5 ಕೊಲೆ ಮಾಡಿ ಮರಣದಂಡನೆ ಶಿಕ್ಷೆಯಲ್ಲಿದ್ದ, ಹಿಂಡಲಗಾ ಜೈಲಿನಿಂದ ತಪ್ಪಿಸಿಕೊಂಡಿದ್ದ ಆರೋಪಿಯ ಬಂಧನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೊಳ್ಳೆಗಾಲದಲ್ಲಿ ಏಕಕಾಲಕ್ಕೆ ೫ ಕೊಲೆಗಳನ್ನು ಮಾಡಿ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿ ಹಿಂಡಲಗಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಅಪರಾಧಿ ಮುರಗನ್ ಅಲಿಯಾಸ್ ಮುರಗಾ ತಂದೆ ಅಂಡಿಯಪ್ಪನ್ (೫೧) ಸಾ: ಪೆರಿಯಾರ್ ನಾಗರಾ ಪೊಸ್ಟ: ಕೊಳತ್ತುರ್, ತಾ: ಮೆಟ್ಟೂರ ಜಿ: ಸೇಲಂ ಕಳೆದ ಏಪ್ರಿಲ್ 22 ರಂದು ರಾತ್ರಿ7.30ಕ್ಕ ಹಿಂಡಲಗಾ ಕೇಂದ್ರ ಕಾರಾಗೃಹದ ಗೋಡೆಯ ಮೇಲಿಂದ ಜಿಗಿದು ಪರಾರಿಯಾಗಿದ್ದ.
ಈ ಬಗ್ಗೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಅಪರಾಧಿಯ ಪತ್ತೆಗಾಗಿ ಪೊಲೀಸ್ ಆಯುಕ್ತ ಬಿ. ಎಸ್. ಲೊಕೇಶಕುಮಾರ, ಉಪ ಆಯುಕ್ತರಾದ ಸೀಮಾ ಲಾಟ್ಕರ ಮತ್ತು ಯಶೋಧಾ ಒಂಟಗೋಡಿ ಮಾರ್ಗದರ್ಶನದಲ್ಲಿ ಬೆಳಗಾವಿ ಗ್ರಾಮೀಣ ಠಾಣೆ ಪಿಐ ಸಂಗಮೇಶ ವ್ಹಿ. ಶಿವಯೋಗಿ ಮತ್ತು ಹಿಂಡಲಗಾ ಕಾರಗೃಹ ಜೈಲರ್ ಟಿ. ಕೆ. ಲೊಕೇಶ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.
ತಮಿಳುನಾಡು ರಾಜ್ಯದ ಸೇಲಂ ಜಿಲ್ಲೆಯ ಗೊರವರೆಡ್ಡಿವೂರ ಗ್ರಾಮದಲ್ಲಿ ಆರೋಪಿ ಇರುವುದಾಗಿ ಮಾಹಿತಿ ಬಂದಾಗ ಕಾರ್ಯಪ್ರವೃತ್ತರಾದ ತಂಡದ ಸದಸ್ಯರು ತಲೆಮರೆಸಿಕೊಂಡ ಅಪರಾಧಿಯನ್ನು ಸ್ಥಳೀಯ ಕೊಳತ್ತೂರ ಪೊಲೀಸರ ಸಹಕಾರದೊಂದಿಗೆ ಬಂಧಿಸಿ ಬೆಳಗಾವಿಗೆ ಕರೆತರುವಲ್ಲಿ ಹಾಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಂಡದಲ್ಲಿದ್ದ ಬಿ.ಎಸ್. ನಾಯಿಕ, ಸಿ. ಎಮ್. ಹುಣಚ್ಯಾಳ ಹಾಗೂ ಇತರ ಸಿಬ್ಬಂದಿಯವರ ಕಾರ್ಯವನ್ನು ಕಾರಾಗೃಹ ಎಡಿಜಿಪಿ ಎನ್. ಎಸ್. ಮೇಗರಿಕ ಮ್ತತು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.
ಈ ಹಿಂದೆ ಹಿಂಡಲಗಾ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾಗಿದ್ದ ಟಿ. ಪಿ. ಶೇಷ ಮತ್ತು ಹಾಲಿ ಮುಖ್ಯ ಅಧೀಕ್ಷಕ ಕೃಷ್ಣಕುಮಾರ ಹಾಗೂ ಅವರ ಸಿಬ್ಬಂದಿ ಆರೋಪಿಯ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಶ್ರಮಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ