Kannada NewsLatest

*ಮಹಾರಾಷ್ಟ್ರ ಸರ್ಕಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಖಡಕ್ ವಾರ್ನಿಂಗ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕನ್ನಡಿಗರ ತೀವ್ರ ವಿರೋಧಧ ಹೊರತಾಗಿಯೂ ರಾಜ್ಯದ ಗಡಿಯೊಳಗಿರುವ 865 ಹಳ್ಳಿಗಳಿಗೆ ಆರೋಗ್ಯ ವಿಮೆ ಜಾರಿ ಮಾಡಿರುವ ಮಹಾರಾಷ್ಟ್ರ ಸರ್ಕಾರದ ಕ್ರಮ ಉದ್ಧಟತನದ್ದು. ಇದನ್ನು ಸಹಿಸಲು ಸಾಧ್ಯವೇ ಇಲ್ಲ. ಈ ಆದೇಶವನ್ನು ತಕ್ಷಣ ವಾಪಸ್ ಪಡೆಯದೆ ಇದ್ದರೆ ಪರಿಣಾಮ ನೆಟ್ಟಗಾಗದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಆರೋಗ್ಯ ವಿಮೆ ಯೋಜನೆ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ರಾಜ್ಯದ ಮುಖ್ಯಮಂತ್ರಿಗಳು ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಭರವಸೆ ನೀಡಿದ್ದರು. ಇವರಿಬ್ಬರ ಮಾತಿಗೆ ಮಹಾರಾಷ್ಟ್ರ ಮುಖ್ಯಮಂತ್ರಿಗಳು ಕವಡೆ ಕಾಸಿನ ಕಿಮ್ಮತ್ತು ಕೊಟ್ಟಿಲ್ಲ ಎಂದು ಕಿಡಿಕಾರಿದರು.

ರಾಜ್ಯದ ಗಡಿಯೊಳಗೆ ಆರೋಗ್ಯ ವಿಮೆ ಜಾರಿಗೆ ಮಹಾರಾಷ್ಟ್ರ ಸರ್ಕಾರ ಯತ್ನಿಸಿದಾಗಲೇ ನಾವು ವಿರೋಧಿಸಿದ್ದೆವು. ಅಲ್ಲಿಯ ವರೆಗೆ ತೆಪ್ಪಗಿದ್ದ ರಾಜ್ಯದ ಮುಖ್ಯಮಂತ್ರಿಗಳು ನಮ್ಮ ಒತ್ತಡಕ್ಕೆ ಮಣಿದು ವೀರಾವೇಶದ ಮಾತುಗಳನ್ನಾಡಿದ್ದರು. ಆ ಆವೇಶ, ಬದ್ಧತೆಯನ್ನು ತೋರಿಸಬೇಕಾದ ಕಾಲ ಈಗ ಬಂದಿದೆ.

ಗಡಿ ವಿವಾದ ಇತ್ಯರ್ಥಗೊಳ್ಳುವ ವರೆಗೆ ಎರಡೂ ರಾಜ್ಯಗಳು ವಿವಾದವನ್ನು ಕೆದಕಬಾರದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಾಕೀತು ಮಾಡಿ ಎರಡೂ ರಾಜ್ಯಗಳ ಸದಸ್ಯರನ್ನೊಳಗೊಂಡ ಸಲಹಾ ಸಮಿತಿ ರಚಿಸಿದ್ದರು. ಆ ಸೂಚನೆಯನ್ನೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಧಿಕ್ಕರಿಸಿದ್ದಾರೆ

ಬೆಳಗಾವಿ ಗಡಿವಿವಾದ ನ್ಯಾಯಾಲಯದ ಕಟಕಟೆಯಲ್ಲಿದೆ. ಕನ್ನಡಿಗರಿಗೆ ನ್ಯಾಯ ಸಿಗುತ್ತದೆ ಎನ್ನುವ ಭರವಸೆ ನಮಗೆ ಇದೆ. ಈ ನಡುವೆ ರಾಜಕೀಯ ಲಾಭದ ದುರುದ್ದೇಶದಿಂದ ಮಹಾರಾಷ್ಟ್ರ ಆಗಾಗ ಗಡಿತಂಟೆಯನ್ನು ಕೆದಕುವ ಕಿಡಿಗೇಡಿತನ ಮಾಡುವುದು ಖಂಡನೀಯ. ಕನ್ನಡಿಗರು ಇದನ್ನು ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

https://pragati.taskdun.com/d-k-shivakumarreactionkichch-sudeepcm-basavaraj-bommai-support/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button