*ಕೆಎಲ್ಇ ಯಲ್ಲಿ ರೀನಲ್ ಫೆಥಾಲಾಜಿ ಕಾರ್ಯಾಗಾರ ಆಯೋಜನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಈ ಭಾಗದ ಜನರ ಆರೋಗ್ಯವನ್ನು ಕಾಪಾಡಲು ಅನೇಕ ಕ್ರಮಗಳನ್ನು ವಹಿಸಲಾಗುತ್ತಿದ್ದು, ಅದಕ್ಕೆ ತಕ್ಕಂತೆ ಸಂಶೋಧನೆಗಳಿಗೆ ಅತ್ಯಧಿಕ ಒತ್ತು ನೀಡಲಾಗುತ್ತಿದೆ. ಅಲ್ಲದೇ ಅದಕ್ಕೆ ತಗುಲುವ ವೆಚ್ಚಕ್ಕೆ ಅನುದಾನ ನೀಡಲಾಗುತ್ತಿದೆ. ಅದಕ್ಕಾಗಿಯೇ ವಿಶ್ವದ್ಯಾಲಯವು ಪ್ರತ್ಯೇಕ ಘಟಕವನ್ನು ಸ್ಥಾಪಿಸಿದೆ ಎಂದು ಕಾಹೆರನ ಕುಲಸಚಿವರಾದ ಡಾ. ಎಂ. ಎಸ್ ಗಣಾಚಾರಿ ಅವರು ಹೇಳಿದರು.
ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ನೆಫ್ರೊಲಾಜಿ ವಿಭಾಗವು ಆಸ್ಪತ್ರೆಯಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ ರೀನಲ್ ಫೆಥಾಲಾಜಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯವಾಗಿ ಗ್ರಾಮೀಣ ಭಾಗದ ಜನರ ಆರೋಗ್ಯವನ್ನು ಕಾಪಾಡಲು ಅನೇಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ. ಜನರ ಮನೆಬಾಗಿಲಿಗೆ ಆರೋಗ್ಯ ಸೇವೆ ಕೊಂಡೊಯ್ಯುತ್ತಿದ್ದೇವೆ. ಅದಕ್ಕೆ ಅವಶ್ಯವಿರುವ ಸಂಶೋಧನೆಗಳನ್ನೂ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.
ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎನ್ ಎಸ್ ಮಹಾಂತಶೆಟ್ಟಿ ಅವರು ಮಾತನಾಡಿ, ಕಿಡ್ನಿ ತೊಂದರೆಯನ್ನು ಶೀಘ್ರ ಪತ್ತೆಹಚ್ಚುವಲ್ಲಿ ನೆಫ್ರೊ ಪ್ಯಾತಾಲಾಜಿ ವಿಭಾಗವು ಅತ್ಯಂತ ಪ್ರಮುಖಪಾತ್ರ ವಹಿಸುತ್ತದೆ. ಆದ್ದರಿಂದ ಕಿಡ್ನಿಗೆ ಏನಾದರೂ ತೊಂದರೆಯಾದರೆ ಅವಶ್ಯವಿರುವ ತಪಾಸಣೆಗಳನ್ನು ಮಾಡಲೇಬೇಕು. ಪೆಥಾಲಾಜಿ ಇಲ್ಲದೇ ರೋಗಪತ್ತೆ ಮಾಡುವದು ಕಠಿಣ. ಬಯಾಪ್ಸಿ ಮಾಡಿದರೆ ಮಾತ್ರ ಸಮಸ್ಯೆ ಗೊತ್ತಾಗುತ್ತದೆ. ಅದಕ್ಕಾಗಿ ರೋಗಿಗಳ ಇತಿಹಾಸ ಅರಿಯದೇ ಚಿಕಿತ್ಸೆ ನೀಡುವದು ಅಸಾಧ್ಯ ಎಂದರು. ಬಯಾಪ್ಸಿ ಮಾತ್ರ ಏನಾಗಿದೆ ಎಂಬುದನ್ನು ತಿಳಿಸಬಲ್ಲದು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಕರ್ನಲ್ ಎಂ ದಯಾನಂದ ಅವರು ಮಾತನಾಡಿ, ವಿವಿಧ ವಿಶ್ವವಿದ್ಯಾಲಯಗಳ ಜೊತೆಗೂಡಿ ನಡೆಯುತ್ತಿರುವ ಸಂಶೋಧನೆಗಳ ಮೂಲಕ ಆರೋಗ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ತಂತ್ರಜ್ಞಾನ ಬದಲಾದಂತೆ ವೈದ್ಯಕೀಯ ವ್ಯವಸ್ಥೆಯನ್ನು ಜನರಿಗೆ ತಲುಪಿಸಲಾಗುತ್ತಿದೆ. ಅತ್ಯಾಧುನಿಕ ವ್ಯವಸ್ಥೆಯನ್ನು ಕಲ್ಪಿಸಲು ಸದಾ ಒಂದು ಹೆಜ್ಜೆ ಮುಂದಿದೆ. ಕಿಡ್ನಿ ಸಂಬAಧಿತ ಸಕಲ ಚಿಕಿತ್ಸಾ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಗುಜರಾತಿನ ನಡಿಯಾಡ ಮುಲ್ಜಿಬಾಯಿ ಪಟೇಲ್ ಯುರಾಲಾಜಿಕ್ ಆಸ್ಪತ್ರೆಯ ಉಪಕಾರ್ಯಾಧ್ಯಕ್ಷ ಹಾಗೂ ನೆಫ್ರೊಲಾಜಿಸ್ಟ ಡಾ. ಉಮಾಪತಿ ಹೆಗಡೆ, ಗುಜರಾತ ಯುನಿವರ್ಸಿಟಿಯ ರೀನಲ್ ಪೆಥಾಲಾಜಿಸ್ಟ ಡಾ. ಲವಲೇಶ ನಿಗಮ, ಮಣಿಪಾಲ ಆಸ್ಪತ್ರೆಯ ರೀನಲ್ ಪೇತಾಲಾಜಿಸ್ಟ ಮಹೇಶ ವಂಕಲಕುಂಟಿ ಉಪನ್ಯಾಸ ನೀಡಿದರು.
ಸಮಾರಂಭದಲ್ಲಿ ನೆಫ್ರಾಲಾಜಿ ವಿಭಾಗ ಮುಖ್ಯಸ್ಥರಾದ ಡಾ. ಮಲ್ಲಿಕಾರ್ಜುನ ಕರಿಶೆಟ್ಟಿ ( ಖಾನಪೇಟ) ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾರಂಭದಲ್ಲಿ ಹಿರಿಯ ತಜ್ಞವೈದ್ಯರಾದ ಡಾ. ವಿ ಡಿ ಪಾಟೀಲ, ಡಾ. ಎಂ ವಿ ಜಾಲಿ, ಡಾ. ರಾಜೇಶ ಪವಾರ, ನೆಪ್ರೊಲಾಜಿಸ್ಟಗಳಾದ ಡಾ. ರಿತೇಶ ವೆರ್ನೆಕರ, ಡಾ. ರವಿ ಸಾರವಿ, ಡಾ. ಗೌತಮ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.