Latest

ರಿಸಲ್ಟ್ ಆತಂಕ: ಪ್ರಗತಿವಾಹಿನಿಗೆ ಫೋನ್ ಗಳ ಸುರಿಮಳೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ನಿನ್ನೆಯಿಂದ ಪ್ರಗತಿವಾಹಿನಿಗೆ ನಿರಂತರ ಫೋನ್ ಗಳ ಸುರಿಮಳೆ. ಪಿಯುಸಿ ಫಲಿತಾಂಶದಿಂದ ಆತಂಕಕ್ಕೊಳಗಾಗಿರುವ ಮಕ್ಕಳು ಹಾಗೂ ಮಕ್ಕಳ ಪಾಲಕರು ದೂರವಾಣಿ ಕರೆ ಮಾಡಿ ತಮ್ಮ ಆತಂಕ, ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿದರು. 

ಅನುತ್ತೀರ್ಣರಾದ ಮಕ್ಕಳಿಗೆ ಆಪ್ತಸಮಾಲೋಚನೆ (ಕೌನ್ಸೆಲಿಂಗ್) ಅಗತ್ಯವಾದರೆ ಪ್ರಗತಿವಾಹಿನಿ ಉಚಿತವಾಗಿ ವ್ಯವಸ್ಥೆ ಮಾಡಲಿದೆ ಎನ್ನುವ ಕರೆಯ ಹಿನ್ನೆಲೆಯಲ್ಲಿ ರಾಜ್ಯದ ಬೇರೆ ಬೇರೆ ಕಡೆಯಿಂದ ವಿದ್ಯಾರ್ಥಿಗಳು, ಪಾಲಕರು ಕರೆ ಮಾಡಿ ತಮ್ಮ ಆತಂಕ, ಗೊಂದಲ ಬಿಚ್ಚಿಟ್ಟು, ಅದಕ್ಕೆ ಪರಿಹಾರ ಕಂಡುಕೊಳ್ಳಲು ಮುಂದಾದರು. 

ಕೌನ್ಸೆಲಿಂಗ್ ಗೆ ಸಿದ್ಧ:

ಇದಲ್ಲದೆ, ಪ್ರಗತಿವಾಹಿನಿ ಸುದ್ದಿ ನೋಡಿದ ಅನೇಕ ತಜ್ಞರು ತಾವು ಉಚಿತವಾಗಿ ಕೌನ್ಸೆಲಿಂಗ್ ಮಾಡಲು ಸಿದ್ದವಿರುವುದಾಗಿ ತಿಳಿಸಿದ್ದಾರೆ. 

ಪಿಯುಸಿಯಲ್ಲಿ ಅನುತ್ತೀರ್ಣರಾದ ಮಕ್ಕಳಿಗೆ ಉಚಿತವಾಗಿ ಕೌನ್ಸೆಲಿಂಗ್ ವ್ಯವಸ್ಥೆ ಮಾಡುವುದಾಗಿ  ಹಿರಿಯ ಐಎಎಸ್ ಅಧಿಕಾರಿ ಡಿ.ರೂಪಾ ತಿಳಿಸಿದ್ದಾರೆ. ಪ್ರಗತಿವಾಹಿನಿಯಲ್ಲಿ ಪ್ರಕಟವಾದ ಸುದ್ದಿ ಗಮನಿಸಿ ದೂರವಾಣಿ ಕರೆ ಮಾಡಿದ ಅವರು, ಉಚಿತವಾಗಿ ಕೌನ್ಸೆಲಿಂಗ್ ಮಾಡಲು ತಾವು ಸಿದ್ದವಿರುವುದಾಗಿ ತಿಳಿಸಿದರು. 

ಅಗತ್ಯವಿರುವವರಿಗೆ ತಾವು ದೂರವಾಣಿಯಲ್ಲಿ ಅಥವಾ ಸ್ವತಃ ಬಂದು ಭೇಟಿಯಾದರೂ ಆಪ್ತಸಮಾಲೋಚನೆ ನಡೆಸಿ ಮಾರ್ಗದರ್ಶನ ನೀಡುವುದಾಗಿ ರೂಪಾ ತಿಳಿಸಿದರು.  

ಬೆಳಗಾವಿಯ ನಿಯತಿ ಫೌಂಡೇಶನ್ ಚೇರಮನ್ ಡಾ.ಸೋನಾಲಿ ಸರ್ನೋಬತ್ ಸಹ, ಯಾವುದೇ ವಿದ್ಯಾರ್ಥಿಗೆ ಉಚಿತವಾಗಿ ಕೌನ್ಸೆಲಿಂಗ್ ಮಾಡಲು ತಾವು ಸಿದ್ದರಿರುವುದಾಗಿ ತಿಳಿಸಿದರು. ವಿದ್ಯಾರ್ಥಿಗಳು ಯಾವುದೇ ಪರಿಸ್ಥಿತಿಯಲ್ಲಿ ಆತಂಕಕ್ಕೊಳಗಾಗಬೇಕಾದ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಹಲವು ಗೊಂದಲ, ಆತಂಕ:

ಓರ್ವ ವಿದ್ಯಾರ್ಥಿ, ತಾನು ಎರಡು ವಿಷಯದಲ್ಲಿ ಅನುತ್ತೀರ್ಣನಾಗಿದ್ದು, ಪುನರ್ ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬೇಕೋ, ಹೊಸದಾಗಿ ಪರೀಕ್ಷೆ ಬರೆಯಬೇಕೋ ಎನ್ನುವ ಗೊಂದಲವನ್ನು ಹೊರಹಾಕಿದ. ಆ ವಿದ್ಯಾರ್ಥಿಯ ಹಿನ್ನೆಲೆಯನ್ನೆಲ್ಲ ತಿಳಿದುಕೊಂಡು ಮಾರ್ಗದರ್ಶನ ನೀಡಲಾಯಿತು. 

ಓರ್ವ ಪಾಲಕರು, ತಮ್ಮ ಮಗಳು 2ನೇ ಬಾರಿಯೂ ವಿಜ್ಞಾನ ವಿಷಯದಲ್ಲಿ ಅನ್ನುತ್ತೀರ್ಣಳಾಗಿದ್ದು,  ಅದೇ ವಿಷಯದಲ್ಲಿ ಮತ್ತೊಮ್ಮೆ ಪ್ರಯತ್ನಿಸುವುದೋ, ವಿಷಯ ಬದಲಿಸಿ ವಿದ್ಯಾಭ್ಯಾಸ ಮುಂದುವರಿಸುವುದು ಒಳ್ಳೆಯದೋ  ಎನ್ನುವ ಗೊಂದಲಕ್ಕೆ ಸಲಹೆ ಕೇಳಿದರು. 

ಕೆಲವರು ಪಿಯುಸಿ ನಂತರ ಮುಂದೆ ಯಾವ ವಿಷಯ ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು ಎನ್ನುವ ಕುರಿತೂ ಸಲಹೆ ಕೇಳಿದರು. ಕೆಲವರು ಮಕ್ಕಳನ್ನು ಖಿನ್ನತೆಯಿಂದ ಹೊರಗೆ ತರುವುದು ಹೇಗೆ ಎನ್ನುವ ಬಗ್ಗೆ ಸಹ ಸಲಹೆ ಕೇಳಿದರು. 

ಹಲವು ಮಕ್ಕಳು ಹಾಗೂ ಪಾಲಕರಿಗೆ ದೂರವಾಣಿಯಲ್ಲೇ ಸಲಹೆ, ಮಾರ್ಗದರ್ಶನ ನೀಡಲಾಯಿತು. ಇನ್ನು ಕೆಲವರಿಗೆ ತಜ್ಞರಿಂದ ಕೌನ್ಸೆಲಿಂಗ್ ವ್ಯವಸ್ಥೆ ಮಾಡಲಾಯಿತು. 

ಅನುತ್ತೀರ್ಣರಾದ ಮಕ್ಕಳಿಗೆ ಕೌನ್ಸೆಲಿಂಗ್ ಅಗತ್ಯವಾದರೆ ಪ್ರಗತಿವಾಹಿನಿ ಸಂಪರ್ಕಿಸಿ

(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲ ಗ್ರುಪ್ ಗಳಿಗೆ ಹಾಗೂ ನಿಮ್ಮ ಪರಿಚಿತರಿಗೆ ಶೇರ್ ಮಾಡಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button