*ಮಾಹಿತಿ ಒದಗಿಸುವದು ಅಧಿಕಾರಿಯ ಕರ್ತವ್ಯ: ರಾಜ್ಯ ಮುಖ್ಯ ಮಾಹಿತಿ ಆಯುಕ್ತ ಎ.ಎಂ.ಪ್ರಸಾದ*

ಪ್ರಗತಿವಾಹಿನಿ ಸುದ್ದಿ: ಪಾರದರ್ಶಕತೆ, ಹೊಣೆಗಾರಿಕೆ ಹಾಗೂ ಭ್ರಷ್ಟಾಚರ ನಿವಾರಣೆಗಾಗಿ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತರಲಾಗಿದ್ದು. ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೋರಿ ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ ಕಾಲಮಿತಿಯೊಳಗೆ ಮಾಹಿತಿ ಒದಗಿಸುವುದು ಸಾರ್ವಜನಿಕ ಮಾಹಿತಿ ಅಧಿಕಾರಿಯ ಕರ್ತವ್ಯವಾಗಿದೆ ಎಂದು ರಾಜ್ಯ ಮುಖ್ಯ ಮಾಹಿತಿ ಆಯುಕ್ತರಾದ ಎ.ಎಂ.ಪ್ರಸಾದ ಅವರು ತಿಳಿಸಿದರು.
ಸುವರ್ಣ ವಿಧಾನ ಸೌಧದಲ್ಲಿ ಗುರುವಾರ(ಜು.31) ಜರುಗಿದ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಪ್ರಥಮ ಮೇಲ್ಮನವಿ ಪ್ರಾಧಿಕಾರಿ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಅಧಿನಿಯಮ ಕಾಯ್ದೆ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯಾವುದೇ ಅಧಿಕಾರಿ ಸಿಬ್ಬಂದಿಗಳ ವೈಯಕ್ತಿಕ ಮಾಹಿತಿ ನೀಡಲು ಬರುವುದಿಲ್ಲ.ಮಾಹಿತಿ ಕೋರಿ ಬಂದಂತಹ ಅರ್ಜಿಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಇದ್ದಲ್ಲಿ ಅಂತಹ ಅರ್ಜಿಗಳಿಗೆ ಮಾಹಿತಿ ನೀಡಬೇಕು ಎಂದರು.
ಮಾಹಿತಿ ಅಧಿಕಾರಿಯು ಯಾವುದೇ ಸಮಂಜಸ ಕಾರಣವಿಲ್ಲದೇ ಮಾಹಿತಿಯನ್ನು ನೀಡದಿದ್ದಲ್ಲಿ ಅಥವಾ ದುರುದ್ದೇಶದಿಂದ ತಪ್ಪಾದ ಮಾಹಿತಿ ನೀಡಿದ್ದಲ್ಲಿ ದಂಡ ಪಾವತಿಸಬೇಕಾಗುತ್ತದೆ ಜೊತೆಗೆ ಶಿಸ್ತುಕ್ರಮವನ್ನು ಜರುಗಿಸಬಹುದಾಗಿದೆ.
ಮಾಹಿತಿ ಹಕ್ಕು ಕಾಯ್ದೆ ಜಾರಿಗೊಂಡು 20 ವರ್ಷಗಳು ಗತಿಸಿವೆ. 2019ರಲ್ಲಿ ಬೆಳಗಾವಿಯಲ್ಲಿ ಪೀಠ ಪ್ರಾರಂಭವಾಗಿದ್ದು, ಬೆಳಗಾವಿ ವಿಭಾಗದ ಪೀಠದಲ್ಲಿ ಅಂದಾಜು ಹನ್ನೆರೆಡು ಸಾವಿರಕ್ಕೂ ಅಧಿಕ ಅರ್ಜಿಗಳು ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಅಂದಾಜು ಮೂರು ಸಾವಿರಕ್ಕೂ ಅಧಿಕ ಅರ್ಜಿಗಳು ಬಾಕಿ ಇದ್ದು ಇವುಗಳ ವಿಲೇವಾರಿಗೆ ಕ್ರಮವಹಿಸಬೇಕು. ಈ ಕುರಿತು ಬೆಳಗಾವಿ ಪೀಠದವ್ಯಾಪ್ತಿಯ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಸಾರ್ವಜನಿಕರಿಗೆ ಕಚೇರಿಯ ಮಾಹಿತಿ ಅಧಿಕಾರಿಗಳ ವಿವರಗಳು ಸುಲಭವಾಗಿ ದೊರಕಬೇಕು. ಕಚೇರಿಗೆ ಸಂಬಂದಪಟ್ಟ ಸಾರ್ವಜನಿಕ ಮಾಹಿತಿ ಅಧಿಕಾರಿ, ಮೇಲ್ಮನವಿ ಪ್ರಾಧಿಕಾರಿಯ ವಿವರಗಳನ್ನು ತಮ್ಮ ಇಲಾಖೆ ಅಂತರ್ಜಾಲ ಪುಟದಲ್ಲಿ ಪ್ರಚುರಪಡಿಸಬೇಕು.
ಮಾಹಿತಿ ಕೋರಿ ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ ಮೂವತ್ತು ದಿನದೊಳಗಾಗಿ ಪಿ.ಆಯ್.ಓ.ಗಳು ಉತ್ತರ ಒದಗಿಸಬೇಕು ಹಾಗೂ ಎ.ಪಿ.ಆಯ್.ಓ. ಗಳು ನಲವತ್ತೈದು ದಿನದೊಳಗಾಗಿ ಉತ್ತರ ಒದಗಿಸಬೇಕು.
ಕಂದಾಯ, ಗ್ರಾಮೀಣಾಭಿವೃದ್ಧಿ ಹಾಗೂ ಪೋಲೀಸ್ ಇಲಾಖೆ ಸೇರಿದಂತೆ ವಿವಿಧ ಪ್ರಮುಖ ಇಲಾಖೆಗಳ ಮಾಹಿತಿಯನ್ನು ಕಾಲಮಿತಿಯೊಳಗಾಗಿ ಒದಗಿಸಬೇಕು. ಮಾಹಿತಿಗೆ ಸಂಬಂಧಿಸಿದ ಕಡತಗಳು ಸಿಗದೇ ಇದ್ದರೆ ಅಥವಾ ಕಳುವಾಗಿದ್ದರ ಈ ಕುರಿತು ದೂರು ದಾಖಲಿಸಬೇಕು.
ಪ್ರತಿ ತಿಂಗಳು ಅಭಿಯಾನದ ರೂಪದಲ್ಲಿ ಅರ್ಜಿಗಳ ವಿಲೇವಾರಿಗೆ ಕ್ರಮವಹಿಸಬೇಕು. ಮಾಹಿತಿ ಕೋರಿ ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ ಅನುಕೂಲವಾಗಬೇಕು ಜೊತೆಗೆ ಕಾಲಮಿತಿಯೊಳಗೆ ಸಮರ್ಪಕ ಮಾಹಿತಿ ಒದಗಿಸಬೇಕು.
ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ವಿವಿಧ ಯೋಜನೆಗಳ ಕುರಿತು ಅಂತರ್ಜಾಲದಲ್ಲಿ ಪ್ರಚುರಪಡಿಸಬೇಕು ಇದರಿಂದಾಗಿ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ತ್ವರಿತವಾಗಿ ಮಾಹಿತಿ ಒದಗಿಸಲು ಅನುಕೂಲವಾಗುತ್ತದೆ.
ಎಲ್ಲ ಅಧಿಕಾರಿ ಸಿಬ್ಬಂದಿಗಳು ಮಾಹಿತಿ ಹಕ್ಕು ಕಾಯ್ದೆ ಕುರಿತು ಸಂಪೂರ್ಣ ಅರಿವು ಹೊಂದಿದ್ದಲ್ಲಿ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಸಮರ್ಪಕ ಮಾಹಿತಿ ಒದಗಿಸಲು ಅನುಕೂಲವಾಗುತ್ತದೆ ಎಂದು ರಾಜ್ಯ ಮುಖ್ಯ ಮಾಹಿತಿ ಆಯುಕ್ತರಾದ ಎ.ಎಂ.ಪ್ರಸಾದ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಮಾತನಾಡಿ, ಮಾಹಿತಿ ಹಕ್ಕು ಕಾಯ್ದೆಯಡಿ ಅಧಿಕಾರಿಗಳು ಎದುರಿಸುತ್ತಿರುವ ತೊಂದರೆಗಳನ್ನು ಪರಿಹರಿಸಿಕೊಳ್ಳಲು ಈ ಕಾರ್ಯಾಗಾರವು ತುಂಬಾ ಅನುಕೂಲವಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಜಿಲ್ಲೆಯ ವಿವಿಧ ಇಲಾಖೆಯಲ್ಲಿ ಬಾಕಿ ಇರುವ ಮಾಹಿತಿ ಹಕ್ಕು ಅರ್ಜಿ ವಿಲೇವಾರಿಗಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಆಯೋಜಿಸಲಾಗುವುದು ಎಂದರು.
ಕಾರ್ಯಾಗಾರದಲ್ಲಿ ಬೆಳಗಾವಿ ಪೀಠದ ರಾಜ್ಯ ಮಾಹಿತಿ ಆಯುಕ್ತರಾದ ನಾರಾಯಣ ಚನ್ನಾಳ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಜಿಲ್ಲಾಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.