Belagavi NewsBelgaum NewsPolitics

*ಕರ್ನಲ್ ಸೋಫಿಯಾ ವಿರುದ್ಧ ಹೇಳಿಕೆ: ಸಚಿವನ ವಿರುದ್ಧ ಬೆಳಗಾವಿಯಲ್ಲೂ ಕೇಸ್ ದಾಖಲು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪಾಕಿಸ್ತಾನದ ವಿರುದ್ಧ ಭಾರತ ಆಪರೇಷನ್ ಸಿಂಧೂರ್ ಮೂಲಕ ಪ್ರತೀಕಾರ ತೀರಿಸಿಕೊಂಡ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಸೇನಾ ಮಾಹಿತಿಯನ್ನು ಹಂಚಿಕೊಂಡಿದ್ದ ಕರ್ನಲ್ ಸೋಫಿಯಾ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಮಧ್ಯಪ್ರದೇಶದ ಸಚಿವ ಹಾಗೂ ಬಿಜೆಪಿ ಮುಖಂಡ ವಿಜಯ್ ಶಾ ವಿರುದ್ಧ ಬೆಳಗಾವಿಯಲ್ಲೂ ಎಫ್‌ಐಆರ್ ದಾಖಲಾಗಿದೆ.

ಬೆಳಗಾವಿಯ ಸೆನ್ ಠಾಣೆಯಲ್ಲಿ ಎಸ್.ಪಿ ಭೀಮಾಶಂಕರ್ ಗುಳೇದ ಅವರ ಸೂಚನೆಯ ಮೇರೆಗೆ ಬಿಜೆಪಿ ಮುಖಂಡ  ವಿಜಯ್ ಶಾ ವಿರುದ್ಧ ಬಿಎನ್ಎಸ್ ಕಾಯ್ದೆ 353, 192ರ ಅಡಿಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.

ಭಾರತ ಆಪರೇಷನ್ ಸಿಂಧೂರ್ ಬಗ್ಗೆ ಕರ್ನಲ್ ಸೋಫಿಯಾ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿದ್ದರು. ದೇಶದ ಮಹಿಳಾ ಸೇನಾಧಿಕಾರಿಗಳ ಬಗ್ಗೆ ದೇಶದಾದ್ಯಂತ ವ್ಯಾಪಕ ಹೆಮ್ಮೆ ಹಾಗೂ ಮೆಚ್ಚುಗೆ ವ್ಯಕ್ತವಾಗುತ್ತಿದ್ದ ಸಂದರ್ಭದಲ್ಲಿ ಸಚಿವ ವಿಜಯ್ ಶಾ ನಮ್ಮ ಹೆಣ್ಣುಮಕ್ಕಳ ಸಿಂಧೂರವನ್ನು ಅಳಿಸಿದವರಿಗೆ ತಕ್ಕ ಪಾಠ ಕಲಿಸಲು ನಾವು ಅವರ ಸಹೋದರಿಯನ್ನೇ ಕಳುಹಿಸಿದ್ದೆವು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಬಿಜೆಪಿ ನಾಯಕನ ಈ ಹೇಳಿಕೆ ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ತಮ್ಮ ಹೇಳಿಕೆ ವಿವಾದದ ಸ್ವರೂಪ ಪಡೆಯುತ್ತಲೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ವಿಜಯ್ ಶಾ ಕ್ಷಮೆಯಾಚಿಸಿ ಸಹೋದರಿ ಸೋಫಿಯಾ ಖುರೇಷಿ ಬಗ್ಗೆ ನಾನು ಕನಸಿನಲ್ಲೂ ಆ ರೀತಿ ಭಾವಿಸಲು ಸಾಧ್ಯವಿಲ್ಲ. ಸೋಫಿಯಾ ಜಾತಿ ಮತ್ತು ಧರ್ಮವನ್ನು ಮೀರಿ ಭಾರತಕ್ಕೆ ಕೀರ್ತಿ ತಂದಿದ್ದಾರೆ ಎಂದು ಹೇಳಿದ್ದರು.

ಇನ್ನು ಸಚಿವ ಹಾಗೂ ಬಿಜೆಪಿ ನಾಯಕ ವಿಜಯ್ ಶಾ ವಿವಾದಾತ್ಮಕ ಹೇಳಿಕೆ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಈ ಎಫ್‌ಐಆರ್ ರದ್ದು ಕೋರಿ ವಿಜಯ್ ಶಾ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದು, ಈ ವೇಳೆ ಸುಪ್ರೀಂ ಕೋರ್ಟ್ ಸಿಜೆಐ ಗವಾಯಿ ಅವರು ಸಚಿವರಿಗೆ ಛೀಮಾರಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button