
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಾರ್ಕೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಖಡೇಬಜಾರದಲ್ಲಿ ಕವಡಿಫೀರ ಮೆರವಣಿಗೆ ಸಂದರ್ಭದಲ್ಲಿ ಸೌಂಡಬಾಕ್ಸ್ ಹಚ್ಚಿ ಡ್ಯಾನ್ಸ್ ಮಾಡುವಾಗ ಕಾಲು ಆಕಸ್ಮಿಕವಾಗಿ ತಾಗಿದ್ದನ್ನೇ ನೆಪವಾಗಿಸಿಕೊಂಡು ಗುಂಪು ಕಟ್ಟಿಕೊಂಡು ಬಂದು ತಲವಾರ್ ಬಳಸಿ ಹಲ್ಲೆ ನಡೆಸಿದ ಆರೋಪದ ಮೇಲೆ ಮೂವರು ಬಾಲಕರನ್ನು ಬಂಧಿಸಲಾಗಿದೆ.
ಬಾಲಕರ ಕಾಲಿಗೆ ವ್ಯಕ್ತಿಯ ಕಾಲು ತಾಗಿದ್ದರಿಂದ ಕಾನೂನು ಸಂಘರ್ಷಕ್ಕೊಳಗಾದ ಬಾಲಕರು ಅಕ್ರಮ ಕೂಟ ರಚಿಸಿಕೊಂಡು ರೆಹಾನ ಅಸ್ಲಮ್ ಮುಜಾವರನಿಗೆ ಕಸಾಯಿಗಲ್ಲಿಯಲ್ಲಿ ತಲವಾರದಿಂದ ತಲೆಗೆ, ಬೆನ್ನಿಗೆ ಹೊಡೆದು ಗಂಭೀರ ಸ್ವರೂಪದ ಗಾಯಪಡಿಸಿ ಕೊಲೆ ಮಾಡಲು ಪ್ರಯತ್ನಪಟ್ಟಿದ್ದು ಈ ಬಗ್ಗೆ ಮಾರ್ಕೇಟ್ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ಪೊಲೀಸ್ ಆಯುಕ್ತ ಭೂಷಣ ಬೋರಸೆ, ಡಿಸಿಪಿ ನಾರಾಯಣ ಭರಮನಿ, ಎಸಿಪಿ ಎಸ್.ಡಿ.ಕಟ್ಟಿಮನಿ ಇವರ ಮಾರ್ಗದರ್ಶನದಲ್ಲಿ ಪಿಎಸ್ಐ ಮಹಾಂತೇಶ ಕ ಧಾಮಣ್ಣವರ ನೇತೃತ್ವದಲ್ಲಿ ಪಿಎಸ್ಐ ವಿಠಲ ಎಲ್ ಹಾವನ್ನವರ ಮತ್ತು ಸಿಬ್ಬಂದಿಯವರನ್ನೊಳಗೊಂಡ ವಿಶೇಷ ತಂಡ ರಚಿಸಿ ಮೂರು ಬಾಲಕರನ್ನು ವಶಕ್ಕೆ ಪಡೆದು, ಅವರಿಂದ ಕೃತ್ಯಕ್ಕೆ ಉಪಯೋಗಿಸಿದ ಹರಿತವಾದ ಕಬ್ಬಿಣದ ತಲವಾರವನ್ನು ಜಪ್ತ ಮಾಡಿಕೊಂಡು, ಮೂರು ಬಾಲಕರನ್ನು ಬಾಲನ್ಯಾಯ ಮಂಡಳಿ ಅಧ್ಯಕ್ಷರ ಎದುರು ಹಾಜರುಪಡಿಸಲಾಗಿದೆ.