Kannada NewsKarnataka NewsNationalPolitics

*ಲೋಕಾಯುಕ್ತಕ್ಕೆ ED ಪತ್ರ ಬರೆದಿರುವುದರ ಹಿಂದೆ ದುರುದ್ದೇಶ ಇದೆ: ಸಿ.ಎಂ.ಸಿದ್ದರಾಮಯ್ಯ*

ಪ್ರಗತಿವಾಹಿನಿ ಸುದ್ದಿ: ಹೈಕೋರ್ಟ್ ನಲ್ಲಿ ನಮ್ಮ‌ ಅರ್ಜಿ ವಿಚಾರಣೆಗೆ ಬರುವ ಹಿಂದಿನ‌ ದಿನ ED ಯವರು ಲೋಕಾಯುಕ್ತಕ್ಕೆ ಪತ್ರ ಬರೆದಿದ್ದೇ ನ್ಯಾಯಾಲಯದ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕೆ.ಆರ್.ಪೇಟೆ ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. ED ಯವರು ತಮ್ಮ ತನಿಖೆಯ ವಿವರವನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿರುವುದರ ಬಗ್ಗೆ ಮತ್ತು ಲೋಕಾಯುಕ್ತಕ್ಕೆ ಪತ್ರ ಬರೆದಿರುವುದರ ಹಿಂದಿನ ಉದ್ದೇಶದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು. 

ED ಯವರು ತನಿಖೆ ನಡೆಸುತ್ತಿದ್ದಾರೆ. ಇವರು ತನಿಖೆ ನಡೆಸುತ್ತಿರುವುದೇ ಸರಿಯಲ್ಲ. ಆಗಲಿ, ತನಿಖೆ ನಡೆಸಿದ ಮೇಲೆ ತನಿಖಾ ವರದಿಯನ್ನು ಲೋಕಾಯುಕ್ತಕ್ಕೆ ನೀಡಬಹುದಿತ್ತು. ಅದನ್ನು ಬಿಟ್ಟು , ಲೋಕಾಯುಕ್ತಕ್ಕೆ ಪತ್ರ ಬರೆಯುವುದು ಮತ್ತು ಮಾಧ್ಯಮಗಳಿಗೆ ಸೋರಿಕೆ ಮಾಡುವುದರ ಹಿಂದೆ ರಾಜಕೀಯ ದುರುದ್ದೇಶ ಇದೆ ಎಂದರು.

ಈ ವಿಚಾರಕ್ಕೆ ಸಂಬಂಧಪಟ್ಟಂತೆನಾಳೆ ನಮ್ಮ ಅರ್ಜಿ ಹೈಕೋರ್ಟ್ ನಲ್ಲಿ ವಿಚಾರಣೆ ಬರುತ್ತಿದೆ. ಇದಕ್ಕೆ ಒಂದು ದಿನ ಮೊದಲು ಮಾಧ್ಯಮಗಳಲ್ಲಿ ಪ್ರಚಾರ ಮಾಡಿರುವುದರ ಹಿಂದೆ ನ್ಯಾಯಾಲಯದ ಮೇಲೆ ಪ್ರಭಾವ ಬೀರುವ ಮತ್ತು ನ್ಯಾಯಾಲಯವನ್ನು ಪೂರ್ವಾಗ್ರಹದ ನಿಲುವಿಗೆ ತರುವ ದುರುದ್ದೇಶದ ರಾಜಕೀಯ ನಡೆಯಾಗಿದೆ ಎಂದು ತಿಳಿಸಿದರು.

ಡಿಸೆಂಬರ್ 24 ರ ಒಳಗೆ ತನಿಖೆಯ ವರದಿ ನೀಡುವಂತೆ ನ್ಯಾಯಾಲಯ ಲೋಕಾಯುಕ್ತಕ್ಕೆ ಸೂಚನೆ ನೀಡಿದೆ. ಬೇಕಿದ್ದರೆ ED ಯವರು ಲೋಕಾಯುಕ್ತಕ್ಕೆ ವರದಿ ನೋಡಲು ಅವಕಾಶವಿತ್ತು. ಅದನ್ನು ಬಿಟ್ಟು ಈ ರೀತಿ ಮಾಡಿರುವುದರ ಹಿಂದಿನ ಉದ್ದೇಶ ರಾಜ್ಯದ ಜನರಿಗೆ ಅರ್ಥವಾಗುತ್ತದೆ ಎಂದರು.

ನಾನು ಹೇಳಿದ್ನಾ?

ಮಂತ್ರಿ ಮಂಡಲ ಪುನಾರಚನೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, ಮಂತ್ರಿಮಂಡಲ ಪುನಾರಚನೆ ಮಾಡ್ತೀವಿ ಅಂತ ನಾನು ಹೇಳಿದ್ನಾ? ನೀವೇ ನಿಮ್ಮ ಪಾಡಿಗೆ ನೀವು ಕಲ್ಪಿಸಿಕೊಂಡು ಸುದ್ದಿ ಮಾಡಿದ್ರಿ. ಈಗ ನನ್ನ ಬಳಿ ಉತ್ತರ ಕೇಳಿದರೆ ಹೇಗೆ ? ಈ ಬಗ್ಗೆ ಹೈ ಕಮಾಂಡ್ ಕೂಡ ಸೂಚನೆ ಕೊಟ್ಟಿಲ್ಲ ಎಂದರು. 

ನಾಳೆ ಹಾಸನದಲ್ಲಿ ನಡೆಯುತ್ತಿರುವ ಸಮಾವೇಷದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿ ಕಾಂಗ್ರೆಸ್ ಪಕ್ಷದಿಂದ ಸಮಾವೇಷ ನಡೆಯುತ್ತಿದೆ ಎಂದರು.

ಸಚಿವರಾದ ಕೆ.ಎನ್.ರಾಜಣ್ಣ, ಚಲುವರಾಯಸ್ವಾಮಿ ಮತ್ತು ಶಾಸಕರುಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button