ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಚಿಕ್ಕೋಡಿಯ ರಾಮನಗರ ನಿವಾಸಿಯಾದ ಸುನೀತಾ ಮಹಾದೇವ ಚವಾಣ ಎಂಬ ಮಹಿಳೆಯು ಹೊಟ್ಟೆನೋವು ಬಂದು ನಿಪ್ಪಾಣಿಯಲ್ಲಿದ್ದ ಖಾಸಗಿ ವೈದ್ಯರ ಬಳಿ ತಪಾಸಣೆಗಾಗಿ ಹೋಗಿದ್ದಳು. ವೈದ್ಯರು ಗರ್ಭಾಶಯದ (ಫೆಬ್ರೋಯ್ಡ) ತೊಂದರೆಯಿರುವುದಾಗಿಯೂ , ಅವಳು ಬಡಕುಟುಂಬದವಳಾಗಿರುವುದರಿಂದ ಖಾಸಗಿ ಆಸ್ಪತ್ರೆಯಲ್ಲಿ ಬಹಳ ಖರ್ಚು ಬರುವುದಾಗಿ ತಿಳಿಸಿ, ಸರ್ಕಾರಿ ಆಸ್ಪತ್ರೆಯಲ್ಲಿ ಮಾಡಿಸಿಕೊಳ್ಳಬಹುದು ಎಂದು ಸಲಹೆ ನೀಡಿದ್ದರು.
ಅವಳು ದಿ:೨/೬/೨೦೧೫ ರಂದು ಸರ್ಕಾರಿ ಸಿವಿಲ್‌ಆಸ್ಪತ್ರೆ ಹುಕ್ಕೇರಿ ಯಲ್ಲಿ ತಪಾಸಣೆ ಮಾಡಿಸಿದಳು. ಆಸ್ಪತ್ರೆಯಲ್ಲಿದ್ದ ಡಾ:ಜಗದೀಶ ತುಬಚಿ ಎನ್ನುವ ವೈದ್ಯಾಧಿಕಾರಿ ಅವಳಿಗೆ ದಿ: ೨/೬/೨೦೧೫ ರಂದು ಗರ್ಭಾಶಯದ ಶಸ್ತ್ರಚಿಕಿತ್ಸೆ ಮಾಡಿದರು. ದುರ್ದೈವವಶಾತ್ ಶಸ್ತ್ರ್ರಚಿಕಿತ್ಸೆಯಿಂದ ಅವಳಿಗೆ ಬೇರೆ ರೀತಿಯ ಆರೋಗ್ಯ ಸಮಸ್ಯೆ ಎದುರಾಯಿತು.
ಹೊಟ್ಟೆ ನೋವು ಅಲ್ಲದೇ ಮೂತ್ರ ವಿಸರ್ಜನೆ ತೊಂದರೆ ಶುರುವಾಯಿತು. ಈ ಬಗ್ಗೆ ಮತ್ತೊಮ್ಮೆ ಡಾಕ್ಟರ್ ಹತ್ತಿರ ಹೋಗಿ ತೋರಿಸಿದಾಗ ವೈದ್ಯರು ಆಪರೇಶನ್ ಆದಾಗ ಸ್ಪಲ್ವ ದಿನ ನೋವಿರುತ್ತದೆ. ನೋಡೋಣ ಎಂದು ಹಾರಿಕೆ ಉತ್ತರ ನೀಡಿದರು. ಪಿರ‍್ಯಾದಿದಾರಳಿಗೆ ನೋವು ಹೆಚ್ಚಾಗಿ , ಅನುಭವಿಸಲು ಸಾಧ್ಯವಾಗದೇ ಅದೇ ವೈದ್ಯರ ಬಳಿ ಪುನ: ಹೋಗಿ ತೋರಿಸಲಾಗಿ , ಅವರು ತಾವು ಆಪರೇಶನ್ ಮಾಡುವಾಗ ತೊಂದರೆಯಾಗಿರಬಹುದು, ಹೀಗಾಗಿ ನೀವು ಬೆಳಗಾವಿ ಜಿಲ್ಲಾ ಸಿವಿಲ್ ಆಸ್ಪತ್ರೆಗೆ ಹೋಗಲು ತಿಳಿಸಿದರು.
ಅವರು ಹೇಳಿದಂತೆ ಜಿಲ್ಲಾ ಸಿವಿಲ್ ಆಸ್ಪತ್ರೆಗೆ ಹೋಗಿ ತೋರಿಸಲಾಗಿ ಅಲ್ಲಿಯೂ ಸಹ ಸರಿಯಾದ ಚಿಕಿತ್ಸೆ ಸಿಗಲಿಲ್ಲ. ಯುರಿನ್ ಸರಿಯಾಗಿ ಪಾಸ್ ಆಗದೇ ಪಿರ‍್ಯಾದಿದಾರಳು ಬಹಳ ಕಷ್ಟ ಅನುಭವಿಸಿ ಜೀವ ಭಯದಿಂದ , ಕೆ.ಎಲ್.ಇ ಆಸ್ಪತ್ರೆಯಲ್ಲಿ ಮೇಲಿಂದ ಮೇಲೆ ಇನ್ ಡೋರ್ ಪೇಷೆಂಟ ಆಗಿ ಚಿಕಿತ್ಸೆ ಪಡೆಯಬೇಕಾಯಿತು.
ಅಲ್ಲಿ ಮತ್ತೊಮ್ಮೆ ಒಂದು ಶಸ್ತ್ರಚಿಕಿತ್ಸೆ ಮಾಡಿದರು. ಆರ್ಥಿಕ ಸಮಸ್ಯೆಯಿದ್ದರೂ ಸಹ ಲಕ್ಷಾಂತರ ಹಣ ಖರ್ಚುಮಾಡಬೇಕಾಯಿತು. ಆದಾಗ್ಯೂ ಸಹ ಪಿರ‍್ಯಾದಿದಾರಳ ಆರೋಗ್ಯ ಸರಿಹೋಗಿಲ್ಲ. ಸರ್ಕಾರಿ ವೈದ್ಯರ ನಿರ್ಲಕ್ಷ್ಯತನದಿಂದ ಪಿರ‍್ಯಾದಿದಾರಳು ಇದುವರೆಗೂ ಅನಾರೋಗ್ಯದಿಂದ ಬಳಲುತ್ತಿದ್ದು, ವೈದ್ಯರ ನಿರ್ಲಕ್ಷ್ಯತನದಿಂದ ಉಂಟಾದ ಆರೋಗ್ಯ ಸಮಸ್ಯೆಗಳಿಗೆ ಮಾನಸಿಕವಾಗಿ ನೊಂದು, ಪರಿಹಾರ ಕೊಡಿಸುವಂತೆ ಕೋರಿ ಬೆಳಗಾವಿ ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿ ೩/೮/೨೦೧೭ ರಂದು ದೂರು ನಂ ೨೬೧/೨೦೧೭ ರಡಿಯಲ್ಲಿ ದಾಖಲಿಸಿದ್ದಳು.
ಬೆಳಗಾವಿ ಹೆಚ್ಚುವರಿ ಜಿಲ್ಲಾ ವೇದಿಕೆಯು ಅವಳ ದೂರನ್ನು ದಾಖಲಿಸಿಕೊಂಡು ಎದುರುದಾರರಾದ ಡಾ. ಜಗದೀಶ ತುಬಚಿ , ವೈದ್ಯಾಧಿಕಾರಿ ಹುಕ್ಕೇರಿ ಸಿವಿಲ್ ಆಸ್ಪತ್ರೆ ಇವರಿಗೆ ಹಾಗೂ ಸರ್ಕಾರಿ ಸಿವಿಲ್ ಆಸ್ಪತ್ರೆ ಹುಕ್ಕೇರಿ ಇವರಿಗೆ ನೋಟಿಸ್ ಜಾರಿ ಮಾಡಿತ್ತು. ಎದುರುದಾರರು ವೇದಿಕೆಯ ಮುಂದೆ ಹಾಜರಾಗಿ ತಮ್ಮ ತಕರಾರು ಸಲ್ಲಿಸಿದರು. ವೇದಿಕೆಯು ಅವರ ವಾದ ವಿವಾದಗಳನ್ನು ಆಲಿಸಿತ್ತು.
ವೈದ್ಯರ ಸೇವಾ ನ್ಯೂನತೆಯಿಂದ ಪಿರ‍್ಯಾದಿದಾಳು ಆರೋಗ್ಯ ಮತ್ತಷ್ಟು ಕೆಟ್ಟಿರುವುದಾಗಿ ವೇದಿಕೆಯು ಅಭಿಪ್ರಾಯ ಪಟ್ಟಿತು. ವೈದ್ಯಾಧಿಕಾರಿಗಳ ಸೇವಾ ನ್ಯೂನತೆ ಎಸಗಿರುವುದರಿಂದ ಪಿರ‍್ಯಾದಿದಾರಳಿಗೆ ಪರಿಹಾರವಾಗಿ ರೂ ೩,೦೦,೦೦೦/- ಗಳನ್ನು ಮತ್ತು ರೂ:೨,೦೦೦/-ಗಳ ಖರ್ಚನ್ನು ಆದೇಶ ಹೊರಡಿಸಿ ೪೫ ದಿನದೊಳಗೆ ಪಿರ‍್ಯಾದಿದಾರಳಿಗೆ ಕೊಡುವಂತೆಯೂ ಇದಕ್ಕೆ ತಪ್ಪಿದಲ್ಲಿ ಪರಿಹಾರ ಮೊತ್ತವನ್ನು ಶೇಕಡಾ ೯ ರಂತೆ ಬಡ್ಡಿಯನ್ನು ಸೇರಿಸಿ ಕೊಡಲು ಆದೇಶ ಹೊರಡಿಸಿದೆ.
ಆದೇಶವನ್ನು ಹೆಚ್ಚುವರಿ ಜಿಲ್ಲಾ ವೇದಿಕೆಯ ಅಧ್ಯಕ್ಷರಾದ ಏಕತಾ ಹೆಚ್.ಡಿ. ಹಾಗೂ ಸದಸ್ಯರಾದ ಜಯಶ್ರೀ ಕಾಜಗಾರ ಇವರ ಒಮ್ಮತ ಅಭಿಪ್ರಾಯದೊಂದಿಗೆ ಹೊರಡಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ