
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಿಡಕಲ್ (ಘಟಪ್ರಭಾ) ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆ ಆಗುತ್ತಿರುವದರಿಂದ ಹಿಡಕಲ್ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ಒಳಹರಿವು ಹರಿದು ಬರುತ್ತಿದೆ, ಇದರಿಂದ ಹಿಡಕಲ್ ಜಲಾಶಯವು ಶೇಕಡಾ 85 ರಷ್ಟು ಭರ್ತಿಯಾಗಿದ್ದು, ಜಲಾಶಯಕ್ಕೆ ಬರುವ ನೀರಿನ ಪ್ರಮಾಣ ಗಣನೀಯವಾಗಿ ಏರತೊಡಗಿದ್ದು, ಜಲಾಶಯದ ಗರಿಷ್ಟ ಮಟ್ಟ 2175.00 ಅಡಿಗಳಿರುತ್ತದೆ.
ಇಂದು ಬೆಳಗ್ಗೆ ಜಲಾಶಯದ ಮಟ್ಟ 2165.10 ಅಡಿಗಳು ಇದ್ದು ಜಲಾಶಯಕ್ಕೆ ಒಳಹರಿವು ಪ್ರಮಾಣ 17692 ಕ್ಯೂಸೆಕ್ ಇದೆ. ಇಂದು ಸಾಯಂಕಾಲ ಕ್ರಸ್ಟ್ ಗೇಟುಗಳ ಮೂಲಕ 5000 ಕ್ಯೂಸೆಕ್ಸ್ ವರೆಗೆ ನೀರನ್ನು ನದಿ ಪಾತ್ರಕ್ಕೆ ಬಿಡಲಾಗುವುದು.
ಜಲಾಶಯದ ಒಳಹರಿವು ಹೆಚ್ಚಾದಂತೆ ಮತ್ತೆ 20000 ಕ್ಯೂಸೆಕ್ಸ್ ವರೆಗೆ ನೀರನ್ನು ನದಿ ಪಾತ್ರಕ್ಕೆ ಹರಿಬಿಡಲಾಗುವುದು ಆದ್ದರಿಂದ ಘಟಪ್ರಭಾ ನದಿ ಹಾಗೂ ಹಿರಣ್ಯಕೇಶಿ ನದಿಯ ದಡದಲ್ಲಿ ಬರುವ ಎಲ್ಲಾ ಗ್ರಾಮಗಳ ಗ್ರಾಮಸ್ಥರು ಹಾಗೂ ತಮ್ಮ ಜಾನುವಾರಗಳ ಸಮೇತ ನದಿಯ ಪಾತ್ರದಿಂದ ಸುರಕ್ಷಿತ ಸ್ಥಳಗಳಿಗೆ ತೆರಳಲು ಕ.ನೀ.ನಿ.ನಿ ಹಿಡಕಲ್ ಡ್ಯಾಮ್ ಉಪ ವಿಭಾಗ ನಂ-2 ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.