Kannada NewsKarnataka NewsLatest

*ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ: ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ 59ನೇ ವರ್ಧಂತಿ ಉತ್ಸವ*

ಪ್ರಗತಿವಾಹಿನಿ ಸುದ್ದಿ: ಶಿರಸಿ: ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ 59ನೇ ವರ್ಧಂತಿ ಉತ್ಸವವನ್ನು ಮಂಗಳವಾರ ಭಕ್ತಿ, ಶ್ರದ್ಧೆ ಹಾಗೂ ಸೇವಾ ಚಟುವಟಿಕೆಗಳೊಂದಿಗೆ ಆಚರಿಸಲಾಯಿತು.


ಉತ್ಸವದ ಅಂಗವಾಗಿ ಮಹಾಸಂಸ್ಥಾನದ ಸುಧರ್ಮ ಸಭಾಭವನದಲ್ಲಿ ಆಯೋಜಿಸಿದ್ದ ಉಚಿತ ರಕ್ತದಾನ ಹಾಗೂ ಆರೋಗ್ಯ ತಪಾಸಣಾ ಶಿಬಿರಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯಿತು. ಸುಮಾರು 100ಕ್ಕೂ ಅಧಿಕ ಮಂದಿ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಂಡರೆ, 40ಕ್ಕೂ ಹೆಚ್ಚು ಮಂದಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿ ಮಾನವೀಯ ಸೇವೆಗೆ ಕೈಜೋಡಿಸಿದರು.

Home add -Advt


ಗ್ರಾಮಾಭ್ಯುದಯ,ಟಿ.ಎಸ್.ಎಸ್. ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ವಿಜ್ಞಾನ ಸಂಸ್ಥೆ, ಪಂಡಿತ ಸಾರ್ವಜನಿಕ ಆಸ್ಪತ್ರೆ, ತಾಲೂಕು ಆರೋಗ್ಯ ಇಲಾಖೆ, ಸೇವಾ ಸಹಕಾರಿ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಶಿಬಿರ ನಡೆಯಿತು. ವೈದ್ಯರಾದ ಡಾ. ವೀರೇಶ್ ಎಸ್. ಬಾಲೆಹೊಸೂರು, ಡಾ. ವೀಣಾ ವೆರ್ಣೇಕರ್, ಡಾ. ಸುಮನ್ ಹಾಗೂ ಇತರ ತಜ್ಞ ವೈದ್ಯರು ಆರೋಗ್ಯ ತಪಾಸಣೆ ನಡೆಸಿ ಅಗತ್ಯ ವೈದ್ಯಕೀಯ ಸಲಹೆ ನೀಡಿದರು.


ವರ್ಧಂತಿ ಉತ್ಸವದ ಅಂಗವಾಗಿ ಅಥರ್ವಶೀರ್ಷ ಪಾರಾಯಣ, ಮಹಾಗಣಪತಿ ಹವನ, ಶ್ರೀಸೂಕ್ತ-ಪುರುಷಸೂಕ್ತ ಪಾರಾಯಣ, ಮಹಾಮೃತ್ಯುಂಜಯ ಜಪ, ಗ್ರಹಶಾಂತಿ, ಆಯುಷ್ಯಚರು ಶಾಂತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಪುರೋಹಿತರಾದ ವೇ.ಮೂ. ಕೃಷ್ಣ ಜೋಶಿ, ವೇ.ಮೂ.ಚಿನ್ಮಯ ಜೋಶಿ ಹಾಗೂ ಇತರ ೫೦ಕ್ಕೂ ಅಧಿಕ ಋತ್ವಿಜರು ಕಾರ್ಯಕ್ರಮ ನಡೆಸಿಕೊಟ್ಟರು. ಯಾಗಶಾಲೆಯಲ್ಲಿ ನಡೆದ ಪೂಜಾ-ಹವನಾದಿ ಧಾರ್ಮಿಕ ವಿಧಿವಿಧಾನಗಳು ಭಕ್ತರ ಸಮ್ಮುಖದಲ್ಲಿ ಸಂಪನ್ನಗೊಂಡವು.


ಸಂಜೆ ನಡೆದ ಸಾಂಸ್ಕೃತಿಕ ಹಾಗೂ ಭಕ್ತಿ ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕಿಯರಾದ ರಾಧಾ ದೇಸಾಯಿ ಹಾಗೂ ಅನುರಾಧಾ ಭಟ್ ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿ ಶ್ರೋತೃಗಳನ್ನು ರಂಜಿಸಿದರು. ಅವರಿಗೆ ಪ್ರಕಾಶ ಹೆಗಡೆ ಹಾಗೂ ಎಂ.ಜಿ. ಭಟ್ಟ ಸಾಥ್ ನೀಡಿದರು.


ಗ್ರಾಮಾಭ್ಯುದಯದ‌ ಅಧ್ಯಕ್ಷ‌ ರಾಮಚಂದ್ರ ಹೆಗಡೆ ಕಂಚನಳ್ಳಿ, ಕಾರ್ಯದರ್ಶಿ ಸಂತೋಷ ಭಟ್ಟ ಕೋಡಿಗಾರ, ಹೇಮಂತ ಹೆಗಡೆ, ಎಂ.ಸಿ.ಹೆಗಡೆ ಶಿರಸಿಮಕ್ಕಿ, ಆರ್.ಎನ್.ಹೆಗಡೆ ಉಳ್ಳಿಕೊಪ್ಪ, ಸುರೇಶ ಹಕ್ಕಿಮನೆ, ಎಂ.ಕೆ.ಹೆಗಡೆ ಗೋಳಿಕೊಪ್ಪ, ಶ್ರೀಧರ ಭಟ್ ಕಳವೆ, ಆರ್.ಎನ್.ಭಟ್ಟ ಸುಗಾವಿ ಹಾಗೂ ಇತರರು ಇದ್ದರು.

Related Articles

Back to top button