ಹಣ ಬಂದ ಕೂಡಲೇ ಶಾಸಕರ ಕಣ್ಣು; ರಾಜ್ಯಾದ್ಯಂತ ವ್ಯಾಪಕ ವಿರೋಧ

ಕೆಪಿಎಸ್ ಶಾಲೆಗಳಿಗೆ  ಶಾಲಾಭಿವೃದ್ಧಿ ಸಮೀತಿ

ಕೆಪಿಎಸ್ ಶಾಲೆಗಳಿಗೆ 2 ಕೋಟಿ ರೂ. ಅನುದಾನ ಲಭ್ಯವಾಗುತ್ತಿದ್ದಂತೆ ಪೋಷಕ ಪ್ರತಿನಿಧಿಗಳನ್ನು ಹೊರತುಪಡಿಸಿ ಶಾಸಕರನ್ನು ಶಾಲಾಭಿವೃದ್ಧಿ ಸಮೀತಿಯ ಅಧ್ಯಕ್ಷರನ್ನಾಗಿಸಿ ಸರಕಾರ ಆದೇಶ ನೀಡಿರುವುದಕ್ಕೆ ರಾಜ್ಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಹಣ ಬಂದಕೂಡಲೇ ಜನಪ್ರತಿನಿಧಿಗಳ ಕಣ್ಣು ಕುಕ್ಕುತ್ತದೆ ಎಂದು ಸಾರ್ವಜನಿಕರು, ಸಾಮಾಜಿಕ ಕಾರ್ಯಕರ್ತರು ಆರೋಪಿಸಿದ್ದಾರೆ.

ಈ ಕುರಿತು ಕಾರವಾರದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ನೀಡಿರುವ ಪತ್ರಿಕಾ ಪ್ರಕಟಣೆ ಇಲ್ಲಿದೆ –

ಪೂರ್ವ ಪ್ರಾಥಮಿಕದಿಂದ ೧೨ ನೇ ತರಗತಿಯವರೆಗೆ ಗುಣಾತ್ಮಕ ಶಿಕ್ಷಣ ಒದಗಿಸಲು ಪ್ರಾರಂಭಿಸಿರುವ ಕೆ ಪಿ ಎಸ್ ಶಾಲೆಗಳಲ್ಲಿ ಈ ಹಿಂದೆ ಶಿಕ್ಷಣ ಹಕ್ಕು ಕಾಯಿದೆ ಹಾಗು ನಿಯಮಗಳ ಅನ್ವಯ ಪಾಲಕರಿಂದ ಆಯ್ಕೆಯಾದ ಪೋಷಕ ಪ್ರತಿನಿಧಿಯೊಬ್ಬರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡುವಂತೆ
೨೬ .೧೦.೨೦೨೧ ರಂದು ಹೊರಡಿಸಿದ ಸರಕಾರೀ ಆದೇಶದಲ್ಲಿ ತಿಳಿಸಲಾಗಿತ್ತು .

ಇದು ಕಾಯಿದೆ , ನಿಯಮ ಮತ್ತು ಸುತ್ತೋಲೆಗಳ ಅನ್ವಯ ಸರಿಯಾದ ಕ್ರಮಬದ್ಧ ತೀರ್ಮಾನವಾಗಿತ್ತು.  ಇದರ ಜೊತೆಗೆ ಕ್ಷೇತ್ರದ ಶಾಸಕರು ಸಮಿತಿಯಲ್ಲಿ ಗೌರವಾಧ್ಯಕ್ಷರಾಗಿ ಇರುವಂತೆ ತಿಳಿಸಲಾಗಿತ್ತು .

ಇದಾದ ನಂತರ ಪ್ರತೀ ಕೆ ಪಿ ಎಸ್ ಶಾಲೆಗಳಿಗೆ ಅಭಿವೃದ್ಧಿಗಾಗಿ ೨ ಕೋಟಿ ಹಣ ಮಂಜೂರಾದ ಸುದ್ದಿ ಕೇಳಿದಾಕ್ಷಣ ಶಾಸಕರು ತಮ್ಮ ಅಧಿಕಾರ ದುರಪಯೋಗಪಡಿಸಿಕೊಂಡು ಸರಕಾರದ ಮೇಲೆ ಒತ್ತಡ ಹಾಕಿ ಹಿಂದಿನ ಕ್ರಮಬದ್ಧ ತೀರ್ಮಾನವನ್ನು ಅಸಿಂಧುಗೊಳಿಸಿ ಶಾಸಕರೇ ಅಧ್ಯಕ್ಷರಾಗಬೇಕೆಂಬ ತಿದ್ದುಪಡಿ ಆದೇಶವನ್ನು ದಿನಾಂಕ ೩೧.೦೧.೨೦೨೨ ರಂದು ಸರಕಾರ ಹೊರಡಿಸುವಂತೆ ಮಾಡಿದ್ದಾರೆ .

ಇದು ಅತ್ಯಂತ ಖಂಡನೀಯ . ಕಾನೂನಿನ ಅನ್ವಯ ಪೋಷಕರು ಅಧ್ಯಕ್ಷರಾಗ ಬೇಕಾದ ಜಾಗದಲ್ಲಿ ಕಾನೂನು ಬಾಹಿರವಾಗಿ ಶಾಸಕರನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ಕೇವಲ ಅಲ್ಲಿರುವ ಹಣವನ್ನು   ದುರಪಯೋಗಪಡಿಸಿಕೊಂಡು ಹಣ ಮಾಡುವ ಉದ್ದೇಶವಾಗಿದೆ. ಶಾಸಕರನ್ನು ಶಾಲೆಯಲ್ಲಿ ಅಧ್ಯಕ್ಷರನ್ನಾಗಿ ಕೂರಿಸುವ ಈ ಧಿಡೀರ್ ಆದೇಶ ಭ್ರಷ್ಟಾಚಾರಕ್ಕೆ ದಾರಿಮಾಡಿ , ಪಕ್ಷ ರಾಜಕಾರಣಕ್ಕೆ ಎಡೆಮಾಡಿಕೊಟ್ಟು ,ಎಸ್ ಡಿ ಎಂ ಸಿ ಗಳ ರಚನೆಯ ಮೂಲ ಉದ್ದೇಶವನ್ನೇ ಬುಡಮೇಲು ಮಾಡುತ್ತದೆ. ಶಾಸಕರ ಹಿಂಬಾಗಿಲನ ಈ ಪ್ರವೇಶ ಸಮುದಾಯದ, ಪೋಷಕರ ಸಹಭಾಗಿತ್ವವನ್ನು ನೆಪಮಾತ್ರ ಹಾಗು ನಾಮಕಾವಸ್ತೆಯಾಗಿಸುತ್ತದೆ . ಹಣ ಬರುವಕಡೆಗೆಲ್ಲಾ ರಾಜಕಾರಣಿಗಳು ಇರಬೇಕೆಂದು ಆದೇಶವನ್ನು ಮಾಡುವುದೇ. ದುರುದ್ದೇಶದ ಲಾಭಕ್ಕಾಗಿ ಎಂದು ಹಿಂದಿನ ಅನುಭವಗಳು ಮನವರಿಕೆ ಮಾಡಿವೆ .

ಪ್ರತಿಭಟಿಸಬೇಕಾದ ಮುಗ್ದ ಪೋಷಕರು ಶಾಸಕರಿಗೆ ಹೆದರಿ ತಮ್ಮ ಹಕ್ಕನ್ನು ಕಸಿದರೂ ಪ್ರತಿಭಟಿಸಲಾಗದೆ ಅಸಹಾಯಕರಾಗಿದ್ದಾರೆ. ಸರಕಾರ ಮೊದಲಿದ್ದಂತೆ ಆಯಾ ಶಾಲೆಯ ಪೋಷಕ ಪ್ರತಿನಿಧಿಗಳೇ ಕೆಪಿಎಸ್ ಶಾಲಾಭಿವೃದ್ಧಿ ಸಮೀತಿಗಳ ಅಧ್ಯಕ್ಷರಾಗಿಸಬೇಕು.

“ಈ ಕಾನೂನು ಬಾಹಿರ ಆದೇಶವನ್ನು ಕೂಡಲೇ ಹಿಂದಕ್ಕೆ ಪಡೆದು ೨೬.೧೦.೨೦೨೧ ರ ಆದೇಶವನ್ನು ಯಥಾವತ್ತಾಗಿ ಜಾರಿಗೊಳಿಸಬೇಕೆಂದು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಸರಕಾರವನ್ನು ಆಗ್ರಪಡಿಸುತ್ತದೆ”

 —ಶಾಂತಿ ಎಮ್ ಮುಂಡರಗಿ
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಕಾರವಾರ ಜಿಲ್ಲೆ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button