ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ಮಹಾಂತೇಶ ನಗರ ವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯ ಇವರ ಸಹಯೋಗದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಕಿಣಿಯೆ ಸೈಲೆಂಟ್ ವ್ಯಾಲಿಯಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರದ ಎರಡನೇ ದಿನವಾದ ಇಂದು ಯುವಕರಲ್ಲಿ ಧನಾತ್ಮಕ ಚಿಂತನೆ ಎನ್ನುವ ವಿಷಯದ ಕುರಿತು ಬ್ರಹ್ಮಕುಮಾರಿ ರೂಪಾ ಅವರು ಉಪನ್ಯಾಸವನ್ನು ನೀಡಿದರು.
ಇಡೀ ಪ್ರಪಂಚದಲ್ಲಿ ಅತಿ ಹೆಚ್ಚು ಯುವಕರನ್ನು ಹೊಂದಿರುವ ರಾಷ್ಟ್ರ ಭಾರತವಾಗಿದೆ. ಆದರೆ ನಮ್ಮ ದೇಶದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯುವಜನತೆ ಸಾಧನೆ ಮಾಡಲಾಗುತ್ತಿಲ್ಲ. ಜೀವನದಲ್ಲಿ ಸ್ವ ಪರಿವರ್ತನೆಯಿಂದ ಮಾತ್ರ ವಿಶ್ವ ಪರಿವರ್ತನೆಯನ್ನು ಮಾಡಲು ಸಾಧ್ಯ. ಆದ್ದರಿಂದ ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು. ಹಾಗೂ ನಕಾರಾತ್ಮಕ ಚಿಂತನೆಯಿಂದ ಹೊರ ಬರಬೇಕು ಎಂದು ಕರೆ ನೀಡಿದರು.
ಜಗತ್ತಿನಲ್ಲಿ ಏನೆಲ್ಲವೂ ನಿರ್ಮಾಣವಾಗಿದೆಯೋ ಅದಕ್ಕೆ ಮೂಲ ಪ್ರೇರಣೆ ನಮ್ಮ ಮನಸ್ಸು .ಮನಸ್ಸು ಅದ್ಭುತ. ಮನಸ್ಸಿಗೆ ಅದ್ಭುತವಾದ ಶಕ್ತಿಯಿದೆ. ವಿಚಾರವನ್ನು ಉತ್ಪತ್ತಿಸುವ ಶಕ್ತಿಯಿದೆ. ಯುವಕರಲ್ಲಿ ಸಕಾರಾತ್ಮಕ ವಿಚಾರಗಳು ಉತ್ಪತ್ತಿಯಾದರೆ ದೇಶದ ಪ್ರಗತಿಯನ್ನು ಸಾಧಿಸಲು ಸಾಧ್ಯ ಎಂದು ಹೇಳಿದರು.
ಮುಖ್ಯ ಅತಿಥಿ ಅನಿತಾ ಅವರು ಮಾತನಾಡಿ, ಶಿಕ್ಷಕರು ಮಕ್ಕಳಿಗೆ ಮಾದರಿಯಾಗುವ ವ್ಯಕ್ತಿತ್ವವನ್ನು ನಡೆ ನುಡಿಯನ್ನು ರೂಪಿಸಿಕೊಂಡು ಅವರಲ್ಲಿ ಮೌಲ್ಯವನ್ನು ಬೆಳೆಸುವ ಮಹತ್ಕಾರ್ಯವನ್ನು ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಾಂತೇಶ ನಗರ ಬಿಎಡ್ ಕಾಲೇಜಿನ ಪ್ರಾಚಾರ್ಯೆ ಡಾಕ್ಟರ್ ನಿರ್ಮಲಾ ಬಟ್ಟಲ್ ಮಾತನಾಡಿ, ಉತ್ತಮ ಆಲೋಚನೆಗಳು ಉತ್ತಮ ಕಾರ್ಯಗಳಿಗೆ ಪ್ರೇರಣೆ ಯಾಗಿರುವುದರಿಂದ ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಿಕೊಂಡು ಸಮಾಜದ ಪರಿವರ್ತನೆಗೆ ಶಿಕ್ಷಕರು ಪ್ರಯತ್ನಿಸಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶಿಬಿರದ ಕಾರ್ಯಾಧ್ಯಕ್ಷರಾದ ಎಸ್ಪಿ ವಾಲಿಶೆಟ್ಟಿ ಹಾಗೂ ಎಲ್ಲ ಬೋಧಕ ಸಿಬ್ಬಂದಿ ಹಾಗೂ ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ