*ಯುವನಿಧಿ ಯೋಜನೆ: ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಸಚಿವ ಶರಣ ಪ್ರಕಾಶ್ ಪಾಟೀಲ್*
ಸಾಮಾಜಿಕ ಜಾಲ ತಾಣ ಬಳಸಿಕೊಳ್ಳಲು ಸಲಹೆ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಸರ್ಕಾರದ ಮಹಾತ್ವಕಾಂಕ್ಷೆಯ ಯುವನಿಧಿ ಯೋಜನೆಗೆ ಅರ್ಹ ಫಲಾನುಭವಿಗಳ ಹೆಸರುಗಳನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ನೊಂದಾಯಿಸಲು ಅಗತ್ಯಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಭಿವೃದ್ದಿ ಹಾಗೂ ಜೀವನೋಪಾಯ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಶಿವಮೊಗ್ಗ ನಗರದಲ್ಲಿ ಇದೇ ತಿಂಗಳ 12 ರಂದು ಯುವನಿಧಿ ಕಾರ್ಯಕ್ರಮದ ಉದ್ಘಾಟನೆಯಾಗಲಿರುವ ಹಿನ್ನಲೆಯಲ್ಲಿ ಗುರುವಾರ ವಿಕಾಸಸೌಧದಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯ ನಿರ್ವಾಹಣಾ ಅಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು. ಕೆಲವು ಜಿಲ್ಲೆಗಳಲ್ಲಿ ನಿರೀಕ್ಷಿತ ಪ್ರಮಾಣದ ನೊಂದಣಿ ಆಗದಿರುವುದಕ್ಕೆ ಅಧಿಕಾರಿಗಳಿಂದ ವಿವರಣೆ ಪಡೆದರು. ರಾಜ್ಯದ ಎಲ್ಲಾ ಜಿಲ್ಲೆಗಳ ಅಂಕಿ- ಸಂಖ್ಯೆಯನ್ನು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಸಚಿವರು, ಅಧಿಕಾರಿಗಳು ಹೆಚ್ಚು ಸಕ್ರಿಯರಾಗುವಂತೆ ಸೂಚನೆ ನೀಡಿದರು.
ಪದವಿ ಕಾಲೇಜುಗಳು, ಡಿಪ್ಲೊಮಾ, ಇಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರು, ಪ್ರಾಂಶುಪಾಲರ
ಜೊತೆಗೆ ಕೂಡಲೇ ಸಭೆ ನಡೆಸಿ ಗರಿಷ್ಠ ಪ್ರಮಾಣದಲ್ಲಿ ನೊಂದಣಿ ಮಾಡಿಸಬೇಕು. ಸರ್ಕಾರದ ಈ ಯೋಜನೆ ಪರಿಣಾಮಕಾರಿ ಅನುಷ್ಠಾನವಾಗಲು ಶಕ್ತಿ ಮೀರಿ ಪ್ರಯತ್ನ ಮಾಡಬೇಕು ಎಂದು ಸಚಿವ ಪಾಟೀಲ್ ಹೇಳಿದರು. ನಗರಸಭೆ, ಪುರಸಭೆ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಗ್ರಾಮ ಪಂಚಾಯತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಮೂಲಕ ವ್ಯಾಪಕ ಪ್ರಚಾರ ನಡೆಸಬೇಕು. ಯೋಜನೆಯಿಂದ ಸಿಗುವ ಲಾಭದ ಬಗ್ಗೆ ಮನವರಿಕೆ ಮಾಡುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ಅಧಿಕಾರಿಗಳು ಹೆಚ್ಚು ಹೆಚ್ಚು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಬೇಕು. ವಾಟ್ಸಪ್, ಫೇಸ್ ಬುಕ್, ಇನ್ಟಾ ಗ್ರಾಂ, ಮೇಸೆಜ್ ಸೇರಿದಂತೆ ಅನೇಕ ರೀತಿಯ ವೇದಿಕೆಗಳನ್ನು ಬಳಸಿಕೊಳ್ಳಬೇಕು. ಇದರಿಂದ ಹೆಚ್ಚು ಜನರಿಗೆ ತಲುಪಲಿದೆ ಎಂದು ಅಭಿಪ್ರಾಯಪಟ್ಟರು.
ಪ್ರತಿಯೊಂದು ಕಾಲೇಜು ಮುಂಭಾಗ ಬೃಹತ್ ಪ್ರಮಾಣದ ಕಟ್ ಔಟ್, ಹೋರ್ಡಿಂಗ್ ಹಾಕಬೇಕು. ಅಲ್ಲದೇ, ಗ್ರಾಮ ಪಂಚಾಯತಿಗಳು ಮತ್ತು ಪ್ರತಿ ಗ್ರಾಮದಲ್ಲೂ ಊರಿನ ಮುಂಭಾಗ ಫ್ಲೆಕ್ಸ್ ಆಳವಡಿಸಲು ಸೂಚನೆ ನೀಡಿದರು.
ಇನ್ನು ಅಭ್ಯರ್ಥಿಗಳ ನೊಂದಾಣಿ ವೇಳೆ ನಕಲಿ ಪ್ರಮಾಣಪತ್ರ ಸಲ್ಲಿಕೆ ಆಗದಂತೆ ನೋಡಿಕೊಳ್ಳಬೇಕು. ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯಗಳು ಡಿಪ್ಲೊಮಾ, ಇಂಜಿನಿಯರಿಂಗ್, ವೈದ್ಯಕೀಯ ಕಾಲೇಜಿನ ಮಾನ್ಯತೆಯನ್ನು ಕಡ್ಡಾಯವಾಗಿ ಪರಿಶೀಲನೆ ನಡೆಸಬೇಕು. ಒಂದು ವೇಳೆ ಪ್ರಮಾದ ಕಂಡು ಬಂದರೆ, ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವುದಾಗಿ ಸಚಿವ ಶರಣ್ ಪ್ರಕಾಶ್ ಪಾಟೀಲ್ ಎಚ್ಚರಿಕೆ ನೀಡಿದರು.
ಇಂದು ಬೆಳಿಗ್ಗೆ ಸಚಿವ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ವಿಕಾಸಸೌಧದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ಸಾಕ್ಷರತ ಮತ್ತು ಶಾಲಾ ಶಿಕ್ಷಣ ಸಚಿವ ಮಧುಬಂಗಾರಪ್ಪ , ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಹಾಗೂ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಕೌಶಲ್ಯಭಿವೃದ್ದಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್, ವಾರ್ತ ಮತ್ತು ಪ್ರಚಾರ ಇಲಾಖೆಯ ಕಾರ್ಯದರ್ಶಿ ತ್ರಿಲೋಕ ಚಂದ್ರ, ಇಲಾಖಾ ಆಯುಕ್ತ ಹೇಮಂತ್ ನಿಂಬಾಳ್ಕರ್, ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಎಂ.ಎಸ್.ಶ್ರೀಕರ್, ಕೌಶಲ್ಯಭಿವೃದ್ದಿ ಇಲಾಖೆಯ ಆಯುಕ್ತೆ ರಾಗಪ್ರಿಯ ಸೇರಿದಂತೆ ಮತ್ತಿತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ