ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಎಪ್ಪತ್ತರ ದಶಕದಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯ ಹುಟ್ಟಿಗೆ ಕಾರಣವಾದ ಆಶಯಗಳು ಇಂದು ಅಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿವೆಯೆಂದು ಖ್ಯಾತ ಬಂಡಾಯ ಸಾಹಿತಿ,” ನಾಡೋಜ” ಡಾ.ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.
ಬಂಡಾಯ ಸಂಘಟನೆಗೆ ನಲವತ್ತು ವರ್ಷಗಳು ತುಂಬಿದ ಸಂದರ್ಭದಲ್ಲಿ ಬೆಳಗಾವಿಯ ಬಾಳೇಕುಂದ್ರಿ ಇಂಜನಿಯರಿಂಗ್ ಇನ್ ಸ್ಟಿಟ್ಯೂಟನಲ್ಲಿ ಆರಂಭವಾದ ” ಸೈದ್ಧಾಂತಿಕ ಅನುಸಂಧಾನ” ದ ಎರಡು ದಿನಗಳ ಕಾರ್ಯಾಗಾರದ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳು ಮತ್ತು ಪ್ರಗತಿಪರರು ಒಗ್ಗೂಡಿದ ಪರಿಣಾಮವಾಗಿಯೇ 1979 ರ ಮಾರ್ಚ 11 ರಂದು ಬಂಡಾಯ ಸಾಹಿತ್ಯ ಸಂಘಟನೆಯು ಅಸ್ತಿತ್ವಕ್ಕೆ ಬಂದಿದ್ದು ಇವೆಲ್ಲ ಶಕ್ತಿಗಳು ಇಂದು ಮತ್ತೊಮ್ಮೆ ಒಗ್ಗೂಡುವ ಅವಶ್ಯಕತೆಯಿದೆ ಎಂದು ಬರಗೂರು ಒತ್ತಿ ಹೇಳಿದರು.
” ಶುದ್ಧ ಸಾಹಿತ್ಯದ” ಪ್ರತಿಪಾದಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಬರಗೂರು ಅವರು,ಚಳವಳಿಗಳಿಂದ ದೂರ ಉಳಿಯುವ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸದ ಸಾಹಿತ್ಯವನ್ನು ರಚಿಸುತ್ತೇವೆ ಎಂದು ಸಾಂಸ್ಕೃತಿಕ ನಗರದಲ್ಲಿ ಕುಳಿತು ಅಪ್ಪಣೆ ಕೊಡಿಸಿದ ಮೂಲಭೂತವಾದಿಗಳು ಇದ್ದಾರೆಂದು ಕುಟುಕಿದರು.
ಕುವೆಂಪು ಅವರು 1928 ರಲ್ಲಿ ರಚಿಸಿದ ನಾಡಗೀತೆಯಲ್ಲಿನ ” ಸರ್ವ ಜನಾಂಗದ ಶಾಂತಿಯ ತೋಟದಲ್ಲಿ” ಇಂದು ಕೆಲವರು ನೀರು ಬಿಡುವ ಬದಲಾಗಿ ವಿಷ ಹರಿಸುತ್ತಿದ್ದಾರೆಂದು ಬರಗೂರು ಟೀಕಿಸಿದರು.
ಸಂವಿಧಾನ ವಿರೋಧಿ, ಮನುಷ್ಯತ್ವದ ವಿರೋಧಿ ಶಕ್ತಿಗಳು ಇಂದು ಹೆಚ್ಚೆಚ್ಚು ತಲೆಯೆತ್ತುತ್ತಿದ್ದು ಈ ಸನ್ನಿವೇಶದಲ್ಲಿ ನಮ್ಮ ಪಾತ್ರವೇನು? ಎಂದು ನಮ್ಮನ್ನು ನಾವು ಕೇಳಿಕೊಳ್ಳಬೇಕಾಗಿದೆ ಎಂದ ಬರಗೂರು,ಯುವಪೀಳಿಗೆಗೆ ಬೌದ್ಧಿಕ ದಿಕ್ಸೂಚಿ ಕೊಡುವ ಕೆಲಸವನ್ನು ನಾವು ಮಾಡಬೇಕಾಗಿದೆ ಎಂದರು.
ಉದ್ಘಾಟನೆಯನ್ನು ನೆರವೇರಿಸಿದ ಮಹಾರಾಷ್ಟ್ರದ ಖ್ಯಾತ ದಲಿತ ಸಾಹಿತಿ ಶ್ರವಣಕುಮಾರ ನಿಂಬಾಳೆ ಮಾತನಾಡಿ ಪ್ರಧಾನಿ ಮೋದಿಯವರು ರಸ್ತೆ,ಚರಂಡಿಗಳನ್ನು ಸ್ವಚ್ಛ ಮಾಡುತ್ತಿದ್ದು ಈ ಸಮಾಜದಲ್ಲಿಯ ಮೂಲಭೂತವಾದಿಗಳ ಮೆದುಳಿನಲ್ಲಿಯ ವಿಚಾರಗಳನ್ನು ಬದಲಿಸಬೇಕಾಗಿದೆ ಎಂದರು.
ಆರ್.ಜಿ.ಹಳ್ಳಿ ನಾಗರಾಜ, ಸರಜೂ ಕಾಟ್ಕರ್ ಮಾತನಾಡಿದರು. ಬಂಡಾಯ ಸಾಹಿತ್ಯ ಸಂಘಟನೆಯ ಜಿಲ್ಲಾ ಸಂಚಾಲಕ ವೈ.ಬಿ.ಹಿಮ್ಮಡಿ ಅವರು ಆರಂಭದಲ್ಲಿ ಸ್ವಾಗತಿಸಿ ಕೊನೆಗೆ ಆಭಾರಮನ್ನಿಸಿದರು.
ರಾಜ್ಯದ ಖ್ಯಾತ ಸಾಹಿತಿಗಳು,ಬಂಡಾಯದ ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದು ವಿವಿಧ ಗೋಷ್ಠಿಗಳು ನಡೆಯಲಿವೆ .ನಾಳೆ ರವಿವಾರ ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ.