ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಈ ವರ್ಷದ ರಾಜ್ಯ ಬಜೆಟ್ ನಲ್ಲಿ ಬೆಳಗಾವಿ ರಿಂಗ್ ರಸ್ತೆಗೆ ಕನಿಷ್ಠ 190 ಕೋಟಿ ರೂ. ಮೀಸಲಿರಲಿದೆ ಎಂದು ಶಾಸಕ ಅಭಯ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಸಂಜೆ ಹಿಂದವಾಡಿಯ ಹಿಂದ್ ಸೋಶಿಯಲ್ ಕ್ಲಬ್ ನಲ್ಲಿ ಬೆಳಗಾವಿಯ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಒಕ್ಕೂಟ (ಎಫ್ಒಎಬಿ) ಸಂಘಟಿಸಿದ್ದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಿಂಗ್ ರಸ್ತೆ ಬಹಳ ವರ್ಷದಿಂದ ನನೆಗುದಿಗೆ ಬಿದ್ದಿದೆ. ಈ ಬಗ್ಗೆ ಸಾಕಷ್ಟು ಪ್ರಯತ್ನ ಮಾಡಲಾಗಿದೆ. ಈಚೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಉನ್ನತ ಅಧಿಕಾರಿಗಳನ್ನು ಭೇಟಿಯಾಗಿ ಮನವರಿಕೆ ಮಾಡಿಕೊಟ್ಟಿದ್ದೇನೆ. ಎಲ್ಲರೂ ಒಪ್ಪಿಕೊಂಡಿದ್ದಾರೆ. ಹಾಗಾಗಿ ಬಜೆಟ್ ನಲ್ಲಿ ಕನಿಷ್ಟ 190 ಕೋಟಿ ಮೀಸಲಿರಲಿದೆ ಎಂದರು.
ಬೆಳಗಾವಿ ನಗರದಿಂದ ವಿಮಾನ ನಿಲ್ದಾಣ ಸಂಪರ್ಕಿಸುವ ರಸ್ತೆಯನ್ನು ನಾಲ್ಕು ಲೇನ್ ಅಗಲೀಕರಣ ಮಾಡುವ ಕುರಿತು ಸಹ ಪ್ರಯತ್ನಿಸುತ್ತೇನೆ. ಇದಕ್ಕಾಗಿ 100 ಕೋಟಿ ರೂ. ಮೀಸಲಿಡುವಂತೆ ಕೋರುತ್ತೇನೆ. ಅದೂ ಆಗಲಿದೆ ಎನ್ನುವ ವಿಶ್ವಾಸವಿದೆ ಎಂದು ಅಭಯ ಪಾಟೀಲ ಹೇಳಿದರು.
ಬೆಳಗಾವಿಯ 3ನೇ ರೈಲ್ವೆ ಗೇಟಿ ನಿಂದ ವಿಮಾನ ನಿಲ್ದಾಣದವರೆಗೆ ಅಥವಾ ಕನಿಷ್ಟ ವಿಮಾನ ನಿಲ್ದಾಣ ರಸ್ತೆಯವರೆಗೆ ಫ್ಲೈಓವರ್ ನಿರ್ಮಾಣ ಮಾಡುವ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಬೇಕು ಎಂದು ಹಿರಿಯ ಪತ್ರಕರ್ತ, ಪ್ರಗತಿವಾಹಿನಿ ಸಂಪಾದಕ ಎಂ.ಕೆ.ಹೆಗಡೆ ಪ್ರಸ್ತಾಪಿಸಿದಾಗ, ಕಾಕತಿವರೆಗೂ ಫ್ಲೈಓವರ್ ಮಾಡಬೇಕೆನ್ನುವ ಬೇಡಿಕೆ ಇದೆ. ಆ ಬಗ್ಗೆ ಹಿಂದೊಮ್ಮೆ ಪ್ರಯತ್ನ ನಡೆದಿತ್ತು. ಈಗಲೂ ಪ್ರಯತ್ನ ಮುಂದುವರಿಸುತ್ತೇನೆ ಎಂದು ಅಭಯ ಪಾಟೀಲ ಹೇಳಿದರು.
ಪ್ರೊಫೇಶನಲ್ ಫೋರಮ್ ಅಧ್ಯಕ್ಷ ಡಾ.ಎಚ್.ಬಿ.ರಾಜಶೇಖರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಅಭಯ ಪಾಟೀಲ ಕೇವಲ ಬೆಳಗಾವಿ ದಕ್ಷಿಣ ಕ್ಷೇತ್ರಕ್ಕಷ್ಟೆ ಗಮನ ನೀಡದೆ ಇಡೀ ಬೆಳಗಾವಿ ಅಭಿವೃದ್ಧಿ ಕಡೆಗೆ ಗಮನ ನೀಡಬೇಕು ಎಂದು ಅವರು ವಿನಂತಿಸಿದರು.
64 ಕಿಮೀ ರಿಂಗ್ ರಸ್ತೆಗೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದ್ದು, 11 ಕಿಮೀ ರಿಸರ್ವ್ ಫಾರೆಸ್ಟ್ ಪ್ರದೇಶ ಬಿಟ್ಟು ಉಳಿದೆಡೆ ರಸ್ತೆ ಕೆಲಸ ನಡೆಸಲು ಡಿಪಿಆರ್ ಕೂಡ ಆಗಿದೆ. ರಾಜ್ಯ ಸರಕಾರ ಭೂ ಸ್ವಾದೀನ ವೆಚ್ಚದ ಶೇ. 50ರಷ್ಟು ಪಾಲನ್ನು ನೀಡುವ ಒಪ್ಪಿಗೆ ಪತ್ರ ನೀಡುವುದು ಬಾಕಿ ಇದೆ. ಅದು ಆದರೆ ರಿಂಗ್ ರಸ್ತೆ ಕೆಲಸ ಆರಂಭವಾಗಲಿದೆ ಎಂದು ನಿವೃತ್ತ ಅಧಿಕಾರಿ ಕುಂದರಗಿ ತಿಳಿಸಿದರು.
ನಿವೃತ್ತ ಮುಖ್ಯ ಎಂಜಿನಿಯರ್ ಜಾವೂರ್ ಮಾತನಾಡಿ, ವಿಮಾನ ನಿಲ್ದಾಣ ರಸ್ತೆಯ 11 ಕಿಮೀಗೆ 100 ಕೋಟಿ ರೂ. ಅಂದಾಜು ವೆಚ್ಚ ನಮೂದಿಸಿ ಯೋಜನೆ ಸಿದ್ದಪಡಿಸಲಾಗಿದೆ. ಅದನ್ನು ರಾಷ್ಟ್ರೀಯ ಗುಣಮಟ್ಟದಲ್ಲಿ ನಿರ್ಮಿಸಬೇಕೆಂದು ಸೂಚಿಸಲಾಗಿದೆ. ಆದರೆ ಸರಕಾರದಿಂದ ಇನ್ನೂ ಒಪ್ಪಿಗೆ ಸಿಗುವುದು ಬಾಕಿ ಇದೆ ಎಂದರು.
ಚೈತನ್ಯ ಕುಲಕರ್ಣಿ, ಚೆಂಬರ್ ಆಫ್ ಕಾಮರ್ಸ್ ಅಧ್ಯಕ್ಷರು ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ