ಬುದ್ಧಿಮಾಂಧ್ಯ ಮಗುವಿನ ಕ್ರೀಡೋತ್ಸಾಹ ಗುರುತಿಸಿ ಅವಕಾಶ ಕೊಡುವುದೇ ವಿಶೇಷ ಓಲಂಪಿಕ್ ಭಾರತ ಸಂಸ್ಥೆಯ ಪ್ರಮುಖ ಧ್ಯೇಯ – ಜೊಲ್ಲೆ
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ :
“ಬುದ್ಧಿಮಾಂಧ್ಯ ಮಗುವಿನಲ್ಲಿಯ ಕ್ರೀಡೋತ್ಸಾಹವನ್ನು ಗುರುತಿಸಿ ಅವಕಾಶ ಕೊಡುವುದೇ ವಿಶೇಷ ಓಲಂಪಿಕ್ ಭಾರತ ಸಂಸ್ಥೆಯ ಪ್ರಮುಖ ಧ್ಯೇಯವಾಗಿದೆ ಎಂದು “ವಿಶೇಷ ಓಲಂಪಿಕ್ ಭಾರತ” ದ ಕರ್ನಾಟಕ ರಾಜ್ಯದ ಅಧ್ಯಕ್ಷೆ, ನಿಪ್ಪಾಣಿ ಶಾಸಕಿಯೂ ಆಗಿರುವ ಶಶಿಕಲಾ ಜೊಲ್ಲೆ ಹೇಳಿದರು.
ಅವರು ಪಟ್ಟಣದ ಸಂಸದರ ಕಚೇರಿಯಲ್ಲಿ ಸುದ್ಧಿಗೋಷ್ಠಿನ್ನುದ್ದೇಶಿಸಿ ಮಾತನಾಡಿ, ಬುದ್ಧಿಮಾಂಧ್ಯ ಮಗು ಹೊಂದಿದ ತಂದೆ-ತಾಯಿ, ಕುಟುಂಬ ಪಡುವ ವೇದನೆ ಅನುಭವಿಸಿದವರಿಗೇ ಗೊತ್ತು. ಹಾಗಾಗಿ ರಾಜ್ಯದಲ್ಲಿ ೧೦ ಸಾವಿರಕ್ಕೂ ಹೆಚ್ಚು ಇಂತಹ ಮಕ್ಕಳ ಸಮೀಕ್ಷೆ ಕಾರ್ಯ ಬಾಕಿ ಉಳಿದಿದ್ದು, ಶೀಘ್ರದಲ್ಲಿಯೇ ಮಾಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ರಾಷ್ಟ್ರೀಯ ಅಧ್ಯಕ್ಷರಾಗಿ ಮಲ್ಲಿಕಾ ನಡ್ಡಾ ಅವರ ನೇತೃತ್ವದಲ್ಲಿ ವಿಶೇಷ ಓಲಂಪಿಕ್ ಭಾರತ ಸಂಸ್ಥೆಯು ಹೆಮ್ಮರವಾಗಿ ಬೆಳೆಯುತ್ತಿದೆ. ಆರ್ ಸಿ ಖನ್ನಾ ಅವರ ಕನಸಾಗಿರುವ ವಿಶೇಷ ಓಲಂಪಿಕ್ ಬುದ್ಧಿಮಾಂಧ್ಯ ಮಕ್ಕಳಿಗಾಗಿಯೇ ಇರುವುದಂತಹದ್ದು. ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ೪ ವಿಭಾಗಗಳಲ್ಲಿ ತರಬೇತಿ ಕೇಂದ್ರಗಳನ್ನು ತೆರೆಯಲಾಗುವುದು. ಮೊದಲ ಹಂತವಾಗಿ ಬೆಳಗಾವಿಯಲ್ಲಿ ತರಬೇತಿ ಕೇಂದ್ರ ಪ್ರಾರಂಭಿಸಲಾಗುತ್ತಿದ್ದು, ಜೊಲ್ಲೆ ಗ್ರುಪ್ ಇದಕ್ಕೆ ಸಹಾಯ ಮಾಡುತ್ತಿದೆ ಎಂದರು.
ಆಗಸ್ಟ್ ೩೦ ರಂದು ನಡೆದ ಚುನಾವಣೆಯಲ್ಲಿ ತಮ್ಮ ಪ್ಯಾನಲ್ ಆಯ್ಕೆ ಮಾಡಿದವರೆಲ್ಲರಿಗೂ ವಿಶೇಷ ಓಲಂಪಿಕ ಭಾರತ ಸಂಸ್ಥೆಯ ಕರ್ನಾಟಕ ರಾಜ್ಯ ಅಧ್ಯಕ್ಷೆ ಶಶಿಕಲಾ ಜೊಲ್ಲೆ ಅವರು ಧನ್ಯವಾದ ಸಲ್ಲಿಸಿದರು. ಅಲ್ಲದೇ, ರಾಷ್ಟ್ರ ಮಟ್ಟದ ವಿಶೇಷ ಓಲಂಪಿಕ್ ಭಾರತದ ಪಾಲಕರ ಪ್ರತಿನಿಧಿಯಾಗಿ ಆಯ್ಕೆ ಮಾಡಿದ ಮಲ್ಲಿಕಾ ನಡ್ಡಾ ಸೇರಿದಂತೆ ಇತರರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.
“೨೦೨೩ರ ಸೆಪ್ಬೆಂಬರ್ ೨೬ ರಂದು ಬರ್ಲಿನ್ ನಲ್ಲಿ ವಿಶೇಷ ಓಲಂಪಿಕ್ ಭಾರತ ತಂಡದ ರಾಜ್ಯದ ೯ ಜನ ಭಾಗಿಯಾಗಿ, ೧೩ ಚಿನ್ನ, ೨ ಬೆಳ್ಳಿ ಪದಕ ತಂದಿದ್ದು, ಅ. ೮ ರಂದು ಚಿಕ್ಕೋಡಿ ಪಟ್ಟಣದ ಆರ್ ಡಿ ಹೈಸ್ಕೂಲ್ ಮೈದಾನದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ೬೧ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಗುವುದು ಎಂದರು.
ಭಾರತ ವಿಶೇಷ ಓಲಂಪಿಕ್ ನ ಕರ್ನಾಟಕ ರಾಜ್ಯದ ನಿರ್ದೇಶಕ ಅಮರೇಂದರ್ ಮಾತನಾಡಿ, “ಕರ್ನಾಟಕ ರಾಜ್ಯದ ಅಧ್ಯಕ್ಷರಾಗಿ ಶಶಿಕಲಾ ಜೊಲ್ಲೆ ಅವರು ಆಯ್ಕೆಯಾಗಿದ್ದು ಭಾರತ ವಿಶೇಷ ಓಲಂಪಿಕ್ ಸಂಸ್ಥೆಯು ಬೆಳೆಯಲು ಸಹಕಾರ ನೀಡುತ್ತಿದ್ದಾರೆ. ರಾಜ್ಯದಲ್ಲಿ ಸಂಸ್ಥೆಯು ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದುವ ಲಕ್ಷಣಗಳು ಇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿಶೇಷ ಓಲಂಪಿಕ್ ನ ಭೌದ್ಧಿಕ ತಜ್ಞೆ ಶಾಂತಲಾ ಭಟ್, ಹೀರಾವತಿ ಸೇರಿದಂತೆ ರಾಜ್ಯ ಮಟ್ಟದ ಹಾಗೂ ಜಿಲ್ಲಾ ಮಟ್ಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ