ನಾಳೆ ಕೆಪಿಎಲ್ ಫೈನಲ್ -ಬಳ್ಳಾರಿ ಟಸ್ಕರ್ಸ್ ಎದುರಾಳಿ ಹುಬ್ಬಳ್ಳಿ ಟೈಗರ್ಸ್
ಪ್ರಗತಿವಾಹಿನಿ ಸುದ್ದಿ, ಮೈಸೂರು-
ಬೆಳಗಾವಿ ಪ್ಯಾಂಥರ್ಸ್ ತಂಡವನ್ನು 26 ರನ್ ಗಳ ಅಂತರದಲ್ಲಿ ಮಣಿಸಿದ ಹುಬ್ಬಳ್ಳಿ ಟೈಗರ್ಸ್ ತಂಡ 8ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ ನ ಫೈನಲ್ ತಲುಪಿದೆ.
ಫೈನಲ್ ಪಂದ್ಯದಲ್ಲಿ ಟೈಗರ್ಸ್ ಈಗಾಗಲೇ ಪ್ರಶಸ್ತಿ ಸುತ್ತು ತಲುಪಿರುವ ಬಳ್ಳಾರಿ ಟಸ್ಕರ್ಸ್ ವಿರುದ್ಧ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಲಿದೆ.
155 ರನ್ ಗಳ ಸುಲಭ ಗುರಿ ಬೆಂಬತ್ತುವಲ್ಲಿ ವಿಫಲವಾದ ಬೆಳಗಾವಿ ಪ್ಯಾಂಥರ್ಸ್ ಕೇವಲ 19.4 ಓವರ್ ಗಳಲ್ಲಿ 128 ರನ್ ಗೆ ಸರ್ವ ಪತನ ಕಂಡು ಫೈನಲ್ ತಲುಪುವಲ್ಲಿ ವಿಫಲವಾಯಿತು.
ಶ್ರೇಯಸ್ ಗೋಪಾಲ್ (17ಕ್ಕೆ 2) ಒಂದೇ ಓವರ್ ನಲ್ಲಿ ಎರಡು ವಿಕೆಟ್ ಅಮೂಲ್ಯ ವಿಕೆಟ್ ಕಬಳಿಸುವ ಮೂಲಕ ಟೈಗರ್ಸ್ ಗೆ ಜಯದ ಹಾದಿಯನ್ನು ಸುಗಮಗೊಳಿಸಿದರು. ಅಭಿನವ್ ಮನೋಹರ್ (38) ಹೊರತುಪಡಿಸಿದರೆ ಪ್ಯಾಂಥರ್ಸ್ ಪಡೆಯ ಇತರ ದಾಂಡಿಗರು ರನ್ ಗಳಿಸಲು ಪರದಾಡಿದರು. ಅಭಿಲಾಶ್ ಶೆಟ್ಟೆ (33ಕ್ಕೆ 3), ಆದಿತ್ಯ ಸೋಮಣ್ಣ (21ಕ್ಕೆ 2) ಹಾಗೂ ಪ್ರವೀಣ್ ದುಬೆ (31ಕ್ಕೆ 2) ಟೈಗರ್ಸ್ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.
ಟೈಗರ್ಸ್ 154ಕ್ಕೆ ಆಲೌಟ್
ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ಪ್ರೀಮಿಯರ್ ಲೀಗ್ ಎರಡನೇ ಕ್ವಾಲಿಫಯರ್ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡ ಎದುರಾಳಿ ಬೆಳಗಾವಿ ಪ್ಯಾಂಥರ್ಸ್ ಗೆ ಸಾಧಾರಣ ಮೊತ್ತದ ಸವಾಲನ್ನು ನೀಡಿತು. 20 ಓವರ್ ಗಳಲ್ಲಿ ವಿನಯ್ ಕುಮಾರ್ ಪಡೆ 154 ರನ್ ಗಳಿಸಿ ಸರ್ವಪತನ ಕಂಡಿತು.
ಕೊನೆಯ ಓವರ್ ನಲ್ಲಿ ಸಾಮಾನ್ಯ ಬೌಂಡರಿ ಹಾಗೂ ಸಿಕ್ಸರ್ ಗಳು ಇದುವರೆಗೂ ಮೂಡಿ ಬಂದಿತ್ತು. ಆದರೆ ಟೈಗರ್ಸ್ ನಾಲ್ವರು ಆಟಗಾರರು ಸತತ ನಾಲ್ಕು ಎಸೆತಗಳಲ್ಲಿ ರನೌಟ್ ಗೆ ಬಲಿಯಾದದ್ದು ರನ್ ಗಳಿಕೆಯ ಮೇಲೆ ಕಡಿವಾಣ ಬಿದ್ದಂತಾಯಿತು.
ಮೊಹಮ್ಮದ್ ತಹಾ (63), ಕೆಬಿ ಪವನ್ (31) ಹಾಗೂ ಪವನ್ ದೇಶಪಾಂಡೆ (29) ಅವರನ್ನು ಹೊರತುಪಡಿಸಿದರೆ ಉಳಿದ ಆಟಗಾರರು ನೈಜ ಸಾಮರ್ಥ್ಯ ತೋರುವಲ್ಲಿ ವಿಫಲರಾದರು. ಬೆಳಗಾವಿ ಪ್ಯಾಂಥರ್ಸ್ ಪರ ರಿತೇಶ್ ಭಟ್ಕಳ್ (26ಕ್ಕೆ 2) ಹಾಗೂ ಶ್ರೀಶ ಆಚಾರ್ ( 34ಕ್ಕೆ 3) ಬೌಲಿಂಗ್ ನಲ್ಲಿ ಮಿಂಚಿ ಟೈಗರ್ಸ್ ರನ್ ಗಳಿಕೆಗೆ ಕಡಿವಾಣ ಹಾಕಿದರು.
ತಹಾಗೆ ಆರೆಂಜ್ ಕ್ಯಾಪ್
ಇದುವರೆಗೂ ಆಡಿರುವ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಮೊಹಮ್ಮದ್ ತಹಾ ಆರೆಂಜ್ ಕ್ಯಾಪ್ ಗೌರವಕ್ಕೆ ಪಾತ್ರರಾದರು. 8 ಪಂದ್ಯಗಳಲ್ಲಿ ಅವರು 253 ರನ್ ಗಳಿಸಿದರು.
ಟಾಸ್ ಗೆದ್ದ ಪ್ಯಾಂಥರ್ಸ್ ಫೀಲ್ಡಿಂಗ್ ಆಯ್ದುಕೊಂಡಿತು. ಟೈಗರ್ಸ್ ಈ ಹಿಂದಿನ ಎರಡು ಮುಖಾಮುಖಿಯಲ್ಲಿ ಪ್ಯಾಂಥರ್ಸ್ ವಿರುದ್ಧ ಜಯಗಳಿಸಿ ಮೇಲುಗೈ ಸಾಧಿಸಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ