*ಮೂವರ ಜೀವ ಉಳಿಸಿದ ವಿದ್ಯಾರ್ಥಿನಿ: ಮಾನವೀಯತೆ ಮೆರೆದ ಬಾಲಕಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸನ್ಮಾನ*
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಟಿಳಕವಾಡಿಯ ಕಾಂಗ್ರೆಸ್ ರಸ್ತೆಯ ಮೊದಲನೇ ರೇಲ್ವೆ ಗೇಟ್ ಬಳಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ಮೂವರ ಜೀವ ಉಳಿಸಿ ಮಾನವೀಯತೆ ಮೆರೆದ ಬಾಲಿಕಾ ಆದರ್ಶ ವಿದ್ಯಾಲಯದ 9 ನೇ ತರಗತಿ ವಿದ್ಯಾರ್ಥಿನಿ ಸ್ಪೂರ್ತಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೋಮವಾರ ಸತ್ಕರಿಸಿದರು.
ಸ್ಫೂರ್ತಿ ಹಾಗೂ ಅವಳ ತಂದೆಯ ಸಮಯ ಪ್ರಜ್ಞೆಯನ್ನು ಸಚಿವರು ಮುಕ್ತಕಂಠದಿಂದ ಶ್ಲಾಘಿಸಿದರು.
ಏನಿದು ಪ್ರಕರಣ?
ಆಗಸ್ಟ್ 22ರಂದು ರಾತ್ರಿ 8:45ರ ಸಮಯದಲ್ಲಿ ಟಿಳಕವಾಡಿಯ ಕಾಂಗ್ರೆಸ್ ರಸ್ತೆಯ ಮೊದಲನೇ ರೈಲ್ವೆ ಗೇಟ್ ಬಳಿ ರೈಲುಬರುವ ಸಮಯವಾದ್ದರಿಂದ ರೈಲ್ವೆ ಗೇಟ್ ಹಾಕಲಾಗಿತ್ತು. ಈ ವೇಳೆ ತಂದೆಯ ಕಾರಿನಲ್ಲಿ ವಿದ್ಯಾರ್ಥಿನಿ ಸ್ಪೂರ್ತಿ ಬರುತ್ತಿದ್ದ ವೇಳೆ, ಮಹಿಳೆಯೊಬ್ಬರು ತನ್ನ ಇಬ್ಬರು ಪುಟ್ಟ ಮಕ್ಕಳ ಜೊತೆ ಫೋನ್ ನಲ್ಲಿ ಮಾತನಾಡುತ್ತಾ ಕಣ್ಣೀರಿಡುತ್ತಾ ರೈಲ್ವೆ ಹಳಿ ಬಳಿ ತೆರಳುತ್ತಿರುವುದನ್ನು ಗಮನಿಸಿದ್ದಳು.
ಮಹಿಳೆ ಆತ್ಮಹತ್ಯೆಗೆ ಯತ್ನಿಸಿ ಹಳಿಯತ್ತ ತೆರಳತ್ತಿರಬಹುದು ಎಂಬ ಶಂಕೆ ಸ್ಪೂರ್ತಿಗೆ ವ್ಯಕ್ತವಾಗಿದೆ. ತಕ್ಷಣ ತಂದೆಗೆ ಹೇಳಿ ಕಾರಿನಿಂದ ಇಳಿದ ಸ್ಪೂರ್ತಿ, ಮಹಿಳೆ ರೈಲ್ವೆ ಹಳಿಗೆ ತಲುಪುವುದನ್ನು ತಡೆದು ನಿಲ್ಲಿಸಿದ್ದಾಳೆ. ಮಹಿಳೆಯನ್ನು ಸಮಾಧಾನಪಡಿಸಿದ್ದಾಳೆ. ಅಷ್ಟೊತ್ತಿಗೆ ವಿಷಯ ಸ್ಥಳದಲ್ಲಿದ್ದ ಇತರರಿಗೂ ಗೊತ್ತಾಗಿ ಧಾವಿಸಿ ಬಂದಿದ್ದಾರೆ. ಮಹಿಳೆಯ ಸಂಬಂಧಿಕರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಮಹಿಳೆ ಹಾಗೂ ಆಕೆ ಮಕ್ಕಳ ಬಗ್ಗೆ ಕಾಳಜಿ ವಹಿಸುವಂತೆ ಹೇಳಿಕಳುಹಿಸಿಕೊಡಲಾಗಿದೆ. ವಿದ್ಯಾರ್ಥಿನಿ ಸ್ಫೂರ್ತಿ ಸಮಯ ಪ್ರಜ್ಞೆ ಆತ್ಮಹತ್ಯೆಗೆ ಶರಣಾಗುತ್ತಿದ್ದ ಮಹಿಳೆ ಹಾಗೂ ಇಬ್ಬರ ಪುಟ್ಟಮಕ್ಕಳ ಜೀವ ಉಳಿಸಿದೆ. ಈ ಹಿನ್ನೆಲೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇಂದು ವಿದ್ಯಾರ್ಥಿನಿ ಹಾಗೂ ಆಕೆಯ ತಂದೆಯನ್ನು ಭೇಟಿಯಾಗಿ ಸನ್ಮಾನಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ