Belagavi NewsBelgaum NewsKannada NewsKarnataka News

ಮದುವೆಯ ದಿನವೇ ವರದಕ್ಷಿಣೆಗೆ ಬೇಡಿಕೆ ಇಟ್ಟು ಜೈಲುಪಾಲಾದ ವರ


ಖಾನಾಪುರದಲ್ಲಿ ಘಟನೆ: ಯುವತಿಯಿಂದ ದೂರು ದಾಖಲು


ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಮದುವೆಗೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡು ಇನ್ನೇನು ತಾಳಿ ಕಟ್ಟಬೇಕು ಎನ್ನುವ ಸಂದರ್ಭದಲ್ಲಿ ವರ ವರಕ್ಷಿಣೆಗಾಗಿ ಬೇಡಿಕೆ ಇಟ್ಟ ಘಟನೆ ಪಟ್ಟಣದಲ್ಲಿ ಭಾನುವಾರ ವರದಿಯಾಗಿದೆ.
ಧಾರವಾಡ ಜಿಲ್ಲೆ ಹಳೇ ಹುಬ್ಬಳ್ಳಿಯ ನಿವಾಸಿ, ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಸಹಾಯಕ ಸಚೀನ ವಿಠ್ಠಲ ಪಾಟೀಲ ವರದಕ್ಷಿಣೆಗೆ ಬೇಡಿಕೆ ಇಟ್ಟ ವರ. ವಧು ನೀಡಿದ ದೂರಿನನ್ವಯ ಖಾನಾಪುರ ಠಾಣೆಯಲ್ಲಿ ವರ ಹಾಗೂ ಆತನ ಕುಟುಂಬದವರ ವಿರುದ್ಧ ಪ್ರಕರಣ ದಾಖಲಾಗಿದೆ. ವರನನ್ನು ವಶಕ್ಕೆ ಪಡೆದು ನ್ಯಾಯಾಲಯದಲ್ಲಿ ಹಾಜರುಪಡಿಸಿದ ಪೊಲೀಸರು ನ್ಯಾಯಾಧೀಶರ ಸೂಚನೆ ಮೇರೆಗೆ ಆರೋಪಿ ವರನನ್ನು ಬೆಳಗಾವಿ ಜಿಲ್ಲಾ ಕಾರಾಗೃಹಕ್ಕೆ ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣದ ವಿವರ: ಖಾನಾಪುರ ತಾಲೂಕಿನ ಗ್ರಾಮವೊಂದರ ಯುವತಿಯ ವಿವಾಹ ಸರ್ಕಾರಿ ಕೆಲಸದಲ್ಲಿರುವ ಹುಬ್ಬಳ್ಳಿಯ ಹುಡುಗ ಸಚೀನ ಜೊತೆ ನಿಗದಿಯಾಗಿತ್ತು. ಕಳೆದ ಮೇ ತಿಂಗಳಲ್ಲಿ ನಿಶ್ಚಿತಾರ್ಥ ನೆರವೇರಿತ್ತು. ಭಾನುವಾರ ಡಿ.೩೧ ರಂದು ಇಲ್ಲಿಯ ಲೋಕಮಾನ್ಯ ಸಭಾಗೃಹದಲ್ಲಿ ಮದುವೆ ನಡೆಯಬೇಕಿತ್ತು. ಆದರೆ ಮದುವೆಯ ಶಾಸ್ತ್ರಗಳು ನಡೆಯುವ ಸಂದರ್ಭದಲ್ಲಿ ವರ ತನಗೆ ವರದಕ್ಷಿಣೆಯಾಗಿ ಹತ್ತು ಲಕ್ಷ. ನಗದು ಮತ್ತು ೧೦೦ ಗ್ರಾಂ ಚಿನ್ನವನ್ನು ವರದಕ್ಷಿಣೆಯಾಗಿ ನೀಡಲು ಬೇಡಿಕೆ ಇಟ್ಟಿದ್ದ. ಆದರೆ ವಧುವಿನ ಕಡೆಯವರು ವರದಕ್ಷಿಣೆ ನೀಡಲು ನಿರಾಕರಿಸಿದ್ದರು. ಅದಕ್ಕೆ ಮದುಮಗ ವರದಕ್ಷಿಣೆ ಕೊಡದ ಹೊರತು ಮದುವೆ ಆಗುವುದಿಲ್ಲ ಎಂದು ಹಠ ಹಿಡಿದಿದ್ದ. ವರದ ವರದಕ್ಷಿಣೆ ದಾಹದಿಂದ ಬೇಸತ್ತ ವಧು ಹಾಗೂ ಆಕೆಯ ಪಾಲಕರು ಈ ವಿಷಯವನ್ನು ಖಾನಾಪುರ ಪೊಲೀಸರಿಗೆ ತಿಳಿಸಿದ್ದಾರೆ. ಖಾನಾಪುರ ಠಾಣೆಯ ಇನ್ಸಪೆಕ್ಟರ್ ಸೂಚನೆಯ ಮೇರೆಗೆ ಘಟನಾ ಸ್ಥಳಕ್ಕೆ ತೆರಳಿದ ಖಾನಾಪುರ ಠಾಣೆಯ ಪಿ.ಎಸ್.ಐ ಎಂ.ಬಿ ಬಿರಾದಾರ ಹಾಗೂ ಸಿಬ್ಬಂದಿ ವರನನ್ನು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಿರುವ ಖಾನಾಪುರ ಠಾಣೆಯ ಪೊಲೀಸರು ಸೋಮವಾರ ಘಟನಾಸ್ಥಳದ ಪಂಚನಾಮೆ ನಡೆಸಿ ದೂರುದಾರರು ಮತ್ತು ಪ್ರತ್ಯಕ್ಷದರ್ಶಿಗಳಿಂದ ಹೇಳಿಕೆ ದಾಖಲಿಸಿಕೊಂಡರು. ಪೊಲೀಸರ ಪರಿಶೀಲನೆ ಸಂದರ್ಭದಲ್ಲಿ ದೂರುದಾರರು ಆರೋಪಿ ನಿಶ್ಚಿತಾರ್ಥವಾದ ಬಳಿಕ ವಿವಿಧ ಕಾರಣವೊಡ್ಡಿ ತಮ್ಮ ಹಾಗೂ ತಮ್ಮ ಸಂಬಂಧಿಕರಿಂದ ಲಕ್ಷಾಂತರ ಮೊತ್ತವನ್ನು ಪಡೆದುಕೊಂಡಿದ್ದರು. ಮದುವೆಯ ಹಿಂದಿನ ದಿನವೂ ಅವರು ಹಣ ಮತ್ತು ಚಿನ್ನಕ್ಕಾಗಿ ಬೇಡಿಕೆ ಇಟ್ಟಿದ್ದರು. ಹಣ ಮತ್ತು ಚಿನ್ನ ನೀಡದಿದ್ದರೆ ಮದುವೆ ಆಗುವುದಿಲ್ಲ ಎಂದು ಬೆದರಿಕೆ ಒಡ್ಡಿದ್ದರು ಎಂಬ ಮಾಹಿತಿಯನ್ನು ಪೊಲೀಸರಿಗೆ ನೀಡಿದರು. ಈ ಸಂದರ್ಭದಲ್ಲಿ ದೂರುದಾರರ ಸಂಬಂಧಿಗಳು, ಪಂಚರು ಮತ್ತು ಪ್ರಕರಣದ ತನಿಖಾಧಿಕಾರಿಗಳು, ಸಿಬ್ಬಂದಿ ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button