ಪ್ರಗತಿವಾಹಿನಿ ಸುದ್ದಿ, ಮೂಡಲಗಿ:
ಕೋಮು ಸಾಮರಸ್ಯಕ್ಕೆ ಹೆಸರುವಾಸಿಯಾಗಿರುವ ಇಲ್ಲಿಯ ಶಿವಬೋಧರಂಗ ಪೀಠವು ಸರ್ವ ಧರ್ಮಿಯರ ಏಕತೆಯ ಸಂಕೇತವಾಗಿದೆ. ಎಲ್ಲ ಜಾತಿ, ಧರ್ಮದವರು ಈ ಪೀಠಕ್ಕೆ ಸಮರ್ಪಣಾ ಮನೋಭಾವನೆಯಿಂದ ಒಂದಾಗಿ ನಡೆದುಕೊಂಡು ಹೋಗುತ್ತಿರುವುದು ಜಾತ್ಯಾತೀತ ಮನೋಭಾವನೆಯನ್ನು ಬಿಂಬಿಸುತ್ತದೆ ಎಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಶ್ಲಾಘಿಸಿದರು.
ಅವರು ಗುರುವಾರ ಪಟ್ಟಣದ ಆರಾಧ್ಯ ದೈವ ಶಿವಬೋಧರಂಗ ಸ್ವಾಮೀಜಿಗಳ ಜಾತ್ರಾ ಮಹೋತ್ಸವದ ನಿಮಿತ್ಯ ಶ್ರೀ ಮಠದ ಗದ್ದುಗೆ ದರ್ಶನ ಪಡೆದು ಮಾತನಾಡಿದರು.
ಶಿವಬೋಧರಂಗನ ಆಶಿರ್ವಾದದಿಂದ ಈ ಭಾಗದಲ್ಲಿ ಉತ್ತಮ ಮಳೆಯಾಗಬೇಕು, ಅಂದಾಗ ಮಾತ್ರ ರೈತನ ಮೊಗದಲ್ಲಿ ಮಂದಹಾಸ ಮೂಡುತ್ತದೆ. ಮಳೆಯಾದರೆ ಉತ್ತಮ ಬೆಳೆ, ಜಾನುವಾರು ಹಾಗೂ ಸಾರ್ವಜನಿಕರಿಗೆ ನೀರಿನ ಅಭಾವ ತಪ್ಪುತ್ತದೆ. ಶೀಘ್ರ ಮಳೆಯಾಗುವಂತೆ ಶಿವಬೋಧರಂಗನಲ್ಲಿ ಭಕ್ತಿ ಪೂರ್ವಕವಾಗಿ ಪ್ರಾರ್ಥನೆ ಮಾಡಿಕೊಂಡಿದ್ದಾಗಿ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಭಾರತೀಯ ಸಂಸ್ಕೃತಿ ಇತಿಹಾಸ ಜಗತ್ತಿಗೆ ಮಾದರಿಯಾಗಿದೆ. ಇಲ್ಲಿಯ ಎಲ್ಲ ಧರ್ಮಿಯರು ಸಹೋದರತ್ವ ಮನೊಭಾವನೆಯಿಂದ ಬದುಕುತ್ತಿರುವುದು ಏಕತೆಯ ಸಂಕೇತ. ಇಡೀ ವಿಶ್ವಕ್ಕೆ ಭಾರತ ಧಾರ್ಮಿಕ ಕ್ಷೇತ್ರದಲ್ಲಿ ಮಾದರಿಯಾಗಿದೆ ಎಂದು ಹೇಳಿದ ಅವರು, ಮೂಡಲಗಿ ಪಟ್ಟಣದ ಸರ್ವತೋಮುಖ ಪ್ರಗತಿಗಾಗಿ ಶ್ರಮಿಸುವ ಭರವಸೆ ನೀಡಿದರು. ಮೂಡಲಗಿ ಹೊಸ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಗುರಿಯಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಶ್ರೀಪಾದಬೋಧ ಸ್ವಾಮೀಜಿಯವರ ಆಶೀರ್ವಾದ ಪಡೆದರು.
ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್ ಜಿ ಢವಳೇಶ್ವರ, ಪುರಸಭೆ ಮಾಜಿ ಅಧ್ಯಕ್ಷ ವೀರಣ್ಣ ಹೊಸೂರ, ಮುಖಂಡರಾದ ಆರ್.ಪಿ ಸೋನವಾಲಕರ, ಅಜೀಜ ಡಾಂಗೆ, ಸಿದ್ದು ಕೊಟಗಿ, ಜಯಾನಂದ ಪಾಟೀಲ, ಮರೆಪ್ಪ ಮರೆಪ್ಪಗೋಳ, ಅನ್ವರ ನದಾಫ್, ಹಣಮಂತ ಗುಡ್ಲಮನಿ, ಶಿವು ಚಂಡಕಿ, ಆನಂದ ಟಪಾಲ ಪುರಸಭೆ ಸದಸ್ಯರು ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ