ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಈ ವರ್ಷ ಒಳ್ಳೆಯ ಮಳೆಯಾಗುತ್ತದೆ. ನೀರು ಎಲ್ಲ ಕಡೆ ಹರಿದಾಡುತ್ತದೆ. ಗಾಳಿಯಾಗುತ್ತದೆ. ಶೀತ ಬಾಧೆ ಯಿಂದ ರೋಗ ಬರುವ ಸಾಧ್ಯತೆ ಹೆಚ್ಚಿದೆ ಎಂದು ಹಾರನಹಳ್ಳಿ ಕೋಡಿಮಠದ ಜಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.
ಶನಿವಾರ ನಗರದ ಲಕ್ಷ್ಮೀ ಟೆಕಡಿಯ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯಿಂದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ರಾಜ್ಯದಲ್ಲಿ ಭೀಕರ ಬರಗಾಲದಿಂದ ರೈತಾಪಿ ಜನ ತತ್ತರಿಸಿ ಹೋಗಿದ್ದಾರೆ. ಈ ವರ್ಷ ಸಾಕಷ್ಟು ಮಳೆ, ಬೆಳೆ ಆಗುತ್ತದೆ. ಜನರು ಆತಂಕ ಪಡುವ ಅಗತ್ಯವಿಲ್ಲ ಎಂದರು.
ಮನುಷ್ಯನಿಗೆ ಹುಟ್ಟು, ಸಾವು ಮುಖ್ಯವಲ್ಲ. ಸಮಾಜಕ್ಕೆ ತನ್ನದೆ ಆದ ಕೊಡುಗೆ ನೀಡುವುದು ಮುಖ್ಯ.
ಪ್ರಶಸ್ತಿ ಬರುತ್ತದೆ ಹೋಗುತ್ತದೆ. ಪ್ರಶಸ್ತಿಗಾಗಿ ಎಂದಿಗೂ ಕೆಲಸ ಮಾಡಬಾರದು. ಸತತವಾಗಿ ಕೆಲಸ ಮಾಡಿದರೆ ಪ್ರಶಸ್ತಿ ತಾನಾಗಿಯೇ ಒಲಿದು ಬರುತ್ತದೆ.
ಯಾವ ವಸ್ತುವೂ ನನ್ನದಲ್ಲ. ನನ್ನದು ಎಂದು ಭಾವಿಸಿ ಬದುಕುವುದು ದುಃಖ ಎಂದು ಬುದ್ದ ಹೇಳಿದ್ದಾನೆ. ತಾಯಿಯೊಬ್ಬಳು ಮಗ ಸತ್ತಾಗ ಬುದ್ದನ ಬಳಿ ಹೋಗಿ ಮಗನನ್ನು ಬದುಕಿಸುವಂತೆ ಅಂಗಲಾಚುತ್ತಾಳೆ. ಬುದ್ದ ಸಾವಿಲ್ಲದ ಮನೆಯಿಂದ ಸಾಸಿವೆ ತೆಗೆದುಕೊಂಡು ಬಾ ಎಂದು ಹೇಳಿದಾಗ ಎಲ್ಲ ಮನೆ ತಿರುಗಾಡಿದರೂ ಆಕೆಗೆ ಸಾವಿಲ್ಲದ ಮನೆ ಸಾಸಿವೆ ಸಿಗುವುದಿಲ್ಲ. ಆದ್ದರಿಂದ ದೇಹ ಎಂದಿಗೂ ನಮ್ಮದಲ್ಲ ಎಂದು ತಿಳಿದುಕೊಂಡು ಬದುಕು ಸಾಗಿಸಬೇಕೆಂದರು.
ರಷ್ಯಾದ ಒಕ್ಕೂಟ ರಾಷ್ಟ್ರದಲ್ಲಿ ವಿಚಾರ ಸಂಕೀರ್ಣದ ಸಂದರ್ಭದಲ್ಲಿ ಕುವೆಂಪು ವಿಶ್ವವಿದ್ಯಾಲಯದಿಂದ ನನಗೆ ಡಾಕ್ಟರೇಟ್ ಗೌರವ ಪ್ರದಾನ ಮಾಡಿದರು ಎಂದು ಹೇಳಿದರು.
ರಾಣಿ ಚನ್ನಮ್ಮ ವಿವಿಯ ಕುಲಪತಿ ಡಾ. ಶಿವಾನಂದ ಹೊಸಮನಿ ಮಾತನಾಡಿ, ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರಿಗೆ ಕುವೆಂಪು ವಿಶ್ವವಿದ್ಯಾಲಯ ಡಾಕ್ಟರೇಟ್ ಗೌರವ ನೀಡಿರುವುದು ಇದು ರಾಜ್ಯಕ್ಕೆ ಮಾತ್ರವಲ್ಲ ದೇಶಕ್ಕೆ ಹೆಮ್ಮೆ ಎಂದರು.
ಬಹ್ಮನಹಳ್ಳಿ ವೀರಕ್ತಮಠದ, ಶಿವಯೋಗಿಶ್ವರ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ಏನೇ ಇರಲಿ ಕಷ್ಟಗಳನ್ನು ನುಂಗಿ ನಡೆಸುವುದೇ ಜೀವನ. ಕತ್ತಲಾಗದಿದ್ದರೆ ನಕ್ಷತ್ರ ಕಾಣುವುದಿಲ್ಲ. ಕಷ್ಟ ಇರದಿದ್ದರೆ ಜೀವನ ನಡೆಸಲು ಸಾಧ್ಯವಾಗುವುದಿಲ್ಲ. ಕಷ್ಟ ಸುಖ ಎರಡೂ ಮನುಷ್ಯನ ಜೀವನದ ಒಂದೇ ನಾಣ್ಯದ ಎರಡು ಮುಖಗಳು ಎಂದರು.
ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಸಾಮಾಜಿಕವಾಗಿ ಸಾಕಷ್ಟು ಕೆಲಸ ಮಾಡುತ್ತಿರುವುದು ಇತರರಿಗೂ ಮಾದರಿಯಾಗಿದೆ ಎಂದು ಹೇಳಿದರು.
ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ ಮಾತನಾಡಿ, ಹಾರನಹಳ್ಳಿ ಕೋಡಿ ಮಠದ ಜಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು ಸಮಾಜಕ್ಕೆ ಕಂಟಕವಾಗುವ ಸಂದರ್ಭದಲ್ಲಿ ತಮ್ಮ ಭವಷ್ಯ ವಾಣಿಯ ಎಚ್ಚರಿಕೆಯ ಸಂದೇಶ ರವಾನಿಸುತ್ತಾರೆ ಎಂದರು.
ಶ್ರೀಗಳು ನುಡಿದಿರುವ ಭವಿಷ್ಯವಾಣಿ ಎಂದಿಗೂ ಹುಸಿಯಾಗಿಲ್ಲ. ಅವರು ನೇರಾನೇರ ಮಾತಿನ ಮೂಲಕ ಸಮಾಜವನ್ನು ತಿದ್ದಿ ತೀಡುವ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಹುಕ್ಕೇರಿ ಹಿರೇಮಠಕ್ಕೆ ಮೆರಗು ಬಂದಿದೆ. ಮಠಕ್ಕೆ ಸಾಕಷ್ಟು ಹಿರಿಯ ರಾಜಕಾರಣಿ, ಮಠಾಧೀಶರು ಆಗಮಿಸಿದ್ದಾರೆ. ಹುಕ್ಕೇರಿ ಹಿರೇಮಠ ಇನ್ನೂ ಹೆಚ್ಚಿನ ಸಾಮಾಜಿಕ ಕಾರ್ಯ ಮಾಡಲಿ ಎಂದು ಹಾರೈಸಿದರು.
ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ