ಪ್ರಗತಿವಾಹಿನಿ ಸುದ್ದಿ, ಬೆಳಗಾವಿ-: ಗ್ರಾಮಿಣ ಪ್ರದೇಶಕ್ಕಿಂತ ನಗರ ಪ್ರದೇಶದಲ್ಲಿ ಮತದಾನ ಮಾಡುವರ ಪ್ರಮಾಣ ಕಡಿಮೆ ಆಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಯಾಗಿ ಬೆಳೆಸಲು ಹಾಗೂ ನಾನು ಈ ದೇಶದ ನಾಗರಿಕ ಎಂದು ಹೇಳಿಕೊಳ್ಳಲು ಪ್ರತಿಯೊಬ್ಬರು ಮತದಾನ ಮಾಡುವ ಅವಶ್ಯಕತೆ ಇದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಆರ್.ಜೆ. ಸತೀಶ ಸಿಂಗ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಸ್ವಿಪ್ ಸಮಿತಿ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಶನಿವಾರ ( ಜ.೨೫ ) ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಏರ್ಪಡಿಸಲಾಗಿದ್ದ ೧೦ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು
ಪ್ರಜಾಪ್ರಭುತ್ವ ಜೀವಂತವಾಗಿ ಉಳಿಯಬೇಕು ಎಂದರೆ ಎಲ್ಲರೂ ತಪ್ಪದೇ ಮತದಾನ ಮಾಡಬೇಕು. ಭಾರತ ವಿಶ್ವದಲ್ಲಿಯೇ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ. ಆದರೆ ಭಾರತದಲ್ಲಿ ಮತದಾನ ಕಡಿಮೆ ಆಗುತ್ತಿದೆ. ಗ್ರಾಮಿಣ ಪ್ರದೇಶಕ್ಕಿಂತ ನಗರ ಪ್ರದೇಶದಲ್ಲಿ ಮತದಾನ ಮಾಡುವರ ಪ್ರಮಾಣ ಕಡಿಮೆ ಆಗುತ್ತಿದೆ. ಈ ದೇಶದ ನಾಗರಿಕರು ಎಂದು ಹೇಳಲು ಮತದಾನ ಮಾಡುವುದು ಅವಶ್ಯಕತೆಯಿದೆ.
ನಮ್ಮ ಹಿರಿಯರು ನಮಗೆ ಪ್ರಜಾಪ್ರಭುತ್ವ ಕೂಟ್ಟಿದ್ದಾರೆ. ನಮ್ಮ ಕೈಯಲ್ಲಿ ಮತದಾನದ ಇಂಕ್ ಇದ್ದರೆ ನಮಗೆ ಗೌರವ ಸಿಗುತ್ತದೆ. ಮತದಾನದ ದಿನ ರಜೆ ಕೊಟ್ಟರೂ ಜನರು ಮತದಾನ ಮಾಡುವದಿಲ್ಲ. ಮುಂಬರುವ ದಿನಗಳಲ್ಲಿ ನಗರದಲ್ಲಿ ನೂರಕ್ಕೆ ನೂರು ಮತದಾನವಾಗಬೇಕು, ಎಂಬ ಆಶಯ ನಮ್ಮದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಆರ್ ಜೆ ಸತೀಶ ಸಿಂಗ್ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ರಾಷ್ಟ್ರದ ಒಳಿತಿಗಾಗಿ ರಾಷ್ಟ್ರೀಯ ಮತದಾನ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದೆ. ೧೮ ವರ್ಷಕ್ಕೆ ಮೇಲ್ಪಟ್ಟ ಪ್ರತಿಯೊಬ್ಬ ಪ್ರಜೆಯು ಮತದಾನ ಮಾಡಬೇಕು. ಗ್ರಾಮಿಣ ಪ್ರದೇಶದಲ್ಲಿ ಮತದಾನ ಹೆಚ್ಚು ಆಗುತ್ತಿರುವದು ಕಂಡುಬರುತ್ತಿದೆ. ಆದರೆ ಹೆಚ್ಚು ಸಾಕ್ಷರತೆ ಹೊಂದಿರುವ ನಗರ ಪ್ರದೇಶಗಳಲ್ಲಿ ಮತದಾನ ಕಡಿಮೆ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿಯೊಬ್ಬರಿಗೂ ಮತದಾನದ ಪಾವಿತ್ರತೆಯನ್ನು ತಿಳಿಸಬೇಕು. ಯುವ ಮತದಾರರು ಹೆಚ್ಚು ಪಾಲ್ಗೊಂಡು ಪ್ರಜಾಪ್ರಭುತ್ವವನ್ನು ಬಲಿಷ್ಠಗೊಳಿಸಬೇಕು ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ನಗರ ಪೊಲೀಸ್ ಆಯುಕ್ತ ಬಿ.ಎಸ್.ಲೋಕೇಶ್ ಕುಮಾರ್ ಅವರು ಮಾತನಾಡಿ, ಸಮಾರಂಭದಲ್ಲಿ ಬಂದಿರುವ ಎಲ್ಲ ವಿದ್ಯಾರ್ಥಿಗಳು ಮತದಾನ ಅಗತ್ಯತೆ ಎಷ್ಟು ಇದೇ ಎಂಬುದನ್ನು ಎಲ್ಲರಿಗೂ ತಿಳಿಸಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಸಾಕಷ್ಟು ಅವಕಾಶಗಳಿದ್ದು, ಎಲ್ಲರೂ ತಮ್ಮ ಹೆಸರು ನೋಂದಣಿ ಮಾಡಿಸಬೇಕು ಎಂದು ಹೇಳಿದರು.
ಬಳಿಕ ಮಾತನಾಡಿದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು, ಪ್ರತಿಸಲ ನಾವು ಮತದಾನ ಜಾಗೃತಿ ಮಾಡುತ್ತೇವೆ, ಯಾಕೆ ಈ ಮತದಾನ ಜಾಗೃತಿ ಮಾಡುತ್ತಿದ್ದೇವೆ ಎಂಬುದು ಈಗಾಗಲೆ ಎಲ್ಲರಿಗೂ ತಿಳಿದಿರಬೇಕು. ಗಂಟೆಗಟ್ಟಲೆ ಸಿನೆಮಾ ನೋಡಲು ಸಾಲು ಸರದಿಯಲ್ಲಿ ನಿಲ್ಲುತ್ತೇವೆ ಆದರೆ ೧೦ ನಿಮಿಷ ನಿಂತು ಮತದಾನ ಮಾಡುವ ವ್ಯವಧಾನ ಕಂಡುಬರುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಸಂವಿಧಾನ ರಚನೆ ಮಾಡಲು ಎಷ್ಟು ಜನ ಕಷ್ಟ ಪಟ್ಟಿದ್ದಾರೆ ಎಂಬುದನ್ನು ನಾವು ಅರಿಯಬೇಕು. ಆ ಕಾಲದಲ್ಲಿ ಮಹಿಳೆಯರಿಗೆ ಅನೇಕ ಹಕ್ಕುಗಳನ್ನು ನೀಡಿರಲಿಲ್ಲ. ಸಂವಿಧಾನ ರಚೆನೆ ಮಾಡುವಾಗ ದಲಿತರಿಗೆ, ಮಹಿಳೆಯರಿಗೆ ಅನಕ್ಷರಸ್ಥರಿಗೂ ಮತದಾನದ ಹಕ್ಕು ನೀಡಿದವರು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಎಂದು ತಿಳಿಸಿದರು.
ಮತದಾನ ಮಾಡುವುದಲ್ಲದೆ ನೈತಿಕ ಮತದಾನ ಮಾಡಬೇಕು. ಚಿಕ್ಕ ಪುಟ್ಟ ಆಸೆಗಳಿಗೆ ಒಳಗಾಗದೆ ನೈತಿಕ ಮತದಾನ ಮಾಡಬೇಕು. ಎಲ್ಲರೂ ಭಾರತೀಯ ಚುನಾವಣಾ ಆಯೋಗದ ಚಾಂಪಿಯನ್ಸ್ ಆಗಬೇಕು. ಸದೃಢ ಭಾರತಕ್ಕಾಗಿ ಮತದಾನದ ಅವಶ್ಯಕತೆ ಎಂದು ಹೇಳಿದರು.
ಹೊಸ ಮತದಾರರ ಗುರುತಿನ ಚೀಟಿ ವಿತರಣೆ:
ಮತದಾರರಪಟ್ಟಿಗೆ ಹೊಸದಾಗಿ ಸೇರ್ಪಡೆಯಾದ ಯುವ ಮತದಾರರಗೆ ಇದೇ ಸಂದರ್ಭದಲ್ಲಿ ಗುರುತಿನ ಚೀಟಿ ವಿತರಣೆ ಮಾಡಲಾಯಿತು.
ಮತದಾನ ಜಾಗೃತಿಗೆ ಸಂಬಂಧಿಸಿದಂತೆ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ಪ್ರಭಂದ ಸ್ಪರ್ಧೆ, ಭಾಷಣ ಸ್ಪರ್ಧೆ ಸೇರಿದಂತೆ ಅನೇಕ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರಿಂದ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಅವರು, ನನಗೆ ನಿಜವಾಗಲೂ ಸಂತೋಷ ಎನಿಸುತ್ತದೆ. ಯುವಸಮುದಾಯದಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿದೆ ಎಂದು ಅನಿಸುತ್ತಿದೆ.
ನಮಗೆ ದೇಶದ ಆಡಳಿತ ನಡೆಸುವವರ ಆಯ್ಕೆ ಮಾಡುವ ಹಕ್ಕು ನಮಗೆ ನೀಡಿದೆ. ಆ ಹಕ್ಕನ್ನು ಯಾರು ಮಾರಿಕೊಳ್ಳಬಾರದು ಎಂದು ಹೇಳಿದರು.
ಈ ವೇಳೆ ಅಪರ ಪ್ರಾದೇಶಿಕ ಆಯುಕ್ತ ರಮೇಶ ಕಳಸದ, ಜಿಲ್ಲಾ ಸ್ವಿಪ್ ಸಮಿತಿಯ ಸದಸ್ಯ ರವಿ ಭಜಂತ್ರಿ, ಮಹಾನರ ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್, ಜಿಲ್ಲಾಪಂಚಾಯತ ಹಣಕಾಸು ಅಧಿಕಾರಿ ಪರಶುರಾಮ ದುಡಗುಂಟಿ ಮತ್ತಿತರರು ಉಪಸ್ಥಿತರಿದ್ದರು.
ಮತದಾನದ ಜಾಗೃತಿ ಜಾಥಾ:
೧೦ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ರಂಗಮಂದಿರದವರೆಗೆ ಜಾಗೃತಿ ಜಾಥಾ ನಡೆಯಿತು.
ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಜಾಥಾಗೆ ಚಾಲನೆ ನೀಡಿದರು.
ವಿವಿಧ ಶಾಲಾ-ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ