*ವಿಟಿಯುನಲ್ಲಿ ನಾಳೆಯಿಂದ ಎರಡು ದಿನಗಳ ಅಂತರಾಷ್ಟ್ರೀಯ ಸಮ್ಮೇಳನ*
ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿ ಟಿ ಯು) ನಲ್ಲಿ “ಎನ್ವಿರಾನ್ ಮೆಂಟಲ್ ಸಸ್ಟೇನ್ಬಿಲಿಟಿ ಮತ್ತು ಕ್ಲೈಮೇಟ್ ಚೇಂಜ್ ಆಡಪ್ಸನ್ ಸ್ಟ್ರಾಟಜಿಸ್” (ಪರಿಸರ ಸುಸ್ಥಿರತೆ ಮತ್ತು ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಕಾರ್ಯತಂತ್ರ) ಎಂಬ ವಿಷಯದ ಕುರಿತು ಗುರುವಾರ ದಿನಾಂಕ 13 ಮತ್ತು 14 ರಂದು ಎರಡು ದಿನಗಳ ಅಂತರಾಷ್ಟ್ರೀಯ ಸಮ್ಮೇಳನವನ್ನು ವಿಟಿಯು ಸಿವಿಲ್ ಇಂಜಿನಿಯರಿಂಗ್ ವಿಭಾಗವು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ, ಬೆಂಗಳೂರು ಇವರ ಸಹಯೋಗದೊಂದಿಗೆ ಹಮ್ಮಿಕೊಂಡಿದೆ.
ಈ ಸಮ್ಮೇಳನದ ಉದ್ಘಾಟನಾ ಸಮಾರಂಭವು ಗುರುವಾರ ದಿನಾಂಕ13 ರಂದು ಬೆಳಿಗ್ಗೆ 10:30ಕ್ಕೆ ನಡೆಯಲಿದ್ದು ರಷ್ಯನ್ ಅಕಾಡೆಮಿಯ ಪೆಟ್ರೊಜವೋಡ್ಸ್ಕ್ ವಾಟರ್ ಇನ್ಸ್ಟಿಟ್ಯೂಟ್ ನ ನಿರ್ದೇಶಕರಾದ ಡಾ. ಫಿಲಾಟೊವ್ ನಿಕೋಲೈ ನಿಕೊಲಾಯೆವಿಚ್ ಮುಖ್ಯ ಅತಿಥಿಗಳಾಗಿ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ವಿ ಟಿ ಯು ಕುಲಪತಿ ಪ್ರೊ ವಿದ್ಯಾಶಂಕರ್ ಎಸ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಕೆನಡಾದ ಇನ್ ಲ್ಯಾಂಡ್ ವಾಟರ್ಸ್ ನ ಮಾಜಿ ಹಿರಿಯ ವಿಜ್ಞಾನಿ ಡಾ. ಸಿ ಆರ್. ಮೂರ್ತಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಅಧ್ಯಕ್ಷ ಡಾ. ಬಿ ಶಿವಲಿಂಗಯ್ಯ, ವಿ ಟಿ ಯು ಕುಲಸಚಿವ ಪ್ರೊ ಬಿ ಈ ರಂಗಸ್ವಾಮಿ, ಮೌಲ್ಯಮಾಪನಾ ಕುಲಸಚಿವರಾದ ಪ್ರೊ. ಟಿ. ಎನ್. ಶ್ರೀನಿವಾಸ ಹಾಗೂ ಹಣಕಾಸು ಅಧಿಕಾರಿ ಡಾ. ಪ್ರಶಾಂತ ನಾಯಕ್ ಜಿ ಉಪಸ್ಥಿತರಿರುವರು.
ಎರಡು ದಿನಗಳು ನಡೆಯುವ ಈ ಸಮ್ಮೇಳನದಲ್ಲಿ ಅಂತರಾಷ್ಟ್ರೀಯ ವಿಷಯ ತಜ್ಞರು ಸೇರಿ ಸುಮಾರು 100 ಕ್ಕಿಂತ ಹೆಚ್ಚು ತಜ್ಞರು, ಸಂಶೋಧನಾರ್ಥಿಗಳು ಹಾಗೂ ಪ್ರಾಧ್ಯಾಪಕರು ಭಾಗವಹಿಸಲಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ