Kannada NewsLatest

 ವಾರದಲ್ಲಿ ಎರಡನೇ ಘಟನೆ: ಅಲಾತ್ರಿ ಹಳ್ಳದಲ್ಲಿ ಬೆಳಗಾವಿ ಯುವಕನ ಸಾವು

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಕಳೆದ ಭಾನುವಾರ ನ.೧೫ರ ದೀಪಾವಳಿ ಹಬ್ಬದಂದು ಪಟ್ಟಣದ ಇಬ್ಬರು ಯುವಕರು ತಾಲೂಕಿನ ಮಂತುರ್ಗಾ ಗ್ರಾಮದ ಬಳಿಯ ಅಲಾತ್ರಿ ಹಳ್ಳದಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಇನ್ನೂ ಜನಮಾನಸದಲ್ಲಿ ಹಸಿಯಾಗಿರುವ ಸಂದರ್ಭದಲ್ಲೇ ಭಾನುವಾರ ನ.೨೨ರಂದು ಅದೇ ಸ್ಥಳದಲ್ಲಿ ಬೆಳಗಾವಿಯ ಯುವಕನೋರ್ವ ಮೃತಪಟ್ಟಿದ್ದಾನೆ.

ಬೆಳಗಾವಿಯ ಯಳ್ಳೂರ ರಸ್ತೆಯಲ್ಲಿರುವ ಕೆಎಲ್‌ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆಯಲ್ಲಿ ಎಕ್ಸ್-ರೇ ಟೆಕ್ನಿಶಿಯನ್ ಎಂದು ಕಾರ್ಯನಿರ್ವಹಿಸುತ್ತಿದ್ದ ವಡಗಾಂವ ನಿವಾಸಿ ಮಂಜುನಾಥ ಮಲ್ಲಿಕಾರ್ಜುನ ಸಾತಪುತೆ (೨೮) ಮೃತ ದುರ್ದೈವಿ.
ಮಂಜುನಾಥ ತನ್ನ ಏಳೆಂಟು ಗೆಳೆಯರೊಂದಿಗೆ ವಾರಾಂತ್ಯದ ಮೋಜು-ಮಸ್ತಿಗಾಗಿ ಭಾನುವಾರ ಮಧ್ಯಾಹ್ನ ಅಲಾತ್ರಿ ಹಳ್ಳದ ಬಳಿ ಆಗಮಿಸಿದ್ದರು. ಮದ್ಯ ಸೇವಿಸಿದ ಗೆಳೆಯರೆಲ್ಲರೂ ಈಜಲು ನೀರಿಗೆ ಇಳಿದಿದ್ದರು. ಇವರಲ್ಲಿ ಮಂಜುನಾಥ ನೀರಿನಲ್ಲಿ ಈಜುತ್ತಿದ್ದಾಗ ಸೆಳವಿಗೆ ಸಿಲುಕಿದ್ದನ್ನು ಗಮನಿಸಿದ ಸ್ಥಳೀಯರು ಈ ವಿಷಯವನ್ನು ಅಗ್ನಿಶಾಮಕದವರಿಗೆ ತಿಳಿಸಿದ್ದರು. ಘಟನಾ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕದಳದ ಸಿಬ್ಬಂದಿ ನೀರಿನಲ್ಲಿ ಮುಳುಗಿದ್ದ ಮಂಜುನಾಥನನ್ನು ಮೇಲೆತ್ತಿ ಚಿಕಿತ್ಸೆಗಾಗಿ ಸ್ಥಳೀಯ ತಾಲೂಕು ಆಸ್ಪತ್ರೆಗೆ ದಾಖಲಿಸಿದಾದರೂ ಅಷ್ಟರಲ್ಲೇ ಅವರು ಮೃತಪಟ್ಟಿದ್ದರು ಎಂದು ಮೂಲಗಳು ತಿಳಿಸಿವೆ. ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಸಾರ್ವಜನಿಕರ ನಿಷೇಧಕ್ಕೆ ಆಗ್ರಹ

ಒಂದು ವಾರದ ಅಂತರದಲ್ಲಿ ಮೂವರು ಸಾವನ್ನಪ್ಪಿದ ಅಲಾತ್ರಿ ಹಳ್ಳದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಬೇಕು ಎಂದು ತಾಲೂಕಿನ ಸಾರ್ವಜನಿಕರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಅರಣ್ಯ ಇಲಾಖೆಯ ಅಧೀನದಲ್ಲಿರುವ ಅಲಾತ್ರಿ ಹಳ್ಳದ ಸುತ್ತಮುತ್ತ ಮದ್ಯಸೇವನೆ, ಮಾದಕ ವಸ್ತುಗಳ ಉಪಯೋಗ, ಅಕ್ರಮ ಮರಳುಗಾರಿಕೆ ಸೇರಿದಂತೆ ಹಲವು ಅಕ್ರಮಗಳು ನಡೆಯುತ್ತಿದ್ದು, ಪ್ರತಿ ವಾರಾಂತ್ಯ ಪಡ್ಡೆ ಹುಡುಗರು ಅಲಾತ್ರಿ ಪ್ರದೇಶಕ್ಕೆ ತೆರಳಿ ಮೋಜು-ಮಸ್ತಿ ಮಾಡುತ್ತಿದ್ದಾರೆ. ಹೀಗಾಗಿ ಅಲಾತ್ರಿ ಹಳ್ಳದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿ ಸ್ಥಳದಲ್ಲಿ ಬಿಗಿ-ಬಂದೋಬಸ್ತ್ ಏರ್ಪಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತರಾದ ಮಹಾಂತೇಶ ರಾಹುತ, ಮಲ್ಲೇಶಪ್ಪ ಬೆನಕಟ್ಟಿ ಹಾಗೂ ಇತರರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button