Kannada NewsLatest

ನಳೀನ್ ಕುಮಾರ್ ಕಟೀಲ್ ಅಪ್ರಬುದ್ಧ ರಾಜಕಾರಣಿ; ಬಿಜೆಪಿ ಅಧ್ಯಕ್ಷರಾಗಲೂ ಯೋಗ್ಯರಲ್ಲ; ಸಿದ್ದರಾಮಯ್ಯ ವಾಗ್ದಾಳಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ನಳಿನ್ ಕುಮಾರ್ ಕಟೀಲ್ ಬಿಜೆಪಿ ಅಧ್ಯಕ್ಷ ಆಗುವುದಕ್ಕೆ ಲಾಯಕ್ ಅಲ್ಲ. ಕಟೀಲ್ ಪ್ರಬುದ್ಧ ರಾಜಕಾರಣಿಯೂ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಾಜಕೀಯವಾಗಿ ನಮ್ಮ ವಿರೋಧಿಗಳು. ಅವರು ಹೇಳಿದ್ದು ಸತ್ಯ ಅಂತಾ ನಾವು ನಂಬಬೇಕಾ? ಕಟೀಲ್ ಆಧಾರ ರಹಿತ ಆರೋಪ ಮಾಡುತ್ತಾರೆ. ಸುಳ್ಳು ಹೇಳುತ್ತಾರೆ. ಅವರು ಬಿಜೆಪಿ ಅಧ್ಯಕ್ಷ ಆಗುವುದಕ್ಕೆ ಲಾಯಕ್ ಅಲ್ಲ. ಬಾಯಿಗೆ ಏನ್ ಏನು ಬರುತ್ತದೋ ಅದನ್ನೇ ಮಾತನಾಡುತ್ತಾರೆ. ಅವರ ಮಾತನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಏಕೆಂದರೆ ಕಟೀಲ್ ಪ್ರಬುದ್ಧ ರಾಜಕಾರಣಿಯೂ ಅಲ್ಲ ಎಂದು ಲೇವಡಿ ಮಾಡಿದರು.

ಪ್ರಧಾನಿ ನರೇಂದ್ರ ಮೋದಿಯವರ ಸಾಧನೆ ನೋಡಿ ಬಿಜೆಪಿಗೆ ಮತ ಹಾಕುತ್ತಾರೆ ಎಂಬ ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ ಅವರು ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪೆಟ್ರೋಲ್‌ ಬೆಲೆ ಹೆಚ್ಚಾಗಿರುವುದು ಒಳ್ಳೆಯದಾ? ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ ಅದು ಒಳ್ಳೆಯದಾ? ಜನರನ್ನು ಸಾಲದ ಸುಳಿಗೆ ಸಿಲುಕಿದ್ದು ಒಳ್ಳೆಯದಾ ಎಂದು ಪ್ರಶ್ನಿಸಿದರು.

ಪಠ್ಯ ಪುಸ್ತಕದಲ್ಲಿ ಉದ್ದೇಶ ಪೂರ್ವಕವಾಗಿ ಅನೇಕ ತಪ್ಪು ಮಾಡಿದ್ದಾರೆ. ಅಂಬೇಡ್ಕರ್ ಬಗ್ಗೆ ಚರಿತ್ರೆಯ ಅಗತ್ಯತೆ ಇದೆ. ಸಂವಿಧಾನ ಶಿಲ್ಪಿ ಎನ್ನುವುದನ್ನು ತೆಗೆದು ಹಾಕಿದರೆ ಹೇಗೆ? ಕುವೆಂಪು ಫೋಟೋ ತೆಗೆದು ಹಾಕಿದರೆ ಅವಮಾನ ಅಲ್ಲವೇ? ನಾರಾಯಣಗುರು, ಬಸವಣ್ಣ, ಸುರಪುರ ನಾಯಕರನ್ನು ಅವಮಾನ ಮಾಡಿ ಪಠ್ಯವನ್ನು ಕೇಸರಿಕರಣ ಮಾಡಲು ಹೋರಟಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

Home add -Advt

ವಿದ್ಯಾರ್ಥಿಗಳಿಗೆ ವೈಚಾರಿಕ ಶಿಕ್ಷಣ ಸಿಗಬೇಕು. ಇತಿಹಾಸ ತಿರುಚುವ ಕೆಲಸ ಮಾಡಬಾರದು. ಮುಖ್ಯಮಂತ್ರಿ, ಶಿಕ್ಷಣ ಸಚಿವರು ತಪ್ಪು ತಿದ್ದುತ್ತೇವೆ ಎಂದಿದ್ದಾರೆ. ಅಂದ ಮೇಲೆ ನಾವೇಲ್ಲಿ ರಾಜಕೀಯ ಮಾಡುತ್ತಿದ್ದೇವೆ. ಸಂವಿಧಾನದ ರಚನಾ ಸಮಿತಿ ಅಧ್ಯಕ್ಷರಾಗಿದ್ದು ಅಂಬೇಡ್ಕರ್. ಅದನ್ನು ಮಕ್ಕಳಿಗೆ ಹೇಳದೇ ಸಮಿತಿಯನ್ನು ವಿಸರ್ಜನೆ ಮಾಡಿ, ಪಠ್ಯ ಮುಂದುವರೆಸಿದರೆ ಹೇಗೆ? ವೈಚಾರಿಕ, ವೈಜ್ಞಾನಿಕ ಮನೋಭಾವ ಇರುವ ವ್ಯಕ್ತಿಯನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ 2023ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂಬ ಬಿಎಸ್‍ವೈ ಹೇಳಿಕೆಗೆ, ಸಿಎಂ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಕಿತ್ತು ಹಾಕಿದ್ದಾರೆ. ಮಗನಿಗೆ ಎಂ ಎಲ್‍ಸಿ ಟಿಕೆಟ್ ಕೊಡಿಸಲು ಆಗಲಿಲ್ಲ. ಯಡಿಯೂರಪ್ಪ ಅವರನ್ನು ಸೈಡ್ ಲೈನ್ ಮಾಡಿ ಬಹಳ ದಿನ ಆಯಿತು ಎಂದರು.

ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ವಿಧಾನ ಪರಿಷತ್ ಸದಸ್ಯ ನಾಗರಾಜ ಯಾದವ, ಮಾಜಿ ಶಾಸಕ ಫಿರೋಜ್ ಸೇಠ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ ಮೊದಲಾದವರು ಇದ್ದರು.

ಬೆಳಗಾವಿ: ಹೆಡ್ಗೆವಾರ್ ಬಗ್ಗೆ ಓದಿದರೆ ಕಾಂಗ್ರೆಸ್ ನವರೂ ಬಿಜೆಪಿಗೆ ಬರ್ತಾರೆ; ಕೈ ನಾಯಕರಿಗೆ ಟಾಂಗ್ ನೀಡಿದ ಸಚಿವ ಮುರುಗೇಶ್ ನಿರಾಣಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button