ಪ್ರಗತಿವಾಹಿನಿ ಸುದ್ದಿ, ರಾಮದುರ್ಗ: ಭಾರತೀಯ ಜನತಾ ಪಾರ್ಟಿಯ ಹಾಲಿ ಶಾಸಕರಿದ್ದರೂ ಅನೇಕ ಕ್ಷೇತ್ರಗಳಲ್ಲಿ ಟಿಕೆಟ್ ಗಾಗಿ ಪೈಪೋಟಿ ಜೋರಾಗಿದೆ. ಅವುಗಳಲ್ಲಿ ರಾಮದುರ್ಗ ಕೂಡ ಒಂದು.
ರಾಮದುರ್ಗದ ಹಾಲಿ ಶಾಸಕ ಮಹಾದೇವಪ್ಪ ಯಾದವಾಡ ಅವರಿಗೆ ವಯಸ್ಸಾಗಿದೆ ಎನ್ನುವ ಕಾರಣಕ್ಕೆ ಮತ್ತು ಕಾರ್ಯಕರ್ತರನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ ಎನ್ನುವ ಕಾರಣಕ್ಕೆ ಅವರಿಗೆ ಈ ಬಾರಿ ಟಿಕೆಟ್ ನೀಡಬಾರದು. ಬೇರೆಯವರಿಗೆ ಟಿಕೆಟ್ ನೀಡಬೇಕು ಎನ್ನುವ ಕೂಗು ಪಕ್ಷದೊಳಗೆ ಜೋರಾಗಿದೆ. ಮಹಾದೇವಪ್ಪ ಯಾದವಾಡ ಅವರಿಗೆ ಈಗ 74 ವರ್ಷ. ಬಿಜೆಪಿಯ ನಿಯಮಾವಳಿ ಪ್ರಕಾರ 75 ವರ್ಷ ವಯಸ್ಸಾದವರಿಗೆ ಅಧಿಕಾರ ನೀಡಲಾಗುತ್ತಿಲ್ಲ.
ಹಾಗಾಗಿ ಹಲವಾರು ಆಕಾಂಕ್ಷಿಗಳು ಟಿಕೆಟ್ ಗಾಗಿ ಲಾಬಿ ನಡೆಸಿದ್ದಾರೆ. ಕೆಲವರು ಬಹಿರಂಗವಾಗಿಯೇ ಟಿಕೆಟ್ ಕೇಳಿದ್ದರೆ, ಕೆಲವರು ಒಳಗಿಂದೊಳಗೆ ಪ್ರಯತ್ನ ನಡೆಸಿದ್ದಾರೆ. ಮಹಾದೇವಪ್ಪ ಯಾದವಾಡ ಅವರ ಸಹೋದರ ಮಲ್ಲಣ್ಣ ಯಾದವಾಡ ಅವರು ಸಹ ಟಿಕೆಟ್ ಗಾಗಿ ಪ್ರಯತ್ನಿಸುತ್ತಿರುವುದು ವಿಶೇಷವಾಗಿದೆ. ವಯಸ್ಸಾಗಿದೆ ಎನ್ನುವ ಕಾರಣಕ್ಕೆ ಅಣ್ಣನನ್ನು ಕೈಬಿಟ್ಟರೆ ತಮ್ಮನ್ನು ಪರಿಗಣಿಸುವಂತೆ ಮಲ್ಲಣ್ಣ ಕೋರಿಕೆ ಇಟ್ಟಿದ್ದಾರೆ.
ರಮೇಶ ದೇಶಪಾಂಡೆ, ಡಾ.ಕೆ.ವಿ.ಪಾಟೀಲ, ಪಿ.ಎಫ್.ಪಾಟೀಲ ಮೊದಲಾದವರು ಪ್ರಯತ್ನ ನಡೆಸಿದ್ದಾರೆ. ತಮ್ಮ ತಮ್ಮ ಗಾಡ್ ಫಾದರ್ ಮೂಲಕ ಎಲ್ಲರೂ ಲಾಬಿ ನಡೆಸಿದ್ದಾರೆ.
ತಮಗೆ ಟಿಕೆಟ್ ನೀಡಬೇಕೆಂದು ಬಿಜೆಪಿ ಗ್ರಾಮೀಣ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಡಾ.ರೇಖಾ ಚಿನ್ನಾಕಟ್ಟಿ ಸಹ ಪ್ರತಿಪಾದಿಸುತ್ತಿದ್ದಾರೆ.
ರಾಜ್ಯದಲ್ಲಿ ಕ್ಷತ್ರೀಯ ಸಮಾಜದಿಂದ ಯಾರೊಬ್ಬರಿಗೂ ಟಿಕೆಟ್ ನೀಡಲಾಗಿಲ್ಲ. ರಾಮದುರ್ಗ ಕ್ಷೇತ್ರದಲ್ಲಿ ಕ್ಷತ್ರೀಯ ಸಮಾಜದ 26 ಸಾವಿರ ಮತಗಳಿವೆ. ರೇಖಾ ಚಿನ್ನಾಕಟ್ಟಿ ಅವರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ, ತಾಲೂಕು ಪಂಚಾಯಿತಿ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಅವರಿಗೆ ಟಿಕೆಟ್ ನೀಡಬೇಕೆಂದು ಅವರ ಬೆಂಬಲಿಗರು ಮಂಗಳವಾರ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಒತ್ತಾಯಿಸಿದರು.
ಈ ಎಲ್ಲ ಕಾರಣದಿಂದ ಈ ಬಾರಿ ರಾಮದುರ್ಗದಲ್ಲಿ ಅಭ್ಯರ್ಥಿ ಬದಲಾಗಲಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ. ಕಾಂಗ್ರೆಸ್ ನಿಂದ ಮಾಜಿ ಶಾಸಕ ಅಶೋಕ ಪಟ್ಟಣ ಅವರ ಹೆಸರು ಈಗಾಗಲೆ ಫೈನಲ್ ಆಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ