ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧ ಎಂದ ಯಡಿಯೂರಪ್ಪ ಕಾಲೆಳೆದ ಟ್ರೋಲಿಗರು

ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧ ಎಂದ ಯಡಿಯೂರಪ್ಪ ಕಾಲೆಳೆದ ಟ್ರೋಲಿಗರು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: 
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು  ಬೆಂಗಳೂರು ಅಭಿವೃದ್ಧಿ ಕುರಿತಂತೆ ಸಭೆ ಜರುಗಿತು.
ಬೆಂಗಳೂರು ನಗರವನ್ನು ಸ್ವಚ್ಛವಾಗಿಡುವುದು ಸರ್ಕಾರದ ಆದ್ಯತೆಯಾಗಿದ್ದು, ಕಸ ವಿಲೇವಾರಿಗೆ  ಅಗತ್ಯವಿರುವ ಪೌರಕಾರ್ಮಿಕರನ್ನು ನೇಮಿಸಿಕೊಳ್ಳುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.  ಬೆಂಗಳೂರಿನ ರಸ್ತೆ, ಉದ್ಯಾನವನಗಳು ಸ್ವಚ್ಛವಾಗಿಡಲು  24 ಗಂಟೆಗಳ ಕಾಲ ಕೆಲಸ ಮಾಡಲು ಪೌರಕಾರ್ಮಿಕರನ್ನು ನೇಮಿಸುವ ಅಗತ್ಯವಿದೆ ಎಂದ ಮುಖ್ಯಮಂತ್ರಿಗಳು, ರಸ್ತೆಗಳಲ್ಲಿರುವ  ಗುಂಡಿಗಳನ್ನು ಕೂಡಲೇ  ಮುಚ್ಚುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು   ನಗರಸಭಾ ಸದಸ್ಯರು ಹಾಗೂ ಅಧಿಕಾರಿಗಳನ್ನು ಒಳಗೊಂಡ ಸ್ಥಳೀಯ ಸಮಿತಿ ರಚಿಸಿ, ಮಾಸಿಕ ಸಭೆ ಮಾಡಬೇಕು. ಈ ಸಭೆಯಲ್ಲಿ ಆಯಾ ಪ್ರದೇಶದ  ಅಭಿವೃದ್ಧಿ ಕುರಿತು ಚರ್ಚಿಸಿ  ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಎಂಟು ವಲಯಗಳಿಗೆ  ನಾಲ್ಕು  ವಿಶೇಷ ಆಯುಕ್ತರನ್ನು ಹೆಚ್ಚಿನ ಅಧಿಕಾರ ನೀಡಿ ನೇಮಿಸುವ ಬಗ್ಗೆ ಪರಿಶೀಲಿಸಿ ವರದಿ ನೀಡಲು ಮುಖ್ಯಮಂತ್ರಿಗಳು ಸೂಚಿಸಿದರು.
ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಪರಿಹಾರಗಳನ್ನು ಒದಗಿಸಲು ಬೆಂಗಳೂರು ಸಹಾಯವಾಣಿ ಸ್ಥಾಪನೆ ಹಾಗೂ ಕಸ ವಿಲೇವಾರಿಗೆ ಪರಿಹಾರವಾಗಿ ಬೆಂಗಳೂರಿನಲ್ಲಿ ಘನತ್ಯಾಜ್ಯ ಘಟಕಗಳನ್ನು ಸ್ಥಾಪಿಸಲು ಕ್ರಮಕೈಗೊಳ್ಳಲು ಸೂಚಿಸಿದರು.
ಸಭೆಯಲ್ಲಿ ಉಪಮುಖ್ಯಮಂತ್ರಿ ಗಳಾದ ಡಾ: ಸಿ.ಎನ್. ಅಶ್ವಥನಾರಾಯಣ್, ಸಂಸದ ರಾಜೀವ್ ಚಂದ್ರಶೇಖರ್,  ಪಿ.ಸಿ. ಮೋಹನ್, ಬಿ.ಬಿ.ಎಂ.ಪಿ ಆಯುಕ್ತರಾದ  ಅನಿಲ್ ಕುಮಾರ್, ಶಾಸಕ  ಎಸ್.ಆರ್ ವಿಶ್ವನಾಥ್, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಮತ್ತು ಮುಖ್ಯಮಂತ್ರಿಗಳ  ಅಪರ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಕಾರ್ಯದರ್ಶಿ ಶಿವಯೋಗಿ ಕಳಸದ್ ಹಾಗು ಮುಖ್ಯಮಂತ್ರಿಗಳ ಸಲಹೆಗಾರರ ಎಂ. ಲಕ್ಷ್ಮೀನಾರಾಯಣ ಉಪಸ್ಥಿತರಿದ್ದರು.

ಉತ್ತರ ಕರ್ನಾಟಕಕ್ಕೆ ಬನ್ನಿ

ಬೆಂಗಳೂರಿನ ಸಮಗ್ರ ಅಭಿವದ್ಧಿಗೆ ಬದ್ದ ಎಂದು ಮುಖ್ಯಮಂತ್ರಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಮೊದಲು ಪ್ರವಾಹ ಪೀಡಿತ ಪ್ರದೇಶಗಳನ್ನು ಸರಿಪಡಿಸಿ. ಸಾಯುತ್ತಿರುವ ರೈತರನ್ನು ನೋಡಿ, ಉತ್ತರ ಕರ್ನಾಟಕಕ್ಕೆ ಬನ್ನಿ ಎಂದೆಲ್ಲ ಉತ್ತರಿಸುತ್ತಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button