
ಪ್ರಗತಿವಾಹಿನಿ ಸುದ್ದಿ : ವಾರದ ಹಿಂದೆ ಜನಿಸಿದ ಗಂಡು ಮಗುವನ್ನು ಯಾರೋ ನಿರ್ಜನ ಪ್ರದೇಶದಲ್ಲಿ ಬಿಟ್ಟು ಹೋಗಿರುವ ಘಟನೆ ದೊಡ್ಡಬಳ್ಳಾಪುರದ ತಿರುಮಗೊಂಡನಹಳ್ಳಿ ಬಳಿ ನಡೆದಿದೆ.
ಖಾಲಿ ಲೇಔಟ್ ನಲ್ಲಿ ಮನೆಗಳು ಇಲ್ಲದ ಕಾರಣ ಪ್ರದೇಶ ನಿರ್ಜನವಾಗಿತ್ತು. ಯಾರೋ ಈ ಸಮಯದಲ್ಲಿ ಮಗುವನ್ನು ತಂದು ಇಟ್ಟು ಹೋಗಿರಬೇಕೆಂದು ಶಂಕಿಸಲಾಗಿದೆ. ಮಗು ಅಳುತ್ತಿರುವ ಶಬ್ದವು ದಾರಿಯಲ್ಲಿ ಹೋಗುತ್ತಿದ್ದ ಯುವಕರಿಗೆ ಕೇಳಿಸಿತ್ತು. ಕೂಡಲೇ ಅವರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ ಮಗು ಪತ್ತೆಯಾಗಿದೆ.
ಯುವಕರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ, ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಿ ರಕ್ಷಣೆ ಮಾಡಲಾಗಿದೆ. ಮಗುವಿಗೆ ಯಾವುದೇ ಪ್ರಾಣಾಪಾಯವಿಲ್ಲ ಎಂದು ತಿಳಿದುಬಂದಿದ್ದು, ಮಗುವಿನ ತಂದೆ-ತಾಯಿ ಹುಡುಕಾಟದಲ್ಲಿ ಪೊಲೀಸರು ನಿರತರಾಗಿದ್ದಾರೆ.


