
ಪ್ರಗತಿವಾಹಿನಿ ಸುದ್ದಿ: ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕನೊಬ್ಬನಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಕುಸಿದು ಬಿದ್ದು ಸಾವನ್ನಪ್ಪಿದ್ದ ಗೋವಾದ ಮಾಜಿ ಶಾಸಕ ಲಾವೋ ಮಾಮಲೇದಾರ್ ಸಾವಿಗೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಹಿತಿ ತಿಳಿಸಿದ ಸಚಿವರು, ಜಿಲ್ಲಾಧಿಕಾರಿ, ಬೆಳಗಾವಿ ಪೊಲೀಸ್ ಕಮಿಷನರ್ ಅವರೊಂದಿಗೆ ಮಾತನಾಡಿದ್ದು, ಈ ಘಟನೆ ಬಗ್ಗೆ ವಿವರ ಪಡೆಯಲಾಗಿದೆ. ಮಾಜಿ ಶಾಸಕ ಲಾವೋ ಮಾಮಲೇದಾರ್ ಅವರ ಪಾರ್ಥಿವ ಶರೀರವನ್ನು ಅವರ ಸ್ವಗ್ರಾಮಕ್ಕೆ ಕಳಿಸಲು ಸಕಲ ವ್ಯವಸ್ಥೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಬೆಳಗಾವಿಯ ಬಿಮ್ಸ್‌ನಲ್ಲಿ ಮಾಜಿ ಶಾಸಕ ಲಾವೂ ಮಾಮಲೇದಾರ್ ಅವರ ಮೃತದೇಹ ಇರಿಸಲಾಗಿದ್ದು, ಬಿಮ್ಸ್ ಗೆ ಸಚಿವ ಸತೀಶ್ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಆಪ್ತ ಸಹಾಯಕರಾದ ಮಲಗೌಡ ಪಾಟೀಲ್ ಭೇಟಿ ನೀಡಿದ್ದು, ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ.
ಸಂತಾಪ ಸೂಚಿಸಿದ ಸಚಿವರು: ಬೆಳಗಾವಿ ನಗರದಲ್ಲಿ ಗೋವಾದ ಮಾಜಿ ಶಾಸಕ ಲಾವೋ ಮಾಮಲೇದಾರ್ ಸಾವಿನ ಘಟನೆ ನಡೆದಿರುವುದು ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ಅವರ ಆತ್ಮಕ್ಕೆ ಭಗವಂತ ಸದ್ಗತಿ ಕರುಣಿಸಲಿ, ಅವರ ಕುಟುಂಬ ವರ್ಗಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ಆ ದೇವರು ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸಂತಾಪ ಸೂಚಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ