ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ನಿಧನದಿಂದಾಗಿ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಗೆ ಬಿಜೆಪಿ ಪಾಳಯದಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿದೆ.
ಟಿಕೆಟ್ ಪಡೆಯಲು ಡಜನ್ ಗಿಂತ ಹೆಚ್ಚು ಬಿಜೆಪಿ ಕಾರ್ಯಕರ್ತರು ಓಡಾಡುತ್ತಿದ್ದಾರೆ. ಬಿಜೆಪಿಯಲ್ಲಿ ಈಚೆಗೆ ಹೊಸ ಮುಖಗಳನ್ನು ಪರಿಚಯಿಸುತ್ತಿರುವ ಹಿನ್ನೆಲೆಯಲ್ಲಿ ಸಣ್ಣ ಪುಟ್ಟ ಕಾರ್ಯಕರ್ತರೂ ಲೋಕಸಭೆ ಟಿಕೆಟ್ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಈ ಮಧ್ಯೆ ಮಾಜಿ ಮುಖ್ಯಮಂತ್ರಿ, ಹಾಲಿ ಕೈಗಾರಿಕೆ ಸಚಿವ, ಸುರೇಶ ಅಂಗಡಿಯವರ ಬೀಗರೂ ಆಗಿರುವ ಜಗದೀಶ ಶೆಟ್ಟರ್ ನೇರವಾಗಿ ಆಖಾಡಕ್ಕಿಳಿದಿದ್ದಾರೆ. ಸುರೇಶ ಅಂಗಡಿಯವರ ಮಗಳಾಗಿರುವ ತಮ್ಮ ಸೊಸೆಯನ್ನು ಕಣಕ್ಕಿಳಿಸಬೇಕೆನ್ನುವ ಕುರಿತು ಹಲವಾರು ಆಪ್ತರೊಂದಿಗೆ ಜಗದೀಶ ಶೆೆಟ್ಟರ್ ಚರ್ಚಿಸಿದ್ದಾರೆ.
ಶೃದ್ಧಾ ಶೆಟ್ಟರ್ ಸುರೇಶ ಅಂಗಡಿಯವರ ಎರಡನೇ ಮಗಳು. ಜಗದೀಶ ಶೆಟ್ಟರ್ ಪುತ್ರ ಸಂಕಲ್ಪ ಶೆಟ್ಟರ್ ಪತ್ನಿ. ಹುಬ್ಬಳ್ಳಿಯಲ್ಲೇ ವಾಸವಾಗಿದ್ದಾರೆ.
ಸುರೇಶ ಅಂಗಡಿಯವರ ಪತ್ನಿಯ ಹೆಸರು ಬಂತಾದರೂ ಅವರು ಆಸಕ್ತರಾಗಿಲ್ಲ ಎನ್ನುವ ಮಾತು ಕೇಳಿಬಂದಿದೆ. ಸುರೇಶ ಅಂಗಡಿಯವರ ಮೊದಲ ಮಗಳು ಡಾ. ಸ್ಫೂರ್ತಿ ಸುರೇಶ ಅಂಗಡಿ ಎಜುಕೇಶನ್ ಇನಸ್ಟಿಟ್ಯೂಶನ್ ಗಳನ್ನು ನೋಡಿಕೊಳ್ಳುತ್ತಾರೆ. ಅವರೂ ರಾಜಕೀಯಕ್ಕೆ ಎಂಟ್ರಿ ಕೊಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಶೃದ್ಧಾ ಶೆಟ್ಟರ್ ಅವರನ್ನು ಚುನಾವಣೆಗೆ ರೆಡಿ ಮಾಡಲು ಶೆಟ್ಟರ್ ಮುಂದಾಗಿದ್ದಾರೆ. ಹುಬ್ಬಳ್ಳಿಯವರಾಗಿರುವ ಅವರನ್ನು ಬಿಜೆಪಿ ಕಾರ್ಯಕರ್ತರಾಗಲಿ, ಬೆಳಗಾವಿಯ ಜನರಾಗಲಿ ಒಪ್ಪುತ್ತಾರಾ? ಕಾದು ನೋಡಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ