ಪ್ರಗತಿವಾಹಿನಿ ಸುದ್ದಿ: ಬೆಲೆಬಾಳುವ ವಸ್ತುಗಳನ್ನು ಕದ್ದು, ಮನೆಯು ಪ್ರಸಿದ್ದ ಸಾಹಿತಿಗೆ ಸೇರಿದ್ದು ಎಂದು ತಿಳಿದು ಕಳ್ಳನೊಬ್ಬ ಪಶ್ಚಾತಾಪದ ಬಳಿಕ ಕದ್ದಮಾಲನ್ನು ಮರಳಿಸಿದ್ದಾನೆ.
ಮರಾಠಿ ಕವಿ ನಾರಾಯಣ ಸುರ್ವೆ ಅವರಿಗೆ ಸೇರಿದ ಮನೆಯು ರಾಯಗಢ ಜಿಲ್ಲೆಯ ನೆರಲ್‌ನಲ್ಲಿ ಇದೆ. ಇಲ್ಲಿ ಸುರ್ವೆ ಅವರ ಮಗಳು ಸುಜಾತ ಮತ್ತು ಅವರ ಪತಿ ಗಣೇಶ್ ಘರೆ ಅವರು ವಾಸಿಸುತ್ತಿದ್ದಾರೆ. ದಂಪತಿ ಪ್ರವಾಸಕ್ಕೆ ಹೋಗಿದ್ದರಿಂದ ಕಳೆದ 10 ದಿನಗಳಿಂದ ಮನೆಗೆ ಬೀಗ ಹಾಕಲಾಗಿತ್ತು. ಇದನ್ನು ಗಮನಿಸಿದ್ದ ಕಳ್ಳ ಮನೆಯ ಬೀಗ ಒಡೆದು ಎಲ್‌ಇಡಿ ಟಿವಿಯನ್ನು ಕದ್ದೊಯ್ದಿದ್ದ. ಇನ್ನಷ್ಟು ವಸ್ತುಗಳನ್ನು ಕದಿಯಲು ಮತ್ತೆ ಮನೆಗೆ ಬಂದಾಗ ಮನೆಯಲ್ಲಿದ್ದ ಸುರ್ವೆ ಅವರ ಫೋಟೊವನ್ನು ಗಮನಿಸಿ, ಇದು ಪ್ರಸಿದ್ಧ ಮರಾಠಿ ಸಾಹಿತಿಯ ಮನೆ ಎಂದು ತಿಳಿಯುತ್ತದೆ. ಆಗ ಗೋಡೆಯ ಮೇಲೆ ಕ್ಷಮಾಪಣೆ ಪತ್ರ ಬರೆದು ಅಂಟಿಸಿ, ಎಲ್‌ಇಡಿ ಟಿವಿಯನ್ನೂ ಮರಳಿಸಿದ್ದಾನೆ.
ಸುರ್ವೆ ಅವರ ಪುತ್ರಿ ನೀಡಿದ ದೂರಿನ ಮೇರೆಗೆ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾಹಿತಿ ಹಾಗೂ ಕಾರ್ಮಿಕ ನಾಯಕರಾಗಿಯೂ ಗುರುತಿಸಿಕೊಂಡಿದ್ದ ನಾರಾಯಣ ಸುರ್ವೆ ಅವರು 2010ರ ಆಗಸ್ಟ್ 10ರಂದು 84ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ