*ಚಳಿಗಾಲದ ಅಧಿವೇಶನ: ಅಂತಿಮ ಹಂತದ ಸಿದ್ಧತೆ ಪರಿಶೀಲಿಸಿದ ಸಭಾಧ್ಯಕ್ಷರು*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯಲ್ಲಿ ಡಿಸೆಂಬರ್ 9 ರಿಂದ ಆರಂಭವಾಗಲಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರು ಡಿಸೆಂಬರ್ 08ರಂದು ಸುವರ್ಣ ವಿಧಾನಸೌಧಕ್ಕೆ ಭೇಟಿ ನೀಡಿ ಅಂತಿಮ ಹಂತದ ಸಿದ್ಧತೆಯನ್ನು ಪರಿಶೀಲಿಸಿದರು.
ಮೊದಲಿಗೆ ನೆಲಮಹಡಿಯ ಮಂತ್ರಿಗಳ ಕೊಠಡಿಯ ಕಾರಿಡಾರನಲ್ಲಿ ಸಂಚರಿಸಿದರು. ‘ಬಾಲಕ ಮೋಹನದಾಸ್ ಟು ಮಹಾತ್ಮ’ ಥೀಮ್ ಇಟ್ಟುಕೊಂಡು ಕೆಆರ್ ಐಡಿಎಲ್ ಬೆಳಗಾವಿ ವಿಭಾಗ ಇವರು ಸಿದ್ಧಪಡಿಸಿರುವ ಮಹಾತ್ಮ ಗಾಂಧೀಜಿ ಜೀವನಗಾಥೆಯ 100 ವಿಶೇಷವಾದ ಛಾಯಾಚಿತ್ರಗಳ ವೀಕ್ಷಣೆ ನಡೆಸಿದರು.
ಬಳಿಕ ಮೊದಲನೇ ಮಹಡಿಗೆ ಆಗಮಿಸಿದರು. ಅಧಿವೇಶನದ ಮೊದಲನೇ ದಿನದಂದು ಉದ್ಘಾಟನೆಗೆ ಸಿದ್ದವಾಗಿರುವ, ವಿಶ್ವದ ಮೊದಲ ಸಂಸತ್ತು ಖ್ಯಾತಿಯ ಅನುಭವ ಮಂಟಪದ ಬೃಹತ್ ತೈಲವರ್ಣ ಚಿತ್ರದ ವೀಕ್ಷಣೆ ನಡೆಸಿದರು.
ಬಳಿಕ ವಿಧಾನಸಭೆಯ ಮೊಗಸಾಲೆಗೆ ಭೇಟಿ ನೀಡಿದರು. ವಿಭಿನ್ನ ಶೈಲಿಯೊಂದಿಗೆ ಹೊಸದಾಗಿ ಸಿದ್ಧಪಡಿಸಿರುವ ಸಭಾಧ್ಯಕ್ಷರ ಪೀಠದ ವೀಕ್ಷಣೆ ನಡೆಸಿದರು.
ಇದೆ ವೇಳೆ ವಿಧಾನಸಭೆಯ ಸದಸ್ಯರ ಆಸನದ ವ್ಯವಸ್ಥೆಯನ್ನು ಸಹ ಪರಿಶೀಲಿಸಿದರು.
ಬಳಿಕ ನೆಲಮಹಡಿಗೆ ತೆರಳಿ, ಬೆಳಗಾವಿಯಲ್ಲಿ 1924 ರಲ್ಲಿ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಜರುಗಿದ “ಕಾಂಗ್ರೆಸ್ ಅಧಿವೇಶನ” ದ ಶತಮಾನೋತ್ಸವ ನೆನಪಿನ ವಿಶೇಷವಾದ ಛಾಯಾಚಿತ್ರಗಳ ಪ್ರದರ್ಶನದ ವೀಕ್ಷಣೆ ನಡೆಸಿದರು.
ಈ ವೇಳೆ ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ