Kannada NewsKarnataka NewsNationalPolitics

*ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜೈಶಂಕರ್ ಪ್ರಯತ್ನದ ಫಲ: ಧಾರವಾಡದ ಅಜ್ಜ-ಅಜ್ಜಿ ಮಡಿಲು ಸೇರಿದ ಆಸ್ಟ್ರೇಲಿಯಾ ವಶದಲ್ಲಿ ತಬ್ಬಲಿ ಮಕ್ಕಳು*

ಪ್ರಗತಿವಾಹಿನಿ ಸುದ್ದಿ: ವಿದೇಶದಲ್ಲಿ ಮಗ ಅನಾರೋಗ್ಯದಿಂದ ಬಳಲುತ್ತಿರುತ್ತಾನೆ. ಆಸ್ಪತ್ರೆಗೆ ದಾಖಲಿಸಿದರೆ ಸೂಕ್ತ ಚಿಕಿತ್ಸೆ ಸಿಗುವುದಿಲ್ಲ. ತಾಯಿ ಆ ಆಸ್ಪತ್ರೆ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಹೋರಾಟಕ್ಕೆ ಇಳಿಯುತ್ತಾಳೆ. ಈ ಮಧ್ಯೆ ಮಕ್ಕಳನ್ನು ತಾಯಿ ಸರಿಯಾಗಿ ಲಾಲನೆ- ಪಾಲನೆ ಮಾಡುತ್ತಿಲ್ಲವೆಂದು ಹೇಳಿ ಸರ್ಕಾರವೇ ವಶಕ್ಕೆ ತೆಗೆದುಕೊಂಡು ಬಿಡುತ್ತದೆ.‌

ಇತ್ತ, ಹೆತ್ತ ತಾಯಿ ಆ ವಿದೇಶಿ ಸರ್ಕಾರದ ಧೋರಣೆಯಿಂದ ಬೇಸತ್ತು,  ಮಕ್ಕಳನ್ನು ನೋಡಲಾಗದೆ ಹತಾಶಳಾಗಿ ಸ್ವದೇಶಕ್ಕೆ ಮರಳಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಹೆತ್ತ ತಾಯಿ ಸತ್ತರೂ ಅಂತಿಮ ದರ್ಶನ ಪಡೆಯಲು, ಅಂತ್ಯ ಸಂಸ್ಕಾರದಲ್ಲಿ ತೊಡಗಲು ಮಕ್ಕಳಿಗೆ ಅವಕಾಶ ಮಾಡಿಕೊಡದೆ ತನ್ನ ಸುಪರ್ದಿಯಲ್ಲೇ ಇರಿಸಿಕೊಂಡಿರುತ್ತದೆ ಆ ನಿರ್ದಯಿ ವಿದೇಶಿ ಸರ್ಕಾರ.

ಇತ್ತ, ಪತ್ನಿ ಕಳೆದುಕೊಂಡು ಮಕ್ಕಳು ಜತೆಗಿರದೆ ಪರಿತಪಿಸುತ್ತಿರುತ್ತಾರೆ ತಂದೆ. ಇನ್ನೊಂದು ಕಡೆ ಸೊಸೆ – ಮಗಳನ್ನು ಕಳೆದುಕೊಂಡ ದುಃಖದಲ್ಲಿ, ಮೊಮ್ಮಕ್ಕಳನ್ನೂ ಕಣ್ತುಂಬಿಕೊಳ್ಳಲಾಗದೆ ಎರಡೂ ಕುಟುಂಬಗಳ ಅಜ್ಜ-ಅಜ್ಜಿಯರು ಕೊರಗುತ್ತಿರುತ್ತಾರೆ ಕರುನಾಡಿನಲ್ಲಿ.

ಎಲ್ಲ ಸಂಗತಿ ಅರಿತ ಭಾರತ ಸರಕಾರದ ಇಬ್ಬರು ಮಹಾನ್ ಮಂತ್ರಿಗಳು ಶತಾಯ-ಗತಾಯ ಸರ್ವ ರೀತಿಯಲ್ಲೂ ವಿದೇಶಿ ಸರ್ಕಾರಕ್ಕೆ ಒತ್ತಡ ಹೇರಿ ಆ ಇಬ್ಬರು ಮಕ್ಕಳನ್ನು ವಿದೇಶದ ಸುಪರ್ದಿಯಿಂದ ಬಿಡಿಸಿ ಮರಳಿ ಭಾರತಕ್ಕೆ ಕರೆತಂದು ಅಜ್ಜ-ಅಜ್ಜಿಯರ ಮಡಿಲು ಸೇರಿಸುತ್ತಾರೆ.

ಆಗ ಕುಟುಂಬದಲ್ಲಿನ ಸಂತಸಕ್ಕೆ ಪಾರವೇ ಇಲ್ಲ. ಸಚಿವದ್ವಯರ ಮಹತ್ಕಾರ್ಯಕ್ಕೆ ಇಡೀ ಕುಟುಂಬ ತಲೆಬಾಗಿ ನಮಿಸುತ್ತಿದೆ. ಒಂದು ರೀತಿ ಬಂಧನದಂತಹ ವ್ಯವಸ್ಥೆಯಿಂದ ಹೊರಬಂದ ಮಕ್ಕಳು ಮತ್ತು ಮೊಮ್ಮಕ್ಕಳನ್ನು ಕಂಡ ಅಜ್ಜ-ಅಜ್ಜಿಯರು ಸಚಿವರಿಬ್ಬರಿಗೂ ಕರ ಜೋಡಿಸಿ ಚಿರಋಣಿ ಎನ್ನುತ್ತ ಅಭಿನಂದನೆ ಸಲ್ಲಿಸಿದ್ದಾರೆ.

ನಮ್ಮ ಧಾರವಾಡ ಸಂಸದ, ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹಾಗೂ ಆಗಿನ ವಿದೇಶಾಂಗ ಸಚಿವ ಜೈಶಂಕರ್ ನಮ್ಮ ಕರುನಾಡಿನ ಕುಟುಂಬದ  ಧನ್ಯತೆಗೆ ಪಾತ್ರರಾಗಿದ್ದಾರೆ.

ಆಗಿದ್ದೇನು…? 

ಮೂಲತಃ ಧಾರವಾಡದವರೇ ಆಗಿರುವ ಲಿಂಗರಾಜ ಪಾಟೀಲ-ಪ್ರಿಯದರ್ಶಿನಿ ದಂಪತಿ ಆಸ್ಟ್ರೇಲಿಯಾದಲ್ಲಿ ನೆಲೆಸಿರುತ್ತಾರೆ. ಅಲ್ಲೇ ಉದ್ಯೋಗದಲ್ಲಿ ಇರುತ್ತಾರೆ.  ಈ ದಂಪತಿಗೆ ಅಮರ್ಥ್ಯ ಮತ್ತು ಅಪರಾಜಿತ ಎಂಬಿಬ್ಬರು ಮಕ್ಕಳು. ಮಗ ಅಮರ್ಥ್ಯ ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ಅಲ್ಲಿನ ಆಸ್ಪತ್ರೆಗೆ ದಾಖಲಿಸುತ್ತಾರೆ. ಸೂಕ್ತ ಚಿಕಿತ್ಸೆ ಸಿಗಲಿಲ್ಲವೆಂದು ತಾಯಿ ಪ್ರಿಯದರ್ಶಿನಿ ಕಾನೂನು ಹೋರಾಟ ನಡೆಸುತ್ತಾರೆ. ತನಿಖೆ ನಡೆಸಿದ ಆಸ್ಟ್ರೇಲಿಯಾ ಸರ್ಕಾರ ತಾಯಿಯೇ ಮಕ್ಕಳನ್ನು ಸರಿ ಪೋಷಣೆ ಮಾಡುತ್ತಿಲ್ಲ ಎಂದು ಹೇಳಿ ತನ್ನ ವಶಕ್ಕೆ ಪಡೆದುಕೊಳ್ಳುತ್ತದೆ.

ಇದರಿಂದ ಬೇಸತ್ತ ಪ್ರಿಯದರ್ಶಿನಿ ಹತಾಶಳಾಗಿ, ಮಕ್ಕಳು ದೂರವಾಗಿದ್ದರಿಂದ ತೀವ್ರ ಮನನೊಂದು ಕಳೆದ ಆಗಸ್ಟ್ ನಲ್ಲಿ ಧಾರವಾಡಕ್ಕೆ ಮರಳಿ ಆತ್ಮಹತ್ಯೆ ಮಾಡ್ಕೊಳ್ಳುತ್ತಾರೆ. ಆಸ್ಟ್ರೇಲಿಯಾ ಸರ್ಕಾರ ಕೆಲ ಕಾನೂನು ತೊಡಕುಗಳಿವೆ ಎಂದು ಹೇಳಿ ತಾಯಿ ಅಂತಿಮ ದರ್ಶನ, ಅಂತ್ಯ ಸಂಸ್ಕಾರಕ್ಕೂ ಮಕ್ಕಳಿಗೆ ಅವಕಾಶ ಮಾಡಿಕೊಟ್ಟಿರಲಿಲ್ಲ.

ಭಾರತಕ್ಕೆ ಮಕ್ಕಳ ಮರಳಿ ಕರೆತರುವಲ್ಲಿ ಜೋಶಿ ಯಶಸ್ವಿ

ಧಾರವಾಡದಲ್ಲಿ ಇದ್ದ ಪ್ರಿಯದರ್ಶಿನಿ ಕುಟುಂಬ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮೊರೆ ಹೋಗುತ್ತದೆ. ಜೋಶಿ ಅವರು ವಿದೇಶಾಂಗ ಸಚಿವ ಜೈಶಂಕರ್ ಅವರ ಮೂಲಕ ಆಸ್ಟ್ರೇಲಿಯಾ ಸರ್ಕಾರದ ಜತೆ ಸಂಪರ್ಕ ಸಾಧಿಸಿ ಅಂತೂ ಇಬ್ಬರೂ ಮಕ್ಕಳನ್ನು ಭಾರತಕ್ಕೆ ಕರೆ ತಂದಿದ್ದಾರೆ. ಅವಿರತ ಪ್ರಯತ್ನ ನಡೆಸಿ ಮೊಮ್ಮಕ್ಕಳನ್ನು ಅಜ್ಜ – ಅಜ್ಜಿಯರ ಮಡಿಲಿಗೆ ಹಾಕುವಲ್ಲಿ ಪ್ರಲ್ಹಾದ ಜೋಶಿ ಯಶಸ್ವಿಯಾಗಿದ್ದಾರೆ.

ಸಚಿವ ಜೋಶಿ ಅವರಿಗೆ ಅಭಿನಂದನೆ

ಪ್ರೊ ದೇಸಾಯಿಯವರ ಕುಟುಂಬ ಹಾಗು ಅವರ ಮೊಮ್ಮಕ್ಕಳು ಇಂದು ಹುಬ್ಬಳ್ಳಿಯಲ್ಲಿ  ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರನ್ನು ಭೇಟಿ ಮಾಡಿ ಸಹಾಯಕ್ಕೆ ಧನ್ಯವಾದ ಅರ್ಪಿಸಿದರು.  ಮೊಮ್ಮಕ್ಕಳನ್ನು  ಕಾಪಾಡಿದ್ದೀರಿ. ಇದಕ್ಕೆ ನಾವು ಚಿರಋಣಿ ಎಂದು ಅಭಿನಂದನೆ ಸಲ್ಲಿಸಿದರು.

ಜೋಶಿ ಅವರಿರದಿದ್ದರೆ ಮೊಮ್ಮಕ್ಕಳು ಸಿಗುತ್ತಿರಲಿಲ್ಲ

ಈ ಸಂದರ್ಭದಲ್ಲಿ  ಮಾತನಾಡಿದ ಪ್ರೊ ದೇಸಾಯಿಯವರು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಇರದಿದ್ದರೆ ನಮ್ಮ ಮೊಮ್ಮಕ್ಕಳು ಇಂದು ನಮ್ಮ ಮಡಿಲು ಸೇರುತ್ತಿರಲಿಲ್ಲ ಎಂದು ಕಣ್ತುಂಬಿಕೊಂಡರು. ಮಗಳ ಅಂತ್ಯಕ್ರಿಯೆ ವೇಳೆ ಮಾತು ಕೊಟ್ಟಂತೆ ಮೊಮ್ಮಕ್ಕಳನ್ನು ಕರೆತಂದು ಮಗಳ ಆತ್ಮಕ್ಕೆ ಚಿರಶಾಂತಿ ನೀಡಿದ್ದಾರೆ ಎಂದು ಹೇಳಿದರು.

ಪ್ರಾಮಾಣಿಕ ಕರ್ತವ್ಯ ಮಾಡಿದ್ದೇನೆ ಅಷ್ಟೇ

ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಪ್ರಾಮಾಣಿಕವಾಗಿ ನನ್ನ ಕರ್ತವ್ಯ ಮಾಡಿದ್ದೇನೆ ಅಷ್ಟೇ. ಪ್ರಿಯದರ್ಶಿನಿ ಸಾವಾದಾಗ ಮಕ್ಕಳು ಆಸ್ಟ್ರೇಲಿಯಾದಲ್ಲಿ ಇದ್ದರು. ಭಾರತಕ್ಕೆ ಕರೆ ತರಲು ಕೆಲವು ಕಾನೂನು ತೊಡಕುಗಳಿದ್ದವು. ಹೀಗಾಗಿ ಹಿಂದಿನ ವಿದೇಶಾಂಗ ಸಚಿವ ಜೈಶಂಕರ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಲಾಗಿತ್ತು. ಭಾರತದ ಹೈಕಮೀಶನ್ ಹಾಗೂ ಆಸ್ಟ್ರೇಲಿಯಾದ ಹೈಕಮೀಶನ್ ಜತೆ ಮಾತುಕತೆ ನಡೆಸುವ ಮೂಲಕ ಇದೀಗ ಅಡೆತಡೆಗಳನ್ನೆಲ್ಲ ನಿವಾರಿಸಿ ಮಕ್ಕಳಿಬ್ಬರನ್ನು ಮರಳಿ ಕರೆ ತರಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರೊ ಮಲ್ಲಿಕಾರ್ಜುನ ಪಾಟೀಲ, ಡಾ.ಎಸ್.ಆರ್. ರಾಮನಗೌಡರ, ಸಿ.ಎಸ್. ಪಾಟೀಲ ಮಾಜಿ ಮೇಯರ್ ಈರೇಶ ಅಂಚಟಗೇರಿ ಹಾಗು ದೇಸಾಯಿ ಕುಟುಂಬ ವರ್ಗದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button