
ರಾಜಹಂಸಗಡ ಕಾಮಗಾರಿ ಪರಿಶೀಲಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಹುಕಾಲದ ದೊಡ್ಡ ಕನಸೊಂದು ಈಗ ನನಸಾಗುವ ಹಂತಕ್ಕೆ ಬಂದು ನಿಂತಿದೆ. ರಾಜಹಂಸಗಡದಲ್ಲಿ, ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ನಿರ್ಮಾಣವಾಗುತ್ತಿದ್ದು, ಸ್ಥಳಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆದರೆ ಈ ಮೂರ್ತಿಯ ನಿರ್ಮಾಣದ ಕೆಲಸ ಕನಸಾಗಿಯೇ ಉಳಿದಿತ್ತು. ಯಾರಿಂದಲೂ ಅದು ಸಾಕಾರಗೊಳ್ಳಲಿಲ್ಲ. ಈ ಭಾಗದ ಜನರೂ ಭರವಸೆಯನ್ನೇ ಕಳೆದುಕೊಂಡಿದ್ದರು. ಆದರೆ ಲಕ್ಷ್ಮಿ ಹೆಬ್ಬಾಳಕರ್ ಶಾಸಕರಾಗುತ್ತಿದ್ದಂತೆ ಅಲ್ಲಿನ ಕೆಲವರಿಂದ ಇಂತಹ ಬೇಡಿಕೆ ಬಂದಿತು. ಕೂಡಲೇ ಕಾರ್ಯಪ್ರವೃತ್ತರಾದ ಹೆಬ್ಬಾಳಕರ್, ಇದಕ್ಕಾಗಿ ಸಂಪೂರ್ಣ ಅಧ್ಯಯನ ನಡೆಸಿದರು. ಅಧಿಕಾರಿಗಳ ಸಹಾಯದಿಂದ ಪ್ರಸ್ತಾವನೆ ಸಿದ್ಧಪಡಿಸಿದರು.
ಶಿವಾಜಿ ಮಹಾರಾಜರ ಮೂರ್ತಿ ಸ್ಥಾಪನೆಯ ಜೊತೆಗೆ ಸಂಪೂರ್ಣ ರಾಜಹಂಸಗಡ ಪರಿಸರವನ್ನು ಅಭಿವೃದ್ಧಿಪಡಿಸಿ, ಪ್ರವಾಸಿ ತಾಣವನ್ನಾಗಿ ಬೆಳೆಸಬೇಕೆನ್ನುವ ಕನಸಿನೊಂದಿಗೆ ಮುಂದಡಿ ಇಟ್ಟರು.

ಜೊತೆಗೆ ರಾಜಹಂಸ ಕೋಟೆಯ ಸಮಗ್ರ ಅಭಿವೃದ್ಧಿಯ ಸಲುವಾಗಿ ಈ ಹಿಂದೆ ಪ್ರವಾಸೋದ್ಯಮ ಇಲಾಖೆಯ ಮಂತ್ರಿಗಳಾಗಿದ್ದ ಸಾ. ರಾ. ಮಹೇಶರವರಿಂದ 5 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿಸಿ ಆದೇಶ ಹೊರಡಿಸಲಾಯಿತು. ಜೊತೆಗೆ ಈಗಿನ ಸರ್ಕಾರ ಮತ್ತೆ 3 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿತು.
ಈ ಎಲ್ಲ ಹಣ ಸೇರಿಸಿ ರಾಜಹಂಸಗಡದ ಅಭಿವೃದ್ಧಿ ಕಾಮಗಾರಿ ಶರವೇಗದಿಂದ ನಡೆಯುತ್ತಿದೆ. ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಬುಧವಾರ ರಾಜಹಂಸಗಡಕ್ಕೆ ತೆರಳಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ನಿರ್ಮಾಣ ಕಾಮಗಾರಿ ಮತ್ತು ಇನ್ನಿತ ಕಾಮಗಾರಿಗಳನ್ನು ಪರಿಶೀಲಿಸಿದರು. ಕಾಮಗಾರಿ ಉತ್ತಮ ರೀತಿಯಲ್ಲಿ ನಡೆಯುತ್ತಿರುವುದಕ್ಕೆ ತೃಪ್ತಿ ವ್ಯಕ್ತಪಡಿಸಿ, ಕೆಲವು ಸಲಹೆ ಸೂಚನೆಗಳನ್ನು ನೀಡಿದರು.
ಮೃಣಾಲ ಹೆಬ್ಬಾಳಕರ್, ಯುವರಾಜ ಕದಂ, ಅರವಿಂದ ಪಾಟೀಲ, ಮನೋಹರ ಚೌಗುಲೆ, ಭರಮಾ ಪಾಟೀಲ, ಎಸ್ ಎಂ ಬೆಕವಾಟಕರ್, ಅನಿಲ ಪಾಟೀಲ, ಬಾಬು ಚೌಗುಲೆ, ಧಾಕುಲ್ ಇಂಗಳೆ, ಜಯರಾಮ ಪಾಟೀಲ, ಮನು ಚೌಗುಲೆ, ಸಿಪ್ಪಯ್ಯಾ ಬುರಾಳಕಟ್ಟಿ, ಹನಮಂತ ನಾವಗೆಕರ, ಗಂಗಾಧರ ಪವಾರ, ಶಾಂತಾರಾಮ, ಪ್ರಭಾಕರ ಪಾಟೀಲ, ಸ್ಥಳೀಯ ನಿವಾಸಿಗಳು ಹಾಗೂ ಕಾರ್ಯಕರ್ತರು ಸೇರಿದಂತೆ ಹಲವಾರು ಜನರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರಸ್ತೆಯ ಕಾಮಗಾರಿಗಳು, ನೀರಾವರಿಯ ಕಾಮಗಾರಿಗಳು, ಒಳಚರಂಡಿ ಹಾಗೂ ಗಟಾರಗಳ ನಿರ್ಮಾಣ, ದೇವಸ್ಥಾನಗಳ ಜೀರ್ಣೋದ್ಧಾರ ಸೇರಿದಂತೆ ಅಭಿವೃದ್ಧಿ ಕೆಲಸಗಳು ನಿರಂತರ ನಡೆಯುತ್ತಿವೆ. ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವಿಶ್ರಾಂತವಾಗಿ ಕೆಲಸ ಮಾಡುತ್ತಿರುವುದು ಕ್ಷೇತ್ರದ ಚಿತ್ರಣವೇ ಬದಲಾಗುವುದಕ್ಕೆ ಕಾರಣವಾಗಿದೆ.
ಚುನಾವಣೆಯ ಪೂರ್ವ ಜನರಿಗೆ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸುವ ದಿಸೆಯಲ್ಲಿ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡುತ್ತಿದ್ದ, ಮನಸ್ಸಿಗೆ ನೆಮ್ಮದಿ ಉಂಟಾಗಿದೆ. ಅದರಲ್ಲಿಯೂ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಯ ಕೆಲಸ ಪ್ರಗತಿಯಲ್ಲಿರುವುದನ್ನು ನೋಡಿ ಹೃದಯ ತುಂಬಿ ಬರುವುದರೊಂದಿಗೆ ತುಂಬಾ ಹೆಮ್ಮೆ ಎನಿಸುತ್ತಿದೆ. ನಾನು ಶಾಸಕಿಯಾಗಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಸೇವೆಯನ್ನು ಮಾಡುತ್ತಿರುವುದು ನನ್ನ ಸೌಭಾಗ್ಯ, ಈ ಸೇವೆಯನ್ನು ಮಾಡುವ ಅವಕಾಶವನ್ನು ಕಲ್ಪಿಸಿ ಕೊಟ್ಟ ನನ್ನ ಗ್ರಾಮೀಣ ಕ್ಷೇತ್ರದ ಜನತೆಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ. -ಲಕ್ಷ್ಮೀ ಹೆಬ್ಬಾಳಕರ, ಶಾಸಕಿ