Belagavi NewsBelgaum NewsKannada NewsKarnataka NewsNationalPolitics

*ಸಕ್ಕರೆ ಗೋಡೌನ್‌ಗಳಿಗೆ ಬೀಗ ಹಾಕಲು ಚೂನಪ್ಪ ಪೂಜಾರಿ ಕರೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಬ್ಬಿನ ಬೆಲೆ ನಿಗದಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಮತ್ತಷ್ಟು ಬಲ ತುಂಬಲು ರಾಜ್ಯದ ಸಕ್ಕರೆ ಕಾರ್ಖಾನೆಗಳ ಗೋಡೌನ್‌ಗಳಿಗೆ ಬೀಗ ಹಾಕುವಂತೆ ರೈತ ಮುಖಂಡ ಚೂನಪ್ಪ ಪೂಜಾರಿ ಕರೆ ನೀಡಿದ್ದಾರೆ.

ಫೇಸ್‌ಬುಕ್ ಲೈವ್ ಮೂಲಕ ರೈತರನ್ನು ಉದ್ದೇಶಿಸಿ ಮಾತನಾಡಿದ ಪೂಜಾರಿ, ರಾಜ್ಯದ ಯಾವುದೇ ಸಕ್ಕರೆ ಕಾರ್ಖಾನೆಯ ಗೋಡೌನ್‌ಗಳಿಂದ ಸಕ್ಕರೆ ಹೊರ ಸಾಗಿಸಬಾರದು. ರೈತರು ಒಗ್ಗಟ್ಟಿನಿಂದ ಗೋಡೌನ್‌ಗಳಿಗೆ ಬೀಗ ಹಾಕಿ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಸಕ್ಕರೆಯ ಮಾರಾಟ ದರ ಪ್ರತಿ ಕೆ.ಜಿ.ಗೆ ₹50ಕ್ಕಿಂತ ಕಡಿಮೆಯಾಗದಂತೆ ಖಚಿತಪಡಿಸುವುದು ತಮ್ಮ ಪ್ರಮುಖ ಬೇಡಿಕೆಯಾಗಿದೆ. ಈ ಕುರಿತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆ ಕರೆದು ಸೂಕ್ತ ಭರವಸೆ ನೀಡಬೇಕು. ಬೇಡಿಕೆಗೆ ಸ್ಪಷ್ಟ ಭರವಸೆ ಸಿಗುವವರೆಗೆ ಗೋಡೌನ್‌ಗಳ ಬೀಗ ತೆರೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಇದೇ ವೇಳೆ ಬೆಳಗಾವಿ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳ ಗೋಡೌನ್‌ಗಳಿಗೂ ಬೀಗ ಹಾಕುವಂತೆ ರೈತರಿಗೆ ಕರೆ ನೀಡಲಾಗಿದೆ. ಚೂನಪ್ಪ ಪೂಜಾರಿ ನೇತೃತ್ವದಲ್ಲಿ ಬುಧವಾರ ಬೆಳಿಗ್ಗೆ 10 ಗಂಟೆಗೆ ಸಚಿವ ಸತೀಶ್ ಜಾರಕಿಹೊಳಿ ಒಡೆತನದ ಸತೀಶ್ ಶುಗರ್ಸ್ ಕಾರ್ಖಾನೆಯ ಸಕ್ಕರೆ ಗೋಡೌನ್‌ಗಳಿಗೆ ಬೀಗ ಹಾಕಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈಗಾಗಲೇ ಕಬ್ಬಿನ ಬೆಲೆ ಹೆಚ್ಚಳಕ್ಕಾಗಿ ರೈತರು ತೀವ್ರ ಹೋರಾಟ ನಡೆಸುತ್ತಿದ್ದಾರೆ. ಇದೀಗ ಸಕ್ಕರೆ ಮಾರಾಟ ದರದ ವಿಚಾರವನ್ನೂ ಮುಂದಿಟ್ಟುಕೊಂಡು ಗೋಡೌನ್‌ಗಳಿಗೆ ಬೀಗ ಹಾಕುವ ಎಚ್ಚರಿಕೆ ನೀಡಿರುವುದು ಹೋರಾಟಕ್ಕೆ ಹೊಸ ತಿರುವು ನೀಡಿದೆ. ರೈತರ ಬೇಡಿಕೆಗಳಿಗೆ ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರು ಯಾವ ರೀತಿಯಲ್ಲಿ ಸ್ಪಂದಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

Related Articles

Back to top button