಾಮಾಯಣ’ ಸೀರಿಯಲ್ ಮರು ಪ್ರಸಾರವು ವಿಶ್ವದಾದ್ಯಂತ ವೀಕ್ಷಕರ ದಾಖಲೆಗಳನ್ನು ಬ್ರೇಕ್ ಮಾಡಿದೆ. ಏಪ್ರಿಲ್ 16ರ ವೇಳೆಗೆ 7.7 ಕೋಟಿ ವೀವರ್ಸ್ ಪಡೆದುಕೊಳ್ಳುವ ಮೂಲಕ ವಿಶ್ವದ ಅತಿ ಹೆಚ್ಚು ವೀಕ್ಷಿಸಿದ ಮನರಂಜನಾ ಕಾರ್ಯಕ್ರಮ ಎನಿಸಿಕೊಂಡಿದೆ ಎಂದು ಟ್ವೀಟ್ ಮಾಡಿದೆ.
ಸಾರ್ವಜನಿಕ ಬೇಡಿಕೆಯ ಮೇರೆಗೆ ಮಾರ್ಚ್ 28ರಿಂದ ಮತ್ತೆ ರಾಮಾನಂದ್ ಸಾಗರ್ ನಿರ್ದೇಶನದ ‘ರಾಮಾಯಣ’ ಧಾರಾವಾಹಿಯನ್ನು ಪ್ರಸಾರ ಮಾಡಲಾಗುತ್ತಿತ್ತು. ದೂರದರ್ಶನವು ‘ರಾಮಾಯಣ’ ಸೀರಿಯಲ್ ಮಾತ್ರವಲ್ಲದೇ ‘ಮಹಾಭಾರತ’, ‘ಶ್ರೀ ಕೃಷ್ಣ’ ಮತ್ತು ‘ಉತ್ತರ ರಾಮಾಯಣ’ ಮುಂತಾದ ಪೌರಾಣಿಕ ಧಾರಾವಾಹಿಗಳನ್ನು ಮರು ಪ್ರಸಾರ ಮಾಡುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ