ರಮೇಶ ಜಾರಕಿಹೊಳಿ ಹೇಳಿದ ಆ ಮೂವರು ಯಾರು? ಅವನೊಬ್ಬ ಯಾರು?: ಎಲ್ಲರ ಕಡೆಗೂ ಅನುಮಾನದ ದೃಷ್ಟಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಜ್ಯದಲ್ಲಿ ಚುನಾವಣೆಗೆ ಒಂದು ವರ್ಷ ಬಾರಿ ಇರುವಾಗಲೇ ಪಕ್ಷಾಂತರ ಪರ್ವ ಆರಂಭವಾಗುವ ಲಕ್ಷಣ ಘೋಚರಿಸುತ್ತಿದೆ. ಬರುವ 6 ತಿಂಗಳಲ್ಲಿ ದೊಡ್ಡ ಮಟ್ಟದಲ್ಲಿ ರಾಜಕೀಯ ಧೃವೀಕರಣ ನಡೆಯುವ ಸಾಧ್ಯತೆ ಇದೆ.
ಕಾಂಗ್ರೆಸ್ ಜೊತೆಗೆ ಹಲವು ಬಿಜೆಪಿ, ಜೆಡಿಎಸ್ ನಾಯಕರು ಸಂಪರ್ಕದಲ್ಲಿದ್ದು, ಅವರ ಹೆಸರನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿಕೆ ನೀಡಿದ್ದರು. ಇದರಿಂದಾಗಿ ದೊಡ್ಡ ಸಂಚಲನ ಉಂಟಾಯಿತು. ಬೆನ್ನಲ್ಲೇ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಹ ಅಂತಹುದೇ ಹೇಳಿಕೆ ನೀಡಿದರು.
ಇದಾದ ನಂತರ ಮಾಜಿ ಸಚಿವ ರಮೇಶ ಜಾರಕಿಹೊಳಿ ಕಾಂಗ್ರೆಸ್ ನ 16 ಮತ್ತು ಜೆಡಿಎಸ್ ನ 3 ಶಾಸಕರು ನನ್ನ ಜೊತೆಗೆ ಸಂಪರ್ಕದಲ್ಲಿದ್ದಾರೆ. ಬಿಜೆಪಿ ಹೈಕಮಾಂಡ್ ಒಪ್ಪಿದರೆ ಇವರನ್ನೆಲ್ಲ ಬಿಜೆಪಿಗೆ ಕರೆತರುತ್ತೇನೆ ಎಂದರು. ಇಂತಹುದೇ ಹೇಳಿಕೆಯನ್ನು ಅವರು ಸಚಿವರಾಗಿದ್ದ ಸಂದರ್ಭದಲ್ಲೂ ನೀಡಿದ್ದರು.
ಇದರ ಜೊತೆಗೆ, ಬೆಳಗಾವಿ ಜಿಲ್ಲೆಯ ಮೂವರು ಕಾಂಗ್ರೆಸ್ ಶಾಸಕರು ನನ್ನ ಜೊತೆ ಸಂಪರ್ಕದಲ್ಲಿದ್ದಾರೆ. ಅವರನ್ನೆಲ್ಲ ಬಿಜೆಪಿಗೆ ಕರೆತರುತ್ತೇನೆ ಎಂದೂ ಹೇಳಿದ್ದಾರೆ. ಜೊತೆಗೆ ಅವನೊಬ್ಬ ಮಾತ್ರ ಬಿಜೆಪಿಗೆ ಬೇಡ, ಅವನು ಬಂದರೆ ನಾನು ಬೇರೆ ಕಡೆಗೆ ಹೋಗುತ್ತೇನೆ ಎಂದೂ ಹೇಳುವ ಮೂಲಕ ದೊಡ್ಡ ಸಂಚಲನಕ್ಕೆ ಕಾರಣರಾಗಿದ್ದಾರೆ.
ಬೆಳಗಾವಿಯಲ್ಲಿ ಇರುವವರೇ ಐವರು ಕಾಂಗ್ರೆಸ್ ಶಾಸಕರು- ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳಕರ್, ಮಹಾಂತೇಶ ಕೌಜಲಗಿ, ಅಂಜಲಿ ನಿಂಬಾಳಕರ್ ಮತ್ತು ಗಣೇಶ ಹುಕ್ಕೇರಿ. ಈ ಐವರಲ್ಲಿ ಬಿಜೆಪಿ ಸೇರಲು ರಮೇಶ ಜಾರಕಿಹೊಳಿ ಜೊತೆ ಸಂಪರ್ಕದಲ್ಲಿರುವ ಮೂವರು ಯಾರು? ಜೊತೆಗೆ, ಅವನೊಬ್ಬ ಬಂದರೆ ನಾನು ಬಿಜೆಪಿಯಿಂದ ಹೊರಗೆ ಹೋಗುತ್ತೇನೆ ಎಂದರೆ, ಅವನ್ಯಾರು?
ರಮೇಶ ಜಾರಕಿಹೊಳಿ ಹೇಳಿಕೆ ಹತ್ತಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮೇಲ್ನೆೋಟಕ್ಕೆ ಈ ಐವರಲ್ಲಿ ರಮೇಶ ಜಾರಕಿಹೊಳಿ ಅವರ ಬದ್ದ ವೈರಿಗಳು ಲಕ್ಷ್ಮಿ ಹೆಬ್ಬಾಳಕರ್ ಮತ್ತು ಸತೀಶ್ ಜಾರಕಿಹೊಳಿ. ಇವರಿಬ್ಬರನ್ನು ಬಿಟ್ಟು ಉಳಿದ ಮೂವರು ಬಿಜೆಪಿ ಸೇರುತ್ತಾರಾ? ಅವನೊಬ್ಬ ಬಂದರೆ ನಾನಿರುವುದಿಲ್ಲ ಎಂದಿದ್ದು ಸತೀಶ್ ಜಾರಕಿಹೊಳಿ ಕುರಿತೇ? ಅವನೊಬ್ಬ ಬಂದರೆ ನಾನಿರುವುದಿಲ್ಲ ಎಂದರೆ, ಅವಳು ಬಂದರೆ ಒಪ್ಪಿಗೆ ಇದೆ ಎಂದರ್ಥವೇ? ಪರೋಕ್ಷವಾಗಿ ಅವನೊಬ್ಬನನ್ನು ಬಿಟ್ಟು ಇತರರನ್ನು ಆಹ್ವಾನಿಸಿದರೇ? ರಮೇಶ ಜಾರಕಿಹೊಳಿ ಹೇಳಿಕೆ ಎಷ್ಟರಮಟ್ಟಿಗೆ ಗಂಭೀರವಾಗಿದೆ?
ಇಂತಹ ಹಲವಾರು ಪ್ರಶ್ನೆಗಳಿಗೆ ಸಂಬಂಧಿಸಿದವರೇ ಉತ್ತರ ನೀಡಬೇಕು. ಕಾಂಗ್ರೆಸ್ ಮೂಲಗಳ ಪ್ರಕಾರ ಬಿಜೆಪಿಯ ಬೆಳಗಾವಿ ಜಿಲ್ಲೆಯ 3 -4 ಶಾಸಕರು ಕಾಂಗ್ರೆಸ್ ಸೇರಲು ಸಿದ್ಧತೆ ನಡೆಸಿದ್ದಾರೆ. ಆದರೆ ಅವರೂ ಯಾರು ಎನ್ನುವುದನ್ನು ಬಹಿರಂಗಪಡಿಸಿಲ್ಲ. ಎಲ್ಲವೂ ಊಹಾಪೋಹಗಳೇ? ಅಥವಾ ಗಟ್ಟಿತನವೇನಾದರೂ ಇದೆಯೇ?
ಈ ಎಲ್ಲ ಬೆಳವಣಿೆಗಗಳನ್ನು ಗಮನಿಸಿದರೆ, ರಾಜ್ಯ ರಾಜಕಾರಣದಲ್ಲಿ ಸದಾ ಸದ್ದು ಮಾಡುವ ಬೆಳಗಾವಿ ಜಿಲ್ಲೆಯಲ್ಲಿ ಈ ಬಾರಿ ದೊಡ್ಡ ಮಟ್ಟದಲ್ಲಿ ರಾಜಕೀಯ ಧೃವೀಕರಣ ನಡೆಯುವ ಸಾಧ್ಯತೆ ಕಾಣುತ್ತಿದೆ.
ಇನ್ನು 2-3 ತಿಂಗಳಲ್ಲಿ ಅಂತಹ ಚಿತ್ರಣ ಸ್ಪಷ್ಟವಾಗಬಹುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ