ಪ್ರಗತಿವಾಹಿನಿ ಸುದ್ದಿ, ಶಿರಸಿ: ಇಲ್ಲಿಯ ಪ್ರತಿಷ್ಠಿತ ತೋಟಗಾರ್ಸ್ ಸೇಲ್ ಸೊಸೈಟಿ (ಟಿಎಸ್ಎಸ್) ಆಡಳಿತ ಮಂಡಳಿಗೆ ನಡೆಯ ಚುನಾವಣೆಯಲ್ಲಿ ಹಾಲಿ ಆಡಳಿತ ಮಂಡಳಿ ತೀವ್ರ ಹಿನ್ನಡೆ ಅನುಭವಿಸಿದ್ದು, 15ರಲ್ಲಿ 14 ಸ್ಥಾನಗಳಲ್ಲಿ ಗೋಪಾಲಕೃಷ್ಣ ವೈದ್ಯ ಬಣ ಗೆಲುವು ಸಾಧಿಸಿದೆ.
ಸೊಸೈಟಿಯ 15 ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆಯಿತು. ಬೆಳಗ್ಗೆ 9 ಗಂಟೆಯಿಂದ ಮತದಾನ ಪ್ರಕ್ರಿಯೆ ನಡೆದು ಸಂಜೆ 4 ಗಂಟೆಗೆ ಮುಕ್ತಾಯವಾಯಿತು. 5,485 ಶೇರು ಸದಸ್ಯರಲ್ಲಿ ಸುಮಾರು 3,145 ಷೇರು ಸದಸ್ಯರು ಮತದಾನ ಮಾಡಿದರು.
ಸಂಸ್ಥೆಯ ಹಾಲಿ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಬಣ ಹಾಗೂ ಮುಂಡಗನಮನೆ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಬಣದ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿತ್ತು. ಮಂಡಳಿಯ 15 ಸ್ಥಾನಗಳಿಗೆ 32 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ತಡರಾತ್ರಿ 2.30ರವರೆಗೆ ನಡೆದ ಮತ ಎಣಿಕೆಯಲ್ಲಿ ಗೋಪಾಲಕೃಷ್ಣ ವೈದ್ಯ, ಗಣಪತಿ ಜೋಶಿ, ದತ್ತಗುರು ಹೆಗಡೆ ಕಡವೆ, ಪುರುಷೋತ್ತಮ ಹೆಗಡೆ, ಎಂ.ಎನ್.ಭಟ್, ವಸಂತ ಹೆಗಡೆ, ಅಶೋಕ ಹೆಗಡೆ, ರವೀಂದ್ರ ಹೆಗಡೆ ಹಿರೇಕೈ, ರವಿ ಹಳದೋಟ, ಕೃಷ್ಣ ಹೆಗಡೆ, ವೀರೇಂದ್ರ ಗೌಡರ್, ದೇವೇಂದ್ರ ನಾಯ್ಕ, ನಿರ್ಮಲಾ ಭಟ್, ವಸುಮತಿ ಭಟ್, ರಾಮಕೃಷ್ಣ ಹೆಗಡೆ ಆಯ್ಕೆಯಾದರು.
ಹಾಲಿ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಒಂದು ಹಂತದಲ್ಲಿ 2 ಮತಗಳಿಂದ ಪರಾಭವ ಅನುಭವಿಸಿದರು ಎಂದುಕೊಳ್ಳಲಾಗಿತ್ತು. ಆದರೆ ಅಂತಿಮವಾಗಿ 4 ಮತಗಳ ಅಂತರದಿಂದ ಗೆಲುವು ಸಾಧಿಸಿದರು.
ಗೋಪಾಲಕೃಷ್ಣ ವೈದ್ಯ ಮುಂಡಗನಮನೆ ಸಹಕಾರಿ ಸಂಘದ ಅಧ್ಯಕ್ಷರಾಗಿ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ರೈತರ ಜೀವನಾಡಿಯಾಗಿರುವ ಟಿಎಸ್ಎಸ್ ಉಳಿಸುವುದು ನಮ್ಮ ಉದ್ದೇಶವಾಗಿತ್ತು. ಹಾಗಾಗಿ ನಾವು ಸ್ಪರ್ಧೆ ಮಾಡಿದೆವು. ಸದಸ್ಯರು ನಮ್ಮ ಮೇಲೆ ವಿಶ್ವಾಸವಿಟ್ಟು ಮತದಾನ ಮಾಡಿದ್ದಾರೆ. ಇಷ್ಟೊಂದು ದೊಡ್ಡ ಗೆಲುವನ್ನು ನಿರೀಕ್ಷೆ ಮಾಡಿರಲಿಲ್ಲ. ಮತದಾರರು ಇಟ್ಟ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ತೋಟಿಗರ ಪರವಾಗಿ ಆಡಳಿತವನ್ನು ನಿರೀಕ್ಷಿಸಬಹುದು ಎಂದು ಗೋಪಾಲಕೃಷ್ಣ ವೈದ್ಯ ಪ್ರಗತಿವಾಹಿನಿಗೆ ತಿಳಿಸಿದರು.
ಟಿಎಸ್ಎಸ್ ಚುನಾವಣೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಭಾರಿ ಕುತೂಹಲ ಮೂಡಿಸಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ