Latest

ಬೆಲೆ ನಿರ್ಧರಿಸುವುದು ವಸ್ತುವಿನ ಗುಣಕ್ಕೆ. ಮೌಲ್ಯ ನಿರ್ಧಾರವಾಗುವುದು ಶ್ರೇಷ್ಠತೆಯ ಗುಣಕ್ಕೆ

ಲೇಖನ- ರವಿ ಕರಣಂ.

ಬೆಲೆ ಮತ್ತು ಮೌಲ್ಯವನ್ನು ಒಂದೇ ತಕ್ಕಡಿಯಲ್ಲಿ ತೂಗಿ ನೋಡಲು ಸಾಧ್ಯವಿಲ್ಲ. ಬೆಲೆ ಒಂದರ ಗುಣಮಟ್ಟದ ಮೇಲೆ ನಿರ್ಧರಿಸಲ್ಪಡಬಹುದು. ಆದರೆ ಮೌಲ್ಯವೆಂಬುದು ಶ್ರೇಷ್ಠತೆಯ ಆಧಾರದ ಮೇಲೆ ನಿರ್ಧರಿಸಲ್ಪಡುತ್ತದೆ ಎಂಬುದು ನನ್ನ ಅಭಿಮತ. ಅವುಗಳ ಅರ್ಥ ವಿಶಾಲವಾದುದು, ವಿಶೇಷವಾದುದು. ಅದಕ್ಕೆ ಇದೇ ಚೌಕಟ್ಟು ಎಂದು ಹೇಳಲು ಬಾರದು. ಅವರವರ ಅನುಭವ, ಅಭಿಪ್ರಾಯಗಳ ಮೇಲೆ ಅವಲಂಬಿತವೂ ಹೌದು. ಹಾಗಾಗೀ ಬದುಕಿನಲ್ಲಿ ಬೆಲೆ ಮತ್ತು ಮೌಲ್ಯಗಳ ಪಾತ್ರ ಹಿರಿದು ಎಂದೇ ಅದರಾಳದ ಬಗೆಗೆ ಹೊಕ್ಕು ನೋಡುವ ಅನಿವಾರ್ಯತೆಯೂ ಇದೆ.

ಇದೊಂದು ಕಥೆಯು ನನಗೆ ನೆನಪಾಗುತ್ತಿದೆ. ಅದನ್ನೆಲ್ಲೋ ಕೇಳಿದ್ದೆನು ಎಂಬುದು ಸ್ಪಷ್ಟ. ಅದೊಂದು ಸಲ ಟೇಲರ್ ತನ್ನ ಮಗನೊಂದಿಗೆ ಮನೆಯಲ್ಲಿ ಕುಳಿತು ತನ್ನ ಕಾರ್ಯದಲ್ಲಿ ತೊಡಗಿದ್ದ. ಇದ್ದಕ್ಕಿದ್ದಂತೆ ಅವನಿಗೆ ನಾಳೆ ಒಬ್ಬರಿಗೆ ಅಂಗಿಯನ್ನು ಹೊಲಿದು ಕೊಡುವುದಿದೆ ಎಂಬುದು ನೆನಪಾದ ತಕ್ಷಣ ಬಟ್ಟೆಯನ್ನು ಕೈಗೆ ತೆಗೆದುಕೊಂಡು, ಅವನು ಕತ್ತರಿಯನ್ನು ಪಕ್ಕಕ್ಕೆ ಇಟ್ಟುಕೊಂಡ. ಹಾಗೆಯೇ ಅವನ ಜೊತೆಗೆ ಒಂದು ಡಬ್ಬ ಯಾವಾಗಲೂ ಇರುತ್ತಿತ್ತು. ಅದರಲ್ಲಿ ನಾನಾ ಬಗೆಯ ಬಣ್ಣ ಬಣ್ಣದ ದಾರಗಳ ಸುತ್ತುಗಳಿರುತಿದ್ದವು. ಜೊತೆಗೆ ಹಲವು ಬಗೆಯ ಸೂಜಿಗಳು ಕೂಡ. ಮಗನಿಗೆ ಕೇವಲ ಎಂಟರಿಂದ ಹತ್ತು ವರ್ಷ ಇದ್ದಿರಬಹುದು. ಅವನಿಗೆ ತಂದೆ ಮಾಡುವ ಕಾರ್ಯದ ಬಗ್ಗೆ ತುಂಬಾ ಕುತೂಹಲ. ಅದನ್ನು ಕಣ್ಣಲ್ಲಿ ಕಣ್ಣಿಟ್ಟು , ಲಕ್ಷ್ಯ ವಹಿಸಿ ನೋಡುತ್ತಿದ್ದನು. ಇದ್ದಕ್ಕಿದ್ದಂತೆ ಅವನ ಗಮನ ಕತ್ತರಿಯ ಮೇಲೆ ಮತ್ತು ಸೂಜಿಯೊಂದರ ಮೇಲೆ ಹೋಯಿತು. ಕತ್ತರಿಯೋ ಅದರ ಹಿಡಿಕೆ ಹಿತ್ತಾಳೆಯದ್ದಾಗಿತ್ತು. ತುಂಬಾ ಫಳಫಳ ಹೊಳೆಯುತ್ತಿದ್ದು, ಮನಸ್ಸನ್ನು ಸೂರೆಗೊಂಡಿತು. ಹಾಗೆಯೇ ಒಂದು ತಳ್ಳನೆಯ ಒಂದೂವರೆ ಇಂಚಿನಷ್ಟು ಉದ್ದದ ಒಂದು ಸೂಜಿ ಮಿರ ಮಿರ ಮಿಂಚುತಿತ್ತು. ಅದು ಕೂಡ ಅವನ ಮನಸ್ಸನ್ನು ಆಕರ್ಷಿಸಿತು. ಆ ಹುಡುಗನಿಗೆ ಅವೆರಡರ ವಸ್ತುಗಳ ಬೆಲೆ ಎಷ್ಟಿದ್ದಿರಬಹುದು ತಿಳಿಯುವ ಹಂಬಲ ಉಂಟಾಯಿತು.
ತಂದೆಯನ್ನು ಕೇಳಿದ “ಅಪ್ಪ ಈ ಕತ್ತರಿಯ ಬೆಲೆ ಎಷ್ಟು?!
ಅದಕ್ಕೆ ತಂದೆ ಹೇಳುತ್ತಾನೆ ” ಮಗ, ಈ ಕತ್ತರಿಯ ಬೆಲೆ 250 ಗಳು”.
ಮಗ ಅಚ್ಚರಿಯ ಕಣ್ಗಳಿಂದ “ಹಾಗಾದರೆ ಈ ಸೂಜಿಯ ಬೆಲೆ ಎಷ್ಟು ಅಪ್ಪಾಜಿ?”.
ಆಗ ತಂದೆ ಹೇಳುತ್ತಾನೆ “ಈ ಸೂಜಿಯ ಬೆಲೆ ಕೇವಲ ಎಂಟಾಣೆ”.

ಏನೂ ಅರಿಯದ ಆ ಹುಡುಗ ಆ ಕತ್ತರಿಯ ಬೆಲೆಯನ್ನು ಕೇಳಿ, ಅಚ್ಚರಿಗೊಂಡು, “ಆಹಾ! ಇದು ಸೂಜಿಗಿಂತ ಶ್ರೇಷ್ಠವಾದದ್ದು. ಇದು ಆಕಾರದಲ್ಲಿಯೂ ದೊಡ್ಡದು, ಹಿತ್ತಾಳೆ ಬಣ್ಣದ ಹಿಡಿಕೆ, ತುಂಬಾ ಹರಿತವಾಗಿದೆ. ಕ್ಷಣ ಮಾತ್ರದಲ್ಲಿ ಬಟ್ಟೆಗಳನ್ನೆಲ್ಲ ಬೇಕಾದ ರೀತಿಯಲ್ಲಿ ಕತ್ತರಿಸಲು ಬರುತ್ತದೆ ಮತ್ತು ಇದರ ಬೆಲೆಯೂ ಜಾಸ್ತಿ ಅಲ್ಲವೇ? ಸೂಜಿ ಒಂದು ಸಣ್ಣ ವಸ್ತು. ಅದಕ್ಕಾಗಿ ಅದರ ಬೆಲೆ ಕಡಿಮೆ ಇದೆ. ಅದರ ಕಾರ್ಯವು ಕೂಡ ಅಷ್ಟಾಗಿ ಇರುವುದಿಲ್ಲ ಅಲ್ಲವೇ ? ಎಂದ.

ತಂದೆಗೆ ಮಗನ ಮುಗ್ದತೆಯನ್ನು ಕಂಡು, ಕ್ಷಣ ಹೊತ್ತು ವಿಚಾರ ಮಾಡಿದ. ಅವನಿಗೆ ಮೌಲ್ಯ ಮತ್ತು ಬೆಲೆಯ ಬಗ್ಗೆ ತಿಳಿಸಬೇಕು ಎಂಬುದು ತಂದೆಯ ಮನದಲ್ಲಿ ವಿಚಾರ ಓಡುತ್ತಿತ್ತು. ತುಂಡಾದ ಬಟ್ಟೆಗಳನ್ನು ಮಗನ ಕೈಯಲ್ಲಿಟ್ಟು “ಮಗಾ , ಈ ಎರೆಡೂ ತುಂಡು ಅರಿವೆಗಳನ್ನು ಸೇರಿಸಿ, ಹೊಲಿಗೆ ಹಾಕು. ಕೆಲಸ ಬೇಗ ಬೇಗ ಸಾಗುತ್ತದೆ” ಎಂದಾಗ, ಮಗ ಖುಷಿಯಿಂದಲೇ ದಾರ ಸೂಜಿ ತೆಗೆದುಕೊಂಡ. ಸೂಜಿಯಲ್ಲಿ ದಾರವನ್ನು ಪೋಣಿಸಿ, ಹೊಲಿಗೆ ಹಾಕಲು ತೊಡಗಿದ. ಚೆಂದವಾಗಿ ಅರಿವೆ ತುಂಡುಗಳನ್ನು ಜೋಡಿಸಿ, ಅಚ್ಚುಕಟ್ಟಾಗಿ ಹೊಲಿಗೆ ಹಾಕುವಲ್ಲಿ ಮಗ್ನನಾಗಿದ್ದ. ತಂದೆ ಮಗನ ಕಡೆ ತಿರುಗದೇ, ಓರೆ ನೋಟವನ್ನು ನೆಟ್ಟಿದ್ದ. ಸ್ವಲ್ಪ ಹೊತ್ತು ಕಳೆದ ಮೇಲೆ ಮಗ, ತಂದೆಯ ಮುಖವನ್ನು ನೋಡುತ್ತಾ ಕುಳಿತ. ಮಗನ ಮುಖದಲ್ಲಿ ಏನೋ ಭಾವವೊಂದು ಮೂಡಿತ್ತು. ತಂದೆಗೆ ಹೇಳಲವನು ತುದಿಗಾಲಲ್ಲಿದ್ದ.

ತಂದೆ ಒಂದು ಕ್ಷಣ ಮಗನ ಕಡೆಗೆ ತಿರುಗಿ “ಏನಾಯಿತು?” ಎಂದು ಕೇಳಿದ. ತಕ್ಷಣವೇ ಮಗ ಮಾತಾಡಲು ಶುರು ಮಾಡಿದ “ಅಪ್ಪ, ಈ ಬೆಲೆ ಬಾಳುವ ಕತ್ತರಿಯಿಂದ ನೀನು ಬಟ್ಟೆಗಳನ್ನು ಕತ್ತರಿಸಿ ಹಾಕಿದೆ. ಆದರೆ ಈ ಒಂದು ಸಣ್ಣ ಸೂಜಿಯು ತುಂಡಾದ ಅರಿವೆಗಳನ್ನು ಸೇರಿಸಿ ಮತ್ತೆ ಜೋಡಿಸುತ್ತಿದೆ. ಇದೆಂತಹ ಆಶ್ಚರ್ಯ !ಕತ್ತರಿಸಲು ಎರಡೂವರೆ ನೂರು ರೂಪಾಯಿಗಳ ಅಧಿಕ ಬೆಲೆಯ ವಸ್ತುವಿದೆ. ಆದರೆ ಜೋಡಿಸಲು ಕೇವಲ ಎಂಟಾಣೆಯ ವಸ್ತುವಿದೆ. ಇದು ಅಚ್ಚರಿ ಅಲ್ಲವೇ ?” ಎಂದಾಗ ತಂದೆಗೆ ಖುಷಿಯಾಯಿತು. ಸಂತೋಷದಿಂದ ಮಗನನ್ನು ತಬ್ಬಿ ಹೇಳುತ್ತಾನೆ.
” ನಿನಗೆ ಇದರ ಮಹತ್ವವನ್ನು ಅರ್ಥೈಸಲೆಂದೇ ನಾನು ಈ ಕೆಲಸವನ್ನು ಹೇಳಿದೆ. ಈಗ ನಿನಗೆ ಒಂದು ವಿಚಾರ ಹೊಳೆಯಿತಲ್ಲವೇ? ಅಷ್ಟು ಸಾಕು. ನೋಡು ಯಾವುದೇ ಒಂದು ವಸ್ತುವಿನ ಮೌಲ್ಯ ಗೊತ್ತಾಗುವುದು ಅದು ಮಾಡುವ ಕಾರ್ಯದಿಂದ. ಈಗ ಈ ಕತ್ತರಿಯನ್ನೇ ತೆಗೆದುಕೋ. ಇದರ ಬೆಲೆ ಹೆಚ್ಚು. ಇದು ತುಂಬಾ ಆಕರ್ಷಕ ಮತ್ತು ಆಕಾರದಲ್ಲಿ ದೊಡ್ಡದು. ಆದರೆ ಇದು ಮಾಡುವ ಕೆಲಸವೇನೆಂದರೆ ಒಂದಾಗಿರುವುದನ್ನು ಎರೆಡು ಮಾಡಿ ಎಸೆಯುತ್ತದೆ. ಅದರ ಕಾರ್ಯದಿಂದಾಗಿ ಮೌಲ್ಯ ಕಡಿಮೆ. ಆದರೆ ಇದು ಸಣ್ಣ ಸೂಜಿ. ಇದರ ಬೆಲೆ ತುಂಬಾ ಕಡಿಮೆ. ಆದರೆ ಇದು ಎರಡಾದುದನ್ನು ಒಂದು ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಕತ್ತರಿಯಿಂದ ಜೋಡಣೆಯ ಕೆಲಸವಾಗದು. ಹಾಗಾಗಿ ಬೆಲೆಯನ್ನು ನೋಡದೆ, ಅದರ ಮೌಲ್ಯವನ್ನು ನೋಡಬೇಕು. ಹಾಗೆಯೇ ನಮ್ಮ ಜೀವನದಲ್ಲಿ ಪ್ರತಿಯೊಂದನ್ನು ಹೀಗೆಯೇ ಅನ್ವಯಿಸಿಕೊಳ್ಳಬೇಕು” ಎಂದ.

ಎಷ್ಟೋ ವರ್ಷಗಳ ಹಿಂದೆ ಮೊಟ್ಟಮೊದಲ ಬಾರಿಗೆ ಇದನ್ನು ಕೇಳಿದಾಗ, ಮೈ ರೋಮಾಂಚನಗೊಂಡಿತ್ತು. ಹೌದಲ್ಲವೇ? ವಸ್ತು ಚಿಕ್ಕದಾದರೂ ಅದರ ಮೌಲ್ಯ ದೊಡ್ಡದಾಗಿರುತ್ತದೆ. ವಸ್ತು ದೊಡ್ಡದಾಗಿದ್ದರೂ ಅದರ ಕಾರ್ಯದಿಂದಾಗಿ ಮೌಲ್ಯವನ್ನು ಕಳೆದುಕೊಳ್ಳುತ್ತದೆ ಎಂಬುದು ಆಗಲೇ ಅರಿವಾದದ್ದು.ಇದು ನಿಮಗೂ ಸಹ ಗಮನಕ್ಕೆ ಬಂದಿರಬಹುದು ಎಂದು ಭಾವಿಸುತ್ತೇನೆ. ಜೀವನದಲ್ಲಿ ಅನ್ವಯಿಕೆಗೆ ಇದು ಹೇಳಿ ಮಾಡಿಸಿದ ಉದಾಹರಣೆಯಾಗಿದೆ.

 

ಸಮಾಜದಲ್ಲಿ ವ್ಯಕ್ತಿಯೊಬ್ಬ ದೊಡ್ಡವನಾಗುವುದೆಂದರೆ ಹಣದಿಂದ,ಆಸ್ತಿ- ಅಂತಸ್ತು,ಸಂಪತ್ತು,ಗಳಿಸಿದ ಕೀರ್ತಿಯಿಂದ ಎಂದು ಭಾವಿಸುವುದಲ್ಲ. ಅವನಿಂದಾಗುವ ಪ್ರಯೋಜನ ಅವನ ಸುತ್ತಲಿನವರಿಗೆ ಎಂತಹುದು? ಎಂಬುದು ಮಾತ್ರ. ಇಂದು ನೀವು ಜಗತ್ತಿನಲ್ಲಿ, ಭಾರತದಲ್ಲಿ ಅತ್ಯಂತ ಶ್ರೀಮಂತರ ಪಟ್ಟಿಯೊಂದನ್ನು ನೀವು ನೋಡಿರುತ್ತೀರಿ. ಸಮಾಜ ಅವರಿಗೆ ಅಧಿಕ ಗೌರವವನ್ನು ಕೊಡುತ್ತದೆ. ಅವನ ಸಂಪತ್ತಿಗೆ ! ನಿಮಗೆ ಗೊತ್ತಿರಬಹುದು.ಕೇವಲ ಅವರಿಗೆ ಕೊಡುವುದು ಬೆಲೆಯೊಂದನ್ನಷ್ಟೇ ! ಕೊಡುವ ಮೌಲ್ಯ ತೀರಾ ಕಡಿಮೆ. ಕಾರಣ ಅವರ ಹೋರಾಟ ಹಣಗಳಿಕೆ ಮತ್ತು ಉಳಿಕೆ. ಸೇವೆ ಅಲ್ಪ. ಕೀರ್ತಿ ಅಧಿಕ. ಇದು ದುರಂತ !

ಇದಕ್ಕೆ ತದ್ವಿರುದ್ಧವಾಗಿ ಇತ್ತೀಚಿಗೆ ಕರ್ಣಾಟಕ ರತ್ನ ಡಾ॥ ಪುನೀತ್ ರಾಜಕುಮಾರ್ ಅವರ ಒಂದು ಉದಾಹರಣೆಯನ್ನು ತೆಗೆದುಕೊಳ್ಳುತ್ತೇನೆ. ಪುನೀತ್ ರಾಜಕುಮಾರ್ ಅವರ ಆಸ್ತಿ ಎರಡೂವರೆಯಿಂದ ಮೂರುವರೆ ಅಥವಾ 400 ಕೋಟಿಗಳಾಗಿರಬಹುದು. ಅದು ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಅಥವಾ ಭಾರತದ ಶ್ರೀಮಂತರ ಪಟ್ಟಿಯಲ್ಲಿ ಯಾವ ಲೆಕ್ಕಕ್ಕೂ ಇಲ್ಲ. ಅವರು ತೀರಿ ಹೋಗಿ ಒಂದು ವರ್ಷ ಕಳೆದರೂ, ಈ ಕ್ಷಣಕ್ಕೂ ಅವರನ್ನು ಸ್ಮರಿಸದ ವ್ಯಕ್ತಿಗಳಿಲ್ಲ. ಭಾರತದ ಸ್ವಾತಂತ್ರ್ಯ ಹೋರಾಟಕ್ಕಾಗಿ ತನ್ನಿಡೀ ಜೀವನವನ್ನು ದೇಶಕ್ಕಾಗಿ ಧಾರೆಯರೆದಿದ್ದ, ಮುಡಿಪಾಗಿಟ್ಟಿದ್ದ ಗಾಂಧೀಜಿಯವರು ಕೊಲ್ಲಲ್ಪಟ್ಟಾಗ ಎಷ್ಟು ಜನ (ಅಂದಿನ 40 ಕೋಟಿ ಜನಸಂಖ್ಯೆಯಲ್ಲಿ) ಸೇರಿದ್ದರೋ ಅದಕ್ಕಿಂತಲೂ ಹೆಚ್ಚು ಜನ, ಪುನೀತ್ ರಾಜಕುಮಾರ್ ಅವರ ಮೃತ ದೇಹವನ್ನು,ಅವರ ಸಮಾಧಿಯನ್ನು ನೋಡಲು (6 ಕೋಟಿ ಕನ್ನಡಿಗರಲ್ಲಿ) ಸೇರಿದ್ದರೆಂಬುದು ಅತ್ಯಂತ ಗಮನಾರ್ಹ ಸಂಗತಿ. ಪುನೀತ್ ರಾಜ್ ಕುಮಾರ್ ಮೇರು ಕಲಾವಿದರ ಸಾಲಿಗೆ ಸೇರಲು ಬಹಳ ಕಾಲ ಬೇಕಿತ್ತು. ಆದರೆ ಮಹಾ ಮಾನವತಾವಾದಿ ಸಾಲಿಗೆ ಎಂದೋ ಸೇರಿದ್ದನ್ನು ಗುಟ್ಟಾಗಿಟ್ಟಿದ್ದರು. ಅದಕ್ಕಾಗಿಯೇ ಈ ಪರಿ ಪ್ರೀತಿ ಉಕ್ಕಿ ಹರಿಯಲು ಕಾರಣ. ಅವರ ವ್ಯಕ್ತಿತ್ವಕ್ಕೆ ಬೆಲೆ ಕಟ್ಟಲಾಗದು. ಅದೇ ಮೌಲ್ಯ ! ಯಾವುದು ಬೆಲೆಯನ್ನು ಮೀರಿಸಿರುತ್ತದೆಯೋ ಅದು ಅದ್ವಿತೀಯ !

ಶೀಘ್ರವೇ ನನಸಾಗಲಿದೆ ಧಾರವಾಡ- ಬೆಳಗಾವಿ ರೈಲ್ವೇ ಲೈನ್ ಕನಸು

https://pragati.taskdun.com/the-dream-of-dharwad-belagavi-railway-line-will-soon-come-true/

ಮಹಿಳೆಯರ ಮುಟ್ಟಿನ ರಜೆ ಅರ್ಜಿ; 24ರಂದು ವಿಚಾರಣೆಗೆ ಸುಪ್ರೀಂ ಅಸ್ತು

https://pragati.taskdun.com/womens-menstrual-leave-application-supreme-court-to-hear-on-24th/

7ನೇ ವೇತನ ಆಯೋಗದ ವರದಿ ಜಾರಿ: ನಾಳೆಯೇ ಸರಕಾರದ ಬದ್ಧತೆ ಬಹಿರಂಗ

https://pragati.taskdun.com/7th-pay-commission/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button