*ದೀಪಾವಳಿಗೆ ಸರ್ಕಾರದಿಂದ ಬಂಪರ್ ಗಿಫ್ಟ್*: *ಎರಡು ಗ್ಯಾಸ್ ಸಿಲಿಂಡರ್ ಉಚಿತ*

ಪ್ರಗತಿವಾಹಿನಿ ಸುದ್ದಿ: ಹಬ್ಬದ ಸಮಯದಲ್ಲಿ ಗ್ಯಾಸ್ ಸಿಲಿಂಡರ್ ಖರೀದಿಸುವ ವೆಚ್ಚದಿಂದ ಕಂಗೆಟ್ಟಿರುವ ಕುಟುಂಬಗಳಿಗೆ ಸರ್ಕಾರದಿಂದ ಸಿಹಿಸುದ್ದಿ ಸಿಕ್ಕಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ವರ್ಷಕ್ಕೆ ಎರಡು ಉಚಿತ ಎಲ್ಪಿಜಿ ಸಿಲಿಂಡರ್ಗಳನ್ನು ನೀಡುವ ಪ್ರಸ್ತಾವನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಹಾಗಾದರೆ ಈ ಸೌಲಭ್ಯ ಯಾವಾಗ ಸಿಗಲಿದೆ? ಯಾರೆಲ್ಲ ಇದರ ಪ್ರಯೋಜನ ಪಡೆಯಬಹುದು? ಅನ್ನೋ ಮಾಹಿತಿ ಇಲ್ಲಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು 2026-27ರ ಹಣಕಾಸು ವರ್ಷದಲ್ಲಿ ಉಜ್ವಲ ಯೋಜನೆಯ ಅರ್ಹ ಫಲಾನುಭವಿಗಳಿಗೆ ಎರಡು ಉಚಿತ ಸಿಲಿಂಡರ್ ರೀಫಿಲ್ಗಳನ್ನು ಒದಗಿಸಲು ಮುಂದಾಗಿದೆ. ದೀಪಾವಳಿ ಮತ್ತು ಹೋಳಿ ಹಬ್ಬಗಳ ಸಂದರ್ಭದಲ್ಲಿ ಈ ಸೌಲಭ್ಯ ನೀಡಲು ಯೋಜಿಸಲಾಗಿದೆ.
ಮೊದಲ ಉಚಿತ ಸಿಲಿಂಡರ್ ರೀಫಿಲ್ ಅನ್ನು 2026ರ ಅಕ್ಟೋಬರ್ನಿಂದ ಡಿಸೆಂಬರ್ವರೆಗಿನ ಅವಧಿಯಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ನೀಡಲು ಉದ್ದೇಶಿಸಲಾಗಿದೆ. ಎರಡನೇ ಸಿಲಿಂಡರ್ ರೀಫಿಲ್ ಅನ್ನು 2027ರ ಜನವರಿಯಿಂದ ಮಾರ್ಚ್ವರೆಗಿನ ಅವಧಿಯಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ಒದಗಿಸಲು ಯೋಜಿಸಲಾಗಿದೆ.
ಈ ಯೋಜನೆಯ ಅನುಷ್ಠಾನಕ್ಕಾಗಿ ಉತ್ತರ ಪ್ರದೇಶ ಸರ್ಕಾರಕ್ಕೆ ಅಂದಾಜು ₹2,142.78 ಕೋಟಿ ವೆಚ್ಚವಾಗಲಿದೆ ಎಂದು ವರದಿಯಾಗಿದೆ. ಈ ಸೌಲಭ್ಯವು ರಾಜ್ಯದ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅರ್ಹ ಫಲಾನುಭವಿಗಳಿಗೆ ಮಾತ್ರ ಅನ್ವಯಿಸುತ್ತದೆ.
ಈ ಯೋಜನೆಯ ಪ್ರಯೋಜನ ಪಡೆಯಲು ಫಲಾನುಭವಿಗಳು ಕೆಲವು ಷರತ್ತುಗಳನ್ನು ಪೂರೈಸಬೇಕಾಗುತ್ತದೆ. ಬ್ಯಾಂಕ್ ಖಾತೆಯು ಆಧಾರ್ನೊಂದಿಗೆ ಜೋಡಣೆಯಾಗಿರಬೇಕು. ಆಧಾರ್ ದೃಢೀಕರಣ ಮತ್ತು ಅಗತ್ಯವಿರುವ ಇ-ಕೆವೈಸಿ ಪ್ರಕ್ರಿಯೆಯನ್ನೂ ಪೂರ್ಣಗೊಳಿಸಿರಬೇಕು.
ಹಬ್ಬಗಳ ಸಂದರ್ಭದಲ್ಲಿ ಬಡ ಕುಟುಂಬಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಮಹಿಳೆಯರು ಕಟ್ಟಿಗೆ ಮತ್ತು ಇತರ ಸಾಂಪ್ರದಾಯಿಕ ಇಂಧನಗಳ ಬದಲಿಗೆ ಸ್ವಚ್ಛ ಇಂಧನವಾದ ಎಲ್ಪಿಜಿ ಬಳಸುವುದನ್ನು ಉತ್ತೇಜಿಸುವ ಗುರಿಯನ್ನೂ ಈ ಯೋಜನೆ ಹೊಂದಿದೆ.
ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಹೊಸ ಸಂಪರ್ಕ ಪಡೆಯಲು ಅರ್ಜಿದಾರರು ಮಹಿಳೆಯಾಗಿರಬೇಕು ಮತ್ತು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಕುಟುಂಬದಲ್ಲಿ ಈಗಾಗಲೇ ಯಾವುದೇ ಸದಸ್ಯರ ಹೆಸರಿನಲ್ಲಿ ಎಲ್ಪಿಜಿ ಸಂಪರ್ಕ ಇರಬಾರದು. ಅರ್ಹ ಬಡ ಕುಟುಂಬಗಳಿಗೆ ಸೇರಿದ ಮಹಿಳೆಯರು ಯೋಜನೆಯ ನಿಯಮಗಳ ಪ್ರಕಾರ ಅರ್ಜಿ ಸಲ್ಲಿಸಬಹುದು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳು, ಅಂತ್ಯೋದಯ ಅನ್ನ ಯೋಜನೆಯ ಫಲಾನುಭವಿಗಳು ಹಾಗೂ ಪ್ರಧಾನಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಸೇರಿದಂತೆ ಸರ್ಕಾರ ಗುರುತಿಸಿರುವ ಅರ್ಹ ವರ್ಗಗಳ ಮಹಿಳೆಯರು ನಿಯಮಾನುಸಾರ ಅರ್ಜಿ ಸಲ್ಲಿಸಬಹುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




