ವಿಧಾನ ಪರಿಷತ್ ಸದಸ್ಯರ ಮೇಲಿನ ಕಳಂಕ ನಿವಾರಣೆಯಾಗುವ ರೀತಿ ಕೆಲಸ – ಚನ್ನರಾಜ ಹಟ್ಟಿಹೊಳಿ
ಪಂಚಾಯಿತಿ ಸದಸ್ಯರ ಗೌರವಧನ ಹೆಚ್ಚಳಕ್ಕೆ ಪ್ರಯತ್ನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವಿಧಾನಪರಿಷತ್ ಸದಸ್ಯರು ಒಮ್ಮೆ ಆಯ್ಕೆಯಾಗಿ ಹೋದ ನಂತರ 6 ವರ್ಷ ಇತ್ತ ಮುಖ ಹಾಕುವುದಿಲ್ಲ. ಮತ ಕೇಳುವುದಕ್ಕೆ ಮಾತ್ರ ಬರುತ್ತಾರೆ ಎನ್ನುವ ಕಳಂಕವಿದ್ದು ಇದನ್ನು ಹೋಗಲಾಡಿಸುವ ರೀತಿಯಲ್ಲಿ ಕೆಲಸ ಮಾಡುತ್ತೇನೆ ಎಂದು ವಿಧಾನ ಪರಿಷತ್ ನೂತನ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದ್ದಾರೆ.
ಪ್ರಮಾಣ ವಚನ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿಗೆ ಸೋಮವಾರ ಬೆಳಗಾವಿಗೆ ಆಗಮಿಸಿದ ಅವರು ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಇಡೀ ಜಿಲ್ಲೆಯನ್ನು ಸುತ್ತುಹಾಕಿ ಸ್ಥಳೀಯ ಸಂಸ್ಥೆಗಳ ಸಮಸ್ಯೆಗಳನ್ನು ತಿಳಿಯುತ್ತೇನೆ. ನಾಳೆಯಿಂದಲೇ ತಾಲೂಕುವಾರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸುತ್ತೇನೆ. ಎಲ್ಲರ ವಿಶ್ವಾಸ, ಸಹಕಾರದೊಂದಿಗೆ ಕೆಲಸ ನಿರ್ವಹಿಸುತ್ತೇನೆ ಎಂದು ಅವರು ತಿಳಿಸಿದರು.
ಇತಿಹಾಸದಲ್ಲೇ ಮೊದಲಬಾರಿಗೆ ದೊಡ್ಡ ಪ್ರಮಾಣದಲ್ಲಿ ಮೊದಲ ಪ್ರಾಶಸ್ತ್ಯದ ಮತಗಳಿಂದ ನನ್ನನ್ನು ಆಯ್ಕೆ ಮಾಡಿದ್ದಾರೆ. ಅವರ ವಿಶ್ವಾಸವನ್ನು ಉಳಿಸಿಕೊಂಡು, ನಮ್ಮ ಪಕ್ಷದ ಹಿರಿಯರಾದ ಸತೀಶ್ ಜಾರಕಿಹೊಳಿ, ವೀರಕುಮಾರ ಪಾಟೀಲ, ಪ್ರಕಾಶ ಹುಕ್ಕೇರಿ, ಎ.ಬಿ.ಪಾಟೀಲ, ಹಾಲಿ, ಮಾಜಿ ಶಾಸಕರು ಎಲ್ಲರ ಮಾರ್ಗದರ್ಶನದೊಂದಿಗೆ ಕೆಲಸ ಮಾಡುತ್ತೇನೆ ಎಂದು ಚನ್ನರಾಜ ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರ ಗೌರವಧನ ಹೆಚ್ಚಳ ಮಾಡುವ ದಿಸೆಯಲ್ಲಿ ಪ್ರಯತ್ನ ಮಾಡುತ್ತೇನೆ. ಗ್ರಾಮ ಪಂಚಯಿತಿಗಳ ಮೂಲಕ ಮನೆ ಹಂಚಿಕೆಯಾಗುವ ರೀತಿಯಲ್ಲಿ ಹೋರಾಟ ಮಾಡುತ್ತೇನೆ. ಸ್ಥಳಿಯ ಸಂಸ್ಥೆಳ ಹೆಚ್ಚಿನ ಅನುದಾನ ಹೆಚ್ಚಿಸಲು ಪ್ರಯತ್ನಿಸುತ್ತೇನೆ. ವಿಧಾನ ಪರಿಷತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನು ಕನಿಷ್ಟ 4 ಕೋಟಿ ರೂ.ಗಳಿಗೆ ಹೆಚ್ಚಿಸಲು ಪ್ರಯತ್ನ ಮಾಡುತ್ತೇನೆ ಎಂದು ವಿವರಿಸಿದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಎಲ್ಲದರಲ್ಲೂ ವಿಫಲವಾಗಿದೆ. ಬೆಲೆ ಏರಿಕೆ ಸೇರಿದಂತೆ ಎಲ್ಲದರಲ್ಲಿ ಜನಸಾಮಾನ್ಯರಿಗೆ ನ್ಯಾಯ ಸಿಗುತ್ತಿಲ್ಲ. ಬಿಜೆಪಿಯವರ ಸರ್ವಾಧಿಕಾರಿ ಧೋರಣೆ ಮಿತಿಮೀರಿದೆ. ಮೇಕೆದಾಟು ಯೋಜನೆಯಲ್ಲಿ ಸಹ ಜನರಿಗೆ ನೀರು ಕೊಡುವ ಮನಸ್ಸು ಮಾಡುತ್ತಿಲ್ಲ. 25 ಸಂಸದರು ಸೇರಿ ಕೇಂದ್ರಕ್ಕೆ ನಿಯೋಗ ಹೋಗಿ ಯೋಜನೆ ಜಾರಿಗೊಳಿಸಬಹುದಾಗಿತ್ತು. ಕಾಂಗ್ರೆಸ್ ಜನರ ಪರವಾಗಿ ಹೋರಾಟ ಮಾಡಿದರೆ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ಚನ್ನರಾಜ ಆರೋಪಿಸಿದರು.
ಜಿಲ್ಲೆಯಲ್ಲಿ ಕಾಂಗ್ರೆಸ್ ಪರ ವಾತಾವರಣ ನಿರ್ಮಾಣವಾಗಿದ್ದು, ಎಲ್ಲ ಹಿರಿಯರ ಮಾರ್ಗದರ್ಶನದಲ್ಲಿ ಜಿಲ್ಲಾ ಪ್ರವಾಸ ಮಾಡಿ ಕಾರ್ಯಕರ್ತರಲ್ಲಿ ಧೈರ್ಯ ತುಂಬುವ ಕೆಲಸ ಮಾಡುತ್ತೇನೆ. ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯಧಿಕ ಬಹುಮತದೊಂದಿಗೆ ಆಡಳಿತಕ್ಕೆ ಬರುವ ದಿಸೆಯಲ್ಲಿ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರದೀಪ ಮೊದಲಾದವರಿದ್ದರು.
ಇದೇ ವೇಳೆ ಚನ್ನರಾಜ ಹಟ್ಟಿಹೊಳಿ ಅವರನ್ನು ಸಾವಿರಾರು ಕಾರ್ಯಕರ್ತರು ಸಂಭ್ರಮದಿಂದ ಸ್ವಾಗತಿಸಿದರು.
ಬೆಳಗಾವಿ: ವಸತಿ ಶಾಲೆಯಲ್ಲಿ ಕೊರೋನಾ ಸ್ಫೋಟ: 80 ವಿದ್ಯಾರ್ಥಿನಿಯರು ಸೇರಿ 90 ಜನರಲ್ಲಿ ಸೋಂಕು ದೃಢ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ