ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಸಿದ್ದರಾಮಯ್ಯನವರೇ, ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲೆಂದು ರಾಹುಲ್ ಗಾಂಧಿಯಂತಹ ಅಪ್ರಬುದ್ಧ ನಾಯಕನಿಗೆ ಉಧೋ..ಉಧೋ ಎನ್ನುವ ನಿಮಗೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ? ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಟ್ವೀಟರ್ ನಲ್ಲಿಯೇ ತಿರುಗೇಟು ನೀಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಿಜವಾದ ರಾಮ ಭಕ್ತರಾಗಿದ್ದರೆ ಅಯೋಧ್ಯೆ ರಾಮ ರಾಮ ಮಂದಿರದಲ್ಲಿ ನಿಂತು ಪ್ರಮಾಣ ಮಾಡಲಿ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.
ಇದರಿಂದ ಆಕ್ರೋಶಗೊಂಡಿರುವ ಬಿಜೆಪಿ ನಾಯಕರೆಲ್ಲ ಈಗ ಸಿಎಂ ಮೇಲೆ ಮುಗಿ ಬಿದ್ದಿದ್ದು, ಸಚಿವ ಪ್ರಹ್ಲಾದ್ ಜೋಶಿ ಅವರೂ ಸಿಎಂ ವಿರುದ್ಧ ಹರಿ ಹಾಯ್ದಿದ್ದಾರೆ.
ಗಾಜಿನ ಮನೆಯಲ್ಲಿ ಇದ್ದುಕೊಂಡು ಬೇರೆಯವರ ಮನೆಗೆ ಕಲ್ಲು ತೂರುವುದು ಕಾಂಗ್ರೆಸ್ ಹಳೆಯ ಚಾಳಿ. ಅದನ್ನೇ ನೀವೂ ಮುಂದುವರೆಸುತ್ತಿದ್ದೀರಿ. ಇದು ಶೋಭೆ ತರುವಂಥದ್ದಲ್ಲ ಎಂದು ಸಿಎಂಗೆ ಸೂಚ್ಯವಾಗಿ ಹೇಳಿದ್ದಾರೆ ಜೋಶಿ ಅವರು.
ಚುನಾವಣಾ ಪೂರ್ವ ನೀಡಿದ ಆಶ್ವಾಸನೆಗಳನ್ನು ಪೂರೈಸಲಾಗದ ನಿಮಗೆ ಪ್ರಧಾನಿಯವರನ್ನು ಟೀಕಿಸುವ ನೈತಿಕತೆ ಇಲ್ಲ ಎಂದು ಪ್ರಹ್ಲಾದ ಜೋಶಿ ಸಿಎಂ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದಾರೆ.
1962ರ ಯುದ್ಧದ ಸಂದರ್ಭದಲ್ಲಿ ಸೈನಿಕರಿಗೆ ಸರಿಯಾದ ಶಸ್ತ್ರಾಸ್ತ್ರ, ಬೂಟುಗಳನ್ನೂ ಕೊಡದೇ ಸಾಯಲು ಬಿಟ್ಟಿದ್ದು ನಿಮ್ಮ ಕಾಂಗ್ರೆಸ್ ಪಕ್ಷವೇ ಎಂದು ಸಿಎಂಗೆ ತಿರುಗು ಬಾಣ ಬಿಟ್ಟಿದ್ದಾರೆ.
34000 ಚದರ ಕಿಲೋಮೀಟರ್ ಭಾರತದ ಅಕ್ಸಾಯ್ ಚಿನ್ ಅನ್ನು ಚೈನಾ ತೆಕ್ಕೆಗೆ ಹಾಕಿದ್ದು ಜವಹಾರ್ ಲಾಲ್ ನೆಹರೂ ಅವರು ಪ್ರಧಾನಿಯಾಗಿದ್ದಾಗ ಎಂಬುದನ್ನು ಮರೆಯಬೇಡಿ. ಅಂದು
ಟಿಬೆಟ್ ಪ್ರಾಂತ್ಯ ಚೈನಾದ ಕೈವಶವಾಗುವಂತೆ ಮಾಡಿದ್ದು, ಇಂದು ಚೈನಾವನ್ನು ನಮ್ಮ ನೆರೆ ರಾಷ್ಟವನ್ನಾಗಿ ಮಾಡಿದ್ದು ನಿಮ್ಮ ಕಾಂಗ್ರೆಸ್ ಘನ ಸರ್ಕಾರವೇ ಅಲ್ಲವೇ? ಎಂದು ಜೋಶಿ ಪ್ರಶ್ನಿಸಿದ್ದಾರೆ.
ಸೈನಿಕರಿಗೆ, ದೇಶಕ್ಕೆ ಅಗೌರವ ತೋರುವುದು ನಿಮ್ಮಗಳ ಅನುವಂಶಿಕ ಗುಣ ಮತ್ತು ನಮ್ಮ ದೌರ್ಭಾಗ್ಯವಾಗಿದೆ. ಸರ್ಜಿಕಲ್ ಸ್ಟ್ರೈಕ್ ಆದಾಗಲೂ ಸಾಕ್ಷಿ ಕೇಳಿದ ಮಹಾತ್ಮರು ನೀವು. ಇನ್ನು ಚೀನಾ ವಿಚಾರವಾಗಿ ಮೋದಿ ಸರ್ಕಾರದ ದಿಟ್ಟ ನಿಲುವುಗಳನ್ನು ನಿಮ್ಮಂಥ ಮೂಢರಿಂದ ಒಪ್ಪಲು ಸಾಧ್ಯವೇ? ಎಂದು ಸಚಿವ ಪ್ರಹ್ಲಾದ್ ಜೋಶಿ ಟೀಕಿಸಿದ್ದಾರೆ.
ಇನ್ನು, ಸಹಕಾರಿ ತತ್ವಗಳ ವಿಚಾರದಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಹಲವಾರು ಬದಲಾವಣೆ ಮಾಡಿ ನೀತಿ ಆಯೋಗದ ಮೂಲಕ ಜಾರಿಗೊಳಿಸಿದೆ. ಬರ ಪರಿಹಾರ ನಿಧಿ ಹಂಚಿಕೆಯಲ್ಲೂ ಕೇಂದ್ರ ಸರ್ಕಾರ ಯಾವುದೇ ತಾರತಮ್ಯ ತೋರಿಲ್ಲ. ಅದು ನಿಮಗೂ ತಿಳಿದಿರುವ ವಿಚಾರವೇ. ಆದರೆ ಸ್ವಾರ್ಥಕ್ಕೆ ಕಂತೆ ಕಂತೆ ಸುಳ್ಳುಗಳನ್ನು ಹೇಳುತ್ತಿದ್ದೀರಿ ಎಂದು ಜೋಶಿ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ