ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರ ನೇತೃತ್ವದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿಯತ್ತ ಕೊಂಡೊಯ್ಯಲಾಗುತ್ತಿದೆ. ಯಾರೇ ದಾರಿ ತಪ್ಪಿಸುವ, ಗೊಂದಲವನ್ನುಂಟು ಮಾಡುವ ಯತ್ನ ಮಾಡಿದರೂ ಅದಕ್ಕೆ ಕಿವಿಗೊಡಬೇಡಿ. ಎಂತಹ ಸಂದರ್ಭ ಬಂದರೂ ನಾವು ಜನರ ಪರವಾಗಿ ನಿಲ್ಲುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಭರವಸೆ ನೀಡಿದ್ದಾರೆ.
ಹಿರೇಬಾಗೇವಾಡಿ ಗ್ರಾಮದ ಶ್ರೀ ಪಡಿಬಸವೇಶ್ವರ ದೇವಸ್ಥಾನದ ಸಮುದಾಯ ಭವನ ಹಾಗೂ ಯಾತ್ರಿ ನಿವಾಸ ಕಟ್ಟಡಗಳನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಶಾಸಕರಾಗುವ ಪೂರ್ವದಲ್ಲಿ ಹಾಗೂ ಶಾಸಕರಾದ ನಂತರ ಕಳೆದ ನಾಲ್ಕೂವರೆ ವರ್ಷದಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಅವರು ಕ್ಷೇತ್ರಕ್ಕಾಗಿ ಯಾವ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನುವುದನ್ನು ಎಲ್ಲರೂ ನೋಡುತ್ತಿದ್ದೀರಿ. ಜನರ ವಿಶ್ವಾಸಕ್ಕೆ ಎಲ್ಲಿಯೂ ಕಿಂಚಿತ್ತೂ ದಕ್ಕೆ ಬಾರದ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಆದರೆ ಹಿರೇಬಾಗೇವಾಡಿ ನೀರಿನ ಯೋಜನೆ ವಿಷಯ ಸೇರಿದಂತೆ ಕೆಲವು ಸಂದರ್ಭಗಳಲ್ಲಿ ಜನರನ್ನು ದಾರಿತಪ್ಪಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ರೈತರ ಮುಗ್ದತೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇಂತದಕ್ಕೆಲ್ಲ ಮುಂದಿನ ದಿನಗಳಲ್ಲಿ ಅವಕಾಶ ನೀಡದಿರೋಣ ಎಂದು ಅವರು ಮನವಿ ಮಾಡಿದರು.
ಕ್ಷೇತ್ರದ ಜನರು ನಮ್ಮ ಮೇಲಿಟ್ಟ ವಿಶ್ವಾಸ ಅತ್ಯಂತ ದೊಡ್ಡದು. ಅದಕ್ಕೆ ಚ್ಯುತಿ ಉಂಟಾಗದಂತೆ ನಾವು ನಡೆದುಕೊಳ್ಳುತ್ತಿದ್ದೇವೆ. ಕೆಲವರು ಕೇವಲ ಗೊಂದಲ ಉಂಟು ಮಾಡಿ ಜನರ ದಾರಿ ತಪ್ಪಿಸುತ್ತಾರೆ. ಅದೆಲ್ಲ ಒಮ್ಮೆ ನಡೆಯಬಹುದು, ಎರಡು ಬಾರಿ ನಡೆಯಬಹುದು. ನಿರಂತರವಾಗಿ ಯಾರಿಗೂ ಮೋಸಮಾಡಲು ಸಾಧ್ಯವಿಲ್ಲ ಎಂದು ಚನ್ನರಾಜ ಹೇಳಿದರು.
ಹಿರೇಬಾಗೇವಾಡಿ ಭಾಗವೂ ಸೇರಿದಂತೆ ಸಮಗ್ರ ಕ್ಷೇತ್ರದ ಅಭಿವೃದ್ಧಿಯ ನಮ್ಮ ಗುರಿಯಲ್ಲಿ ಸಾಕಷ್ಟು ಸಾಧನೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ನಾವೆಲ್ಲರೂ ಸೇರಿ ಇನ್ನಷ್ಟು ಯೋಜನೆಗಳ ಮೂಲಕ ಕ್ಷೇತ್ರವನ್ನು ಅಭಿವೃದ್ಧಿಪಡಿಸೋಣ. ಇದೇ ಪ್ರೀತಿ, ವಿಶ್ವಾಸ ನಮ್ಮ ಮೇಲಿರಲಿ ಎಂದು ಅವರು ವಿನಂತಿಸಿದರು.
ಈ ಸಮಯದಲ್ಲಿ ಗ್ರಾಮದ ಹಿರಿಯರು, ಯಲ್ಲನಗೌಡ ಪಾಟೀಲ, ಎಸ್ ಬಿ ಶೇಗುಣಿಸಿ, ವಿದ್ಯಾವತಿ ಭಜಂತ್ರಿ, ಬಿ ಎಸ್ ಕೇದಾರಜಿ, ವಿ ಜೆ ಪತ್ತಾರ, ಸ್ವಾತಿ ಇಟಗಿ, ಗೌರಮ್ಮ ಪಾಟೀಲ, ಶಮೀನಾಬಾನು ನದಾಫ್,
ಸುರೇಶ ಇಟಗಿ, ಗೌಸ ಜಾಲಿಕೊಪ್ಪ, ಶ್ರೀಕಾಂತ ಮದುಭರಮಣ್ಣವರ, ಬಸನಗೌಡ ಪಾಟೀಲ, ಸಿದ್ದು ಪಾಟೀಲ, ನಿಂಗಪ್ಪ ತಳವಾರ, ಸೈಯದ್ ಸನದಿ, ಶಿಪು ಹಳಮನಿ ಹಾಗೂ ದೇವಸ್ಥಾನ ಟ್ರಸ್ಟ್ ಕಮೀಟಿಯ ಎಲ್ಲ ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ