ಪ್ರಗತಿವಾಹಿನಿ ಸುದ್ದಿ, ಗೋಕಾಕ:
ಮನುಷ್ಯನ ಪ್ರಾಣಕ್ಕೆ ಅಪಾಯಕಾರಿ ಎಂದೇ ಹೇಳಲಾಗುವ ಏಡ್ಸ್ ಮತ್ತಿತರ ಮಾರಕ ರೋಗಗಳ ಕುರಿತು ಮಕ್ಕಳಿಗೆ ಆರಂಭದಲ್ಲೇ ಮಾಹಿತಿ ನೀಡಿದಲ್ಲಿ ಹರಡುವಿಕೆಯನ್ನು ತಪ್ಪಿಸಿದಂತೆಯೇ ಎಂದು ಇಲ್ಲಿಯ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರೂ ಆಗಿರುವ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶೆ ವಿಮಲ್ ನಂದಗಾಂವ ಅಭಿಪ್ರಾಯಪಟ್ಟರು.
ಶನಿವಾರ ಇಲ್ಲಿಯ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಮತ್ತು ಎನ್.ಜಿ.ಓ. ಇವರ ಸಹಯೋಗದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಪ್ರಯುಕ್ತ ಸಾರ್ವಜನಿಕರಿಗಾಗಿ ಏಡ್ಸ್ ತಡೆಗಟ್ಟುವ ಬಗ್ಗೆ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಶಿಬಿರ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಪಾಲಕರಿಗಿಂತಲೂ ಶಾಲೆಗಳಲ್ಲಿ ಶಿಕ್ಷಕರು ಈ ಕುರಿತು ಮಕ್ಕಳಿಗೆ ಅಗತ್ಯ ತಿಳಿವಳಿಕೆ ನೀಡುವುದು ಬಲು ಸೂಕ್ತ ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ವೈದ್ಯಾಧಿಕಾರಿ ಡಾ. ಆರ್.ಎಸ್.ಬೆಣಚಿನಮರಡಿ ಅವರು ಮಾತನಾಡಿ, ಇಂಥ ತಿಳಿವಳಿಕೆ ಕಾರ್ಯಕ್ರಮ ಮಕ್ಕಳಿಂದಲೇ ಆರಂಭಗೊಳಿಸುವುದು ಅತ್ಯಂತ ಸೂಕ್ತ. ರೋಗಗಳಿಗೆ ಬಲಿಯಾದ ಬಳಿಕ ಉಪಚಾರದ ಮೊರೆ ಹೋಗುವುದಕ್ಕಿಂತ, ಮುಂಜಾಗೃತೆ ವಹಿಸುವುದೇ ಸರಿಯಾದ ನಿರ್ಧಾರ ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ವೈದ್ಯ ಡಾ. ಮಹೇಶ ಕೋಣಿ ಮತ್ತು ವೈದ್ಯ ಡಾ. ಉದಯ ಅಂಗಡಿ ಉಪಸ್ಥಿತರಿದ್ದರು. ತದನಂತರ ಆಸ್ಪತ್ರೆ ಆವರಣದಲ್ಲಿ ಏಡ್ಸ್ ತಡೆಗಟ್ಟುವ ಕುರಿತು ಸಾರ್ವಜನಿಕರಲ್ಲಿ ಜನ ಜಾಗೃತಿ ಮೂಡಿಸಲು ಅರೆ-ಸರ್ಕಾರಿ ಸಂಘಟನೆ (ಎನ್.ಜಿ.ಓ.) ಆಯೋಜಿಸಿದ್ದ ಬೀದಿ ನಾಟಕ ಪ್ರೇಕ್ಷಕರ ಗಮನ ಸೆಳೆಯಿತು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ.ಬಿ.ಈಶ್ವರಪ್ಪಗೋಳ ಸ್ವಾಗತಿಸಿ, ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ