*ಅವರು ಪೊಲೀಸ್ ಕಮೀಷ್ನರ್ರಾ? ಹೆಡ್ ಕ್ಲರ್ಕಾ? ಏನ್ ಸ್ಟೇಟ್ ಮೆಂಟ್ ಕೊಡ್ತಿದ್ದಾರೆ*: *ಹೆಚ್.ಡಿ.ಕೆ ಕೆಂಡಾಮಂಡಲ*

ಪ್ರಗತಿವಾಹಿನಿ ಸುದ್ದಿ: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ತಮ್ಮ ಹೆಸರನ್ನು ಪ್ರಸ್ತಾಪಿಸಿದ ಬೆನ್ನಲ್ಲೇ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಯಾರ್ರೀ ಅದು ಕಮೀಷನರ್? ಅವರು ಪೊಲೀಸ್ ಕಮೀಷನರ್ರಾ? ಹೆಡ್ ಕ್ಲರ್ಕಾ? ಕ್ಲರ್ಕ್ ಗಿಂತ ಕಡೆಯಾಗಿ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ಏನ್ ಸ್ಟೇಟ್ ಮೆಂಟ್ ಕೊಡ್ತಿದ್ದಾರೆ, ಯಾರ ಹಂಗಿನಲ್ಲಿ ಕೆಲಸ ಮಾಡ್ತಿದ್ದಾರೆ? ಜಾಗ ಉಳಿಸಿಕೊಳ್ಳೋಕೆ ಏನೆಲ್ಲಾ ಮಾಡ್ತಿದ್ದಾರೆ ಗೊತ್ತಿದೆ ಎಂದು ಗರಂ ಆದರು.
ನಾಳೆ ಸಂಪೂರ್ಣ ಮಾಹಿತಿ ಕೊಡ್ತೀನಿ. ಸ್ಟಿಂಗ್ ಆಪರೇಷನ್ ತಿರುಗುಬಾಣ ಯಾರಿಗೆ ಅಂತಾ ಹೇಳ್ತೀನಿ. ತನಿಖೆ ಯಾವ ಮಟ್ಟಕ್ಕೆ ಹೋಗ್ತಾ ಇದೆ? ಈ ಸರ್ಕಾರದ ಆಡಳಿತ ಯಾವ ರೀತಿ ಇದೆ ಹೇಳ್ತೀನಿ ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯ ಯಾಕೆ ಸ್ಟೇ ತಗೊಂಡಿದ್ದಾರೆ? ಯತೀಂದ್ರ ನಮ್ಮ ಪಕ್ಷದವರೆ ಸ್ಟಿಂಗ್ ಮಾಡಿದ್ದಾರೆ ಅಂತಾ ಹೇಳಿದ್ದಾರೆ. ಈ ಕುಮಾರಸ್ವಾಮಿಯನ್ನ, ಸರ್ಕಾರವಾಗಲಿ, ಅಧಿಕಾರಿಗಳಾಗಲಿ ಟಚ್ ಮಾಡೋಕೆ ಆಗಲ್ಲ. ಕುಮಾರಸ್ವಾಮಿಯನ್ನ ಅಷ್ಟು ಸುಲಭವಾಗಿ ಇವರು ಹೆದರಿಸಲು ಆಗಲ್ಲ. ಸರ್ಕಾರ ಯಾರನ್ನೆಲ್ಲಾ ರಕ್ಷಣೆ ಮಾಡ್ತಿದೆ ಗೊತ್ತಿದೆ ಎಂದು ಗುಡುಗಿದ್ದಾರೆ.
ಇದೇ ವೇಳೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಇದು ಟ್ರೈಲರ್, ಪಿಕ್ಚರ್ ಅಭಿ ಬಾಕಿ ಹೈ ಎಂದಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಇದೆಲ್ಲಾ ಯಾವ ಟ್ರೈಲರ್. ನಾನು ಸಿನಿಮಾ ಮಾಡಿರೋನು. ಇವರು ಈಗ ಸಿನಿಮಾ ಮಾಡೋಕೆ ಶುರು ಮಾಡಿದ್ದಾರೆ. ಇವರ ಸಿನಿಮಾ ಬಗ್ಗೆ ನಾಳೆ ನಾನು ಡಿಟೈಲ್ಸ್ ಆಗಿ ಹೇಳ್ತೀನಿ. ಈ ಟ್ರೈಲರ್ ಬಿಡುಗಡೆ ಮಾಡಲು ಹೋಗಿ, ಸಿದ್ದರಾಮಯ್ಯರನ್ನ ಯಾವ ರೀತಿ ಕೆಡವಲು ಹೊರಟಿದ್ದಾರೆ ಅನ್ನೋದನ್ನ ಹೇಳ್ತೀನಿ ಎಂದಿದ್ದಾರೆ.




