Latest

ಸಂಸ್ಕರಣಾ ಘಟಕದ ಸ್ಫೋಟದಲ್ಲಿ ಮೃತರಾದವರ ಕುಟುಂಬಗಳಿಗೂ 5 ಲಕ್ಷ ರೂ ಪರಿಹಾರ

 

 

*

     ಪ್ರಗತಿವಾಹಿನಿ ಸುದ್ದಿ, ಸುವರ್ಣ ವಿಧಾನ ಸೌಧ, ಬೆಳಗಾವಿ

ಬಾಗಲಕೋಟೆ ಜಿಲ್ಲೆಯ ಖಾಸಗಿ ಸಕ್ಕರೆ ಕಾರ್ಖಾನೆಯ ಸಂಸ್ಕರಣಾ ಘಟಕದಲ್ಲಿ ಭಾನುವಾರ ನಡೆದ ಸ್ಪೋಟ ಪ್ರಕರಣದಲ್ಲಿ ಮೃತರಾದ ನಾಲ್ವರ ಕುಟುಂಬಗಳಿಗೂ ಕೂಡಾ ರಾಜ್ಯ ಸರ್ಕಾರ ತಲಾ ಐದು ಲಕ್ಷ ರೂ. ಪರಿಹಾರವನ್ನು ನೀಡಲಿದೆ ಎಂದು ಗೃಹ ಖಾತೆಯನ್ನು ಹೊತ್ತ ಉಪ ಮುಖ್ಯಮಂತ್ರಿ ಡಾ ಜಿ. ಪರಮೇಶ್ವರ್ ವಿಧಾನ ಸಭೆಯಲ್ಲಿ ಸೋಮವಾರ ಪ್ರಕಟಿಸಿದರು.
ಶಿವಮೊಗ್ಗ ಮಾಜಿ ಶಾಸಕ ಕರಿಯಣ್ಣ ಹಾಗೂ ಕಳೆದ ಎರಡು ದಿನಗಳಲ್ಲಿ ರಾಜ್ಯದಲ್ಲಿ ನಡೆದ ಎರಡು ಪ್ರತ್ಯೇಕ ದುರಂತಗಳಲ್ಲಿ ಸಾವನ್ನಪ್ಪಿದ ಜನರಿಗೆ ಸದನದ ಕಲಾಪ ಪ್ರಾರಂಭಕ್ಕೂ ಮುನ್ನ ಸಭಾಧ್ಯಕ್ಷ ಕೆ. ಆರ್. ರಮೇಶ್‌ಕುಮಾರ್ ಸಂತಾಪ ಸೂಚಕ ನಿರ್ಣಯವನ್ನು ಮಂಡಿಸಿದರು.
ಚಾಮರಾಜ ನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಕಿಚಗುತ್ತಿ ಮಾರಮ್ಮ ದೇವಸ್ಥಾನ ಗೋಪುರದ ಶಿಲಾನ್ಯಾಸ ಸಮಾರಂಭದಲ್ಲಿ ವಿತರಿಸಲಾದ ಪ್ರಸಾದವನ್ನು ಸೇವಿಸಿ ಇಬ್ಬರು ಮಕ್ಕಳೂ ಒಳಗೊಂಡಂತೆ ಒಟ್ಟು ಹದಿನಾಲ್ಕು ಜನ ಸಾವನ್ನಪ್ಪಿದ್ದಾರೆ. ಇನ್ನೂ 108 ಜನರು ಮೈಸೂರು ಭಾಗದ 13 ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೆಲ್ಲರೂ ಬೇಗ ಗುಣಮುಖರಾಗಲಿ. ಮೃತರ ಕುಟುಂಬಗಳಿಗೆ ಆರ್ಥಿಕ ನೆರವು ಒದಗಿಸುವುದರ ಜೊತೆಗೆ ಧೈರ್ಯ ತುಂಬುವ ಕಾರ್ಯವನ್ನು ಸರ್ಕಾರ ಮಾಡಲಿ ಎಂದು ಸಭಾಧ್ಯಕ್ಷರು ಹೇಳಿದರು.
ಸಂತಾಪ ಸೂಚಕ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಉಪ ಮುಖ್ಯಮಂತ್ರಿ ಡಾ ಜಿ.ಪರಮೇಶ್ವರ್, ಚಾಮರಾಜನಗರ ಜಿಲ್ಲೆಯ ದೇವಸ್ಥಾನದಲ್ಲಿ ನಡೆದ ದುರ್ಘಟನೆಯ ತನಿಖೆಗೆ ಆದೇಶಿಸಲಾಗಿದೆ. ಸಾವಿಗೆ ಕಾರಣವಾದ ಪ್ರಸಾದವನ್ನು ಈಗಾಗಲೇ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಪ್ರಾಥಮಿಕ ಪರೀಕ್ಷೆಯಲ್ಲಿ ಪ್ರಸಾದದಲ್ಲಿ ಕೀಟನಾಶಕದಲ್ಲಿ ಕಂಡು ಬರುವ ಮಾನೋಪ್ರೋಟ್ ರಾಸಾಯನಿಕ ಅಂಶವಿದೆ ಎಂದು ತಿಳಿದು ಬಂದಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕ ಇತರೆ ಅಂಶಗಳೂ ಬೆಳಕಿಗೆ ಬರಲಿವೆ. ಪ್ರಕರಣ ಕುರಿತಂತೆ ಈಗಾಗಲೇ ತನಿಖೆ ಪ್ರಾರಂಭಿಸಿ ಏಳು ಜನರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಕೆಲವರು ಹಳ್ಳಿಯನ್ನು ತೊರೆದಿದ್ದು, ಅವರಿಗಾಗಿ ಶೋಧ ಕಾರ್ಯ ಕೂಡಾ ಪ್ರಾರಂಭವಾಗಿದೆ. ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸದನಕ್ಕೆ ತಿಳಿಸಿದರು.
ಪ್ರತಿಪಕ್ಷ ನಾಯಕ ಬಿ. ಎಸ್. ಯಡಿಯೂರಪ್ಪ ಮಾತನಾಡಿ, ಸುಳ್ವಾಡಿ ದುರ್ಘಟನೆ ಕುರಿತು ನಿಷ್ಪಕ್ಷಪಾತ ತನಿಖೆ ನಡೆದು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಮಾನವೀಯತೆಯ ದೃಷ್ಟಿಯಿಂದ ಸಕ್ಕರೆ ಕಾರ್ಖಾನೆಯ ದುರಂತದಲ್ಲಿ ಮಡಿದವರ ಕುಟುಂಬಗಳಿಗೂ ಸರ್ಕಾರ ಪರಿಹಾರ ನೀಡಬೇಕು ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ಜನತಾ ಪಕ್ಷದ ನಾಯಕ ಹಾಗೂ ಮುಧೋಳ ಕ್ಷೇತ್ರದ ಶಾಸಕ ಗೋವಿಂದ ಕಾರಜೋಳ ಅವರು ಸುಳ್ವಾಡಿ ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ರಾಜ್ಯ ಸರ್ಕಾರ ಐದು ಲಕ್ಷ ರೂ. ಪರಿಹಾರವನ್ನು ಘೋಷಿಸಿದೆ. ಇದರ ಜೊತೆಗೆ ಸರ್ಕಾರದ ವಿವಿಧ ಯೋಜನೆಗಳಡಿ ದೊರೆಯುವ ಸವಲತ್ತುಗಳನ್ನೂ ವಿಸ್ತರಿಸುವಲ್ಲಿ ಕ್ರಮಕೈಗೊಳ್ಳಲು ಮುಂದಾಗಬೇಕು. ಎಂದು ಸರ್ಕಾರಕ್ಕೆ ಸಲಹೆ ನೀಡಿದರು.
ಹನೂರು ಶಾಸಕ ಆರ್. ನಾಗೇಂದ್ರ ಅವರು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿನ ಸುಳ್ವಾಡಿಯ ಮಾರಮ್ಮ ದೇವಸ್ಥಾನ ಖಾಸಗಿ ಒಡೆತನಕ್ಕೆ ಸೇರಿದೆ. ಗೋಪುರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಹದಿನೈದು ಕೆಜಿ ಅಕ್ಕಿಯನ್ನು ಬಳಸಿ ತಯಾರಿಸಿದ ಪ್ರಸಾದವನ್ನು ಜನರಿಗೆ ಹಂಚಲಾಗಿತ್ತು. ಪ್ರಸಾದ ತಿಂದವರು ಅಸ್ವಸ್ಥರಾಗಿ ಸಾವನ್ನಪ್ಪುತ್ತಿದ್ದಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆಯೇ, ಪ್ರಕರಣದ ಗಂಭೀರತೆಯನ್ನು ಮನಗಂಡು ವಿಷಯವನ್ನು ಮುಖ್ಯಮಂತ್ರಿಯವರ ಗಮನಕ್ಕೆ ತಂದಾಗ, ಮುಖ್ಯಮಂತ್ರಿಯವರು ಕೂಡಲೇ ಸ್ಪಂದಿಸಿ ಸರ್ಕಾರಿ ಆಸ್ಪತ್ರೆಗಳ ಜೊತೆಗೆ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಪಡೆಯಲು ಅನುಕೂಲ ಮಾಡಿಕೊಟ್ಟರು. ಇಲ್ಲವಾದಲ್ಲಿ ಸಾವಿನ ಪ್ರಮಾಣ ಮತ್ತಷ್ಟು ಹೆಚ್ಚಾಗುತ್ತಿತ್ತು. ಖಾಸಗಿ ಆಸ್ಪತ್ರೆಗಳ ವೈದ್ಯರೂ ಕೂಡಾ ಹಣದ ಬಗ್ಗೆ ಚಿಂತಿಸದೆ ಸಕಾಲಿಕ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button