Latest

ಡಾ. ಸೋನಾಲಿ ಸರ್ನೋಬತ್ ಅವರ ಹೊಸ ಪುಸ್ತಕ ‘ಡಯೆಟ್ ಮತ್ತು ನಾನು’ ಮಾರುಕಟ್ಟೆಗೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಇಲ್ಲಿಯ ಪ್ರಸಿದ್ಧ ಹೋಮಿಯೋಪಥಿ ವೈದ್ಯೆ, ನಿಯತಿ ಫೌಂಡೇಶನ್ ಅಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್ ಅವರು ಹೊಸ ಪುಸ್ತಕ ‘ಡಯೆಟ್ ಮತ್ತು ನಾನು’ ಮಾರುಕಟ್ಟೆಗೆ ಬಿಡುಗಡೆಯಾಗಿದೆ. 
21ನೇ ಶತಮಾನದ ಜೀವನ ಶೈಲಿ ಅತ್ಯಂತ ವೇಗವಾಗಿದ್ದು, ತೀವ್ರ ಒತ್ತಡ ದಿಂದ ಕೂಡಿದೆ. ಗುರಿಯನ್ನು ಮುಟ್ಟುವುದಕ್ಕಾಗಿ ತಮ್ಮ ಬಗ್ಗೆ ತಾವೇ ಯೋಜಿಸದೆ ಓಡುತ್ತಿದ್ದಾರೆ. ಇಂತಹ ಜೀವನ ಶೈಲಿ ಜನರ ಆರೋಗ್ಯವನ್ನು ಅವನತಿಯತ್ತ ಕೊಂಡೊಯ್ಯುತ್ತಿದೆ. ಅನಿಯಮಿತ ಊಟ, ತರಾತುರಿಯ ಕೆಲಸ,  ಅವೈಜ್ಞಾನಿಕ ಡಯೆಟ್ ಆರೋಗ್ಯವನ್ನು ನಿರ್ಲಕ್ಷ್ಯ ಮಾಡಿ ಹಲವಾರು ರೀತಿಯ ಖಾಯಿಲೆಗಳಿಗೆ  ಎಡೆಮಾಡಿಕೊಡುತ್ತಿದ್ದಾರೆ. ಇದರಿಂದಾಗಿ ಪದೇ ಪದೆ ವೈದ್ಯರ ಬಳಿ ಹೋಗುವುದು, ನೂರೆಂಟು ಪರೀಕ್ಷೆಗಳಿಗೆ ಒಳಪಡುವುದು, ಹತ್ತಾರು ರೀತಿಯ ಔಷಧಗಳನ್ನು ತೆಗೆದುಕೊಳ್ಳುವುದು, ತಮಗೆ ಇಷ್ಟವಾದ ಆಹಾರಗಳನ್ನೆಲ್ಲ ಬಿಟ್ಟು ವೈದ್ಯರ ಸಲಹೆಯಂತೆ ಆಹಾರ ಸೇವನೆ ಮಾಡುವುದು ಅನಿವಾರ್ಯವಾಗುತ್ತಿದೆ. ಇದೆಲ್ಲದರಿಂದ ಹೊರಬರಲು ಸಾಧ್ಯವಿಲ್ಲವೆ?
ಖಂಡಿತ ಸಾಧ್ಯವಿದೆ. ಅದಕ್ಕಾಗಿ ಆರೋಗ್ಯಕರ ಜೀವನ ಶೈಲಿ ಮತ್ತು ನಿಯಮಿತ ಡಯೆಟ್ ಅನುಸರಿಸಬೇಕು. ಪ್ರತಿಯೊಬ್ಬನ ಡಯೆಟ್ ಕೂಡ ಆತನ ಗುಣ ಸ್ವಭಾವ, ಜೀವನ ರಚನೆ ಮತ್ತು ವೈಕ್ತಿತ್ವವನ್ನು ಅವಲಂಭಿಸಿರುತ್ತದೆ. ಇಂದು ಜನಸಾಮಾನ್ಯರಲ್ಲಿ ಆರೋಗ್ಯದ ಜೀವನ ಶೈಲಿ ರೂಪಿಸುವುದಕ್ಕಾಗಿ ಅರಿವು ಮೂಡಿಸುವ ಸಾಕಷ್ಟು ಕಾರ್ಯಕ್ರಮಗಳು ನಡೆಯುತ್ತಿವೆ. ಹಲವಾರು ಇಲೆಕ್ಟ್ರಾನಿಕ್ಸ್ ಮೀಡಿಯಾಗಳಲ್ಲಿ ಸಹ ಆರೋಗ್ಯಕರ ಜೀವನದ ಕುರಿತು ತಜ್ಞರು ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಆದರೆ ಹಲವು ತಜ್ಞರು ತಮ್ಮ ತಮ್ಮ ಅನುಭವದ ಮೂಲಕ ಮಾತನಾಡುವುದರಿಂದ ಅನೇಕ ವೇಳೆ ಗೊಂದಲಗಳೂ ಉಂಟಾಗುತ್ತವೆ. ಇದಕ್ಕೆಲ್ಲ ತೆರೆ ಎಳೆಯುವಂತಹ ಪುಸ್ತಕವೊಂದನ್ನು ಬೆಳಗಾವಿಯ ವೈದ್ಯೆ, ಸಾಮಾಜಿಕ ಕಾರ್ಯಕರ್ತೆ ಡಾ.ಸೋನಾಲಿ ಸರ್ನೋಬತ್ ಬರೆದಿದ್ದಾರೆ. 
ಸೂಕ್ತವಾದ ಡಯೆಟ್ ಯಾವುದು ಎನ್ನುವುದನ್ನು ಈ ಪುಸ್ತಕದಲ್ಲಿ ಅವರು ನಿಖರವಾಗಿ ಬರೆದಿದ್ದಾರೆ. ಆರೋಗ್ಯಕರ ಆಹಾರ ಪದ್ಧತಿ ಎಂದರೇನು, ಅದರಲ್ಲಿ ಇರಬೇಕಾದ ಅಂಶಗಳೇನು, ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳೇನು ಮುಂತಾದ ಅಂಶಗಳನ್ನು ಅಂತ್ಯತ ಸರಳವಾಗಿ ಅರ್ಥವಾಗುವಂತೆ ಬರೆದಿದ್ದಾರೆ. ನಮಗೆ ಹಸಿವಾದಂತೆ ಅನಿಸುವುದು ಏಕೆ, ನೀರು ಕುಡಿಯುವುದರ ಮಹತ್ವವೇನು ಇತ್ಯಾದಿಯನ್ನು ವಿವರಿಸಿದ್ದಾರೆ.
ತೂಕ ಇಳಿಸುವುದಕ್ಕಾಗಿ ಅನುಸರಿಸಬೇಕಾದ ವಿಧಾನಗಳೇನು, ಏನನ್ನು ತಿನ್ನಬೇಕು, ಏನನ್ನು ತಿನ್ನಬಾರದು, ಯಾವುದನ್ನು ಯಾವ ಸಮಯಕ್ಕೆ ಮತ್ತು ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ಎನ್ನುವುದನ್ನೆಲ್ಲ ವಿವರವಾಗಿ ಅವರು ನಮೂದಿಸಿದ್ದಾರೆ. ಪುರುಷರು ಮತ್ತು ಮಹಿಳೆಯರು ಮಾಡಬಹುದಾದ ವ್ಯಾಯಾಮಗಳು, ನಿದ್ರಿಸಬೇಕಾದ ಸಮಯ ಎಲ್ಲವನ್ನೂ ವಿವರಿಸಿದ್ದಾರೆ. ಆರೋಗ್ಯಕರ ಜೀವನ ಶೈಲಿಗಾಗಿ ಪ್ರತಿಯೊಬ್ಬರೂ ಅನುಸರಿಸಬೇಕಾದ ವಿಧಾನಗಳನ್ನು ಅತ್ಯಂತ ಕರಾರುವಕ್ಕಾಗಿ ಈ ಪುಸ್ತಕದಲ್ಲಿ ತಿಳಿಸಿದ್ದಾರೆ. 
ಆಹಾರ ಪದ್ಧತಿ ಕುರಿತು ಮಾಹಿತಿ ಪಡೆಯಬೇಕಾದ ಅಗತ್ಯ ಇಂದು ಎಂದಿಗಿಂತ ಮುಖ್ಯವಾಗಿದೆ. ಸಮಾಜದ ಬಹುಪಾಲು ಜನರ ಜೀವನ ಇಂದು ಅತ್ಯಂತ ಒತ್ತಡದ್ದಾಗಿದೆ. ತಮ್ಮ ಸಾಮರ್ಥ್ಯವನ್ನೂ ಯೋಚಿಸದೆ ಗುರಿಯತ್ತ ಓಡುತ್ತಿದ್ದಾರೆ, ತಮ್ಮ ಕೆಲಸದ ಒತ್ತಡಕ್ಕೆ ಹೊಂದಾಣಿಕೆ ಮಾಡಿಕೊಂಡು, ಆ ಸಂದರ್ಭದಲ್ಲಿ, ಆ ಸ್ಥಳದಲ್ಲಿ ಸಿಗುವಂತಹ ಆಹಾರಗಳನ್ನು ಸೇವಿಸುತ್ತಿದ್ದಾರೆ. ಅದು ಅವೈಜ್ಞಾನಿಕ ಆಹಾರ ಪದ್ಧತಿಗೆ ಕಾರಣವಾಗಿದೆ. ಇದು ಪ್ರತಿಯೊಬ್ಬರ  ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಮತ್ತು ವೈದ್ಯರತ್ತ ಅಲೆಯುವುದು, ಅವರು ಹೇಳಿದ ಟೆಸ್ಟ್, ಅವರು ಹೇಳಿದ ಔಷಧ ಮತ್ತು ಅವರುಹೇಳಿದ ಆಹಾರ ಸೇವಿಸುವಂತಾಗಿದೆ.  ಈ ಒಂದು ವಿಷ ವರ್ತುಲದಿಂದ ಹೊರಗೆ ಬರುವುದು ಹೇಗೆ? 
ನಿಯಮಿತ ಆಹಾರ ಸೇವನೆಯಿಂದ, ಜೀವನ ಶೈಲಿಯಲ್ಲಿ ಕೆಲವು ಬದಲಾವಣೆ ತರುವ ಮೂಲಕ ಖಂಡಿತವಾಗಿ ಇದಕ್ಕೆಲ್ಲ ಪರಿಹಾರ ಕಂಡುಕೊಳ್ಳಬಹುದು. ಪ್ರತಿಯೊಬ್ಬರೂ ತಮ್ಮ ತಮ್ಮ ದೇಹ ರಚನೆಗೆ ಅನುಗುಣವಾಗಿ ಆಹಾರ ಪದ್ಧತಿ ರೂಢಿಸಿಕೊಳ್ಳಬೇಕು. ಸುದೈವವೆಂದರೆ, ಈಗ ಜನರಲ್ಲಿ ಸಮರ್ಪಕ ಆಹಾರ ಸೇವನೆ ಕುರಿತು ಜಾಗ್ರತೆ ಮೂಡುತ್ತಿದೆ. ಹತ್ತಾರು ಟಿವಿ ಚಾನೆಲ್ ಗಳ ಮೂಲಕ ಮಾಹಿತಿ ಪಡೆಯುತ್ತಿದ್ದಾರೆ. ಆದರೆ, ಇದೇ ವೇಳೆ ಅನೇಕರು ಬೇರೆ ಬೇರೆ ಕಡೆಯಿಂದ ಸಿಗುವ ಮಾಹಿತಿಗಳಿಂದಾಗಿ ಗೊಂದಲಕ್ಕೂ ಒಳಗಾಗುತ್ತಿದ್ದಾರೆ. ಡಾ.ಸೋನಾಲಿ ಸರ್ನೋಬತ್ ಅವರು ಬರೆದಿರುವ ‘ಡೆಯೆಟ್ ಮತ್ತು ನಾನು’ ಎನ್ನುವ ಪುಸ್ತಕ ಸಾಂದರ್ಭಿಕವಾಗಿ ಅಗತ್ಯ ಮಾಹಿತಿಗಳನ್ನು ಹೊತ್ತು ತಂದಿದೆ. 
ಅತ್ಯಂತ ಅಮೂಲ್ಯವಾದ  ‘ಡೆಯೆಟ್ ಮತ್ತು ನಾನು’  ಪುಸ್ತಕ ಅಮೇಝಾನ್ ನಲ್ಲಿ, ಸ್ಥಳೀಯ ಪುಸ್ತಕ ಮಳಿಗೆಗಳಲ್ಲಿ ಮತ್ತು ಅವರ ಕ್ಲಿನಿಕ್ ನಲ್ಲಿ ಸಹ ದೊರೆಯುತ್ತದೆ. 

Related Articles

Back to top button