Latest

ಶಿಕ್ಷಣ ಇಲಾಖೆಯಲ್ಲಿ ಮಹಿಳೆಯರದ್ದೇ ಪ್ರಾಬಲ್ಯ

ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯಿಂದ ಶುಭ ಹಾರೈಕೆ

-ಎಸ್.ಜಯಕುಮಾರ್, ನಿರ್ದೇಶಕರು, ಪ್ರಾಥಮಿಕ ಶಿಕ್ಷಣ, ಸಾಶಿಇ , ಬೆಂಗಳೂರು
ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ. ಯಾವುದೇ ದಿನಾಚರಣೆ ಅದರದೇ ಆದ ಮಹತ್ವ ಹೊಂದಿರುತ್ತದೆ. ಮಹಿಳಾ ಸಬಲೀಕರಣ ವಿಷಯದಲ್ಲಿ ಇಂದು ನಮ್ಮ ಸಮಾಜ ಅತ್ಯಂತ ಹೆಚ್ಚು ಯಶಸ್ವಿಯಾಗಿ ಕೆಲಸ ನಿರ್ವಹಿಸಿದ್ದೇವೆಯೇ? ಎಂಬ ಬಗ್ಗೆ ಎಲ್ಲರೂ ಚಿಂತನೆ ಮಾಡುವ ದಿನ ಇದಾಗಿದೆ.
ಮಹಿಳೆಯರು ಇಂದು ಅನೇಕ ಜವಾಬ್ದಾರಿಗಳನ್ನು ಉತ್ತಮ ರೀತಿಯಲ್ಲಿ ಪುರುಷರಿಗೆ ಸರಿಸಮಾನವಾಗಿ ಮತ್ತು ಅದಕ್ಕೂ ಮೀರಿ ಮಾಡಿರುವುದನ್ನು, ಮಾಡುತ್ತಿರುವುದನ್ನು ನಾವು  ನೋಡುತ್ತಿದ್ದೇವೆ. ತಾಯಿಯಾಗಿ, ಪತ್ನಿಯಾಗಿ, ಮನೆಯ ಪೂರ್ಣ ಜವಾಬ್ದಾರಿಯ ನಿರ್ವಹಣೆ ಮಾಡುವ ಜೊತೆಗೆ ಕಚೇರಿಯ ಕೆಲಸಗಳನ್ನೂ ಅತ್ಯಂತ ಉತ್ತಮವಾಗಿ ನಿರ್ವಹಿಸುತ್ತಿರುವುದನ್ನು ಕಾಣುತ್ತಿದ್ದೇವೆ.
ಶಿಕ್ಷಣ ಇಲಾಖೆಯಲ್ಲಿ ಶೇ75 ಕ್ಕಿಂತ ಹೆಚ್ಚು ಮಹಿಳಾ ಶಿಕ್ಷಕಿಯರು ಶಾಲೆಗಳಲ್ಲಿ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ. ಸರಿಸುಮಾರು ಅಷ್ಟೇ ಸಂಖ್ಯೆಯಲ್ಲಿ ಸಾರ್ವಜನಿಕ ಶಿಕ್ಷಣ  ಇಲಾಖಾ ಕಚೇರಿಗಳಲ್ಲೂ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಹೆಚ್ಚು ಶಾಲೆಗಳಲ್ಲಿ ಮುಖ್ಯ ಶಿಕ್ಷಕರ ಹುದ್ದೆಗಳಲ್ಲಿ ಮಹಿಳೆಯರು ಅತ್ಯುತ್ತಮವಾಗಿ ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ. ಕೆಲವು ಶಾಲೆಗಳು ಕೇವಲ ಮಹಿಳಾ ಶಿಕ್ಷಕರಿಂದಲೇ ನಡೆಯುತ್ತಿವೆ. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ಅನೇಕ ಶಾಲೆಗಳಲ್ಲಿ ಮಹಿಳೆಯರೇ ಇದ್ದಾರೆ.
ಇನ್ನು ಬಿಸಿಯೂಟದ ಸಿಬ್ಬಂದಿ ಎಲ್ಲರೂ ಮಹಿಳೆಯರೇ ಆಗಿರುತ್ತಾರೆ. ಅವರು ಶಾಲೆಗಳಲ್ಲಿ ತಯಾರಿಸಿ ದಿನನಿತ್ಯ  ನೀಡುತ್ತಿರುವ ಬಿಸಿಯಾದ ರುಚಿಯೂಟವಂತೂ ತಾಯಿಯ ಕೈ ಊಟದಂತೆ ಇದ್ದು, ಮಕ್ಕಳ ಪ್ರೀತಿ ವಿಶ್ವಾಸ ಗಳಿಸುವಲ್ಲಿ  ಯಶಸ್ವಿಯಾಗಿದ್ದಾರೆ. ಮುಖ್ಯ ಅಡುಗೆಯವರು ಮಹಿಳೆಯರೇ ಆಗಿದ್ದು ದಕ್ಷತೆಯಿಂದ ಬಿಸಿಯೂಟದ ಲೆಕ್ಕ ಪತ್ರ ನಿರ್ವಹಣೆ ಮಾಡಿರುವುದನ್ನು ಕಾಣಬಹುದು.
ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಮಹಿಳಾ ಅಧಿಕಾರಿಗಳು ಶೈಕ್ಷಣಿಕ ಆಡಳಿತದ ವ್ಯವಸ್ಥೆಯ ಚುಕ್ಕಾಣಿ ಹಿಡಿದು ಸ್ವಚ್ಛತೆ, ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಅನೇಕ ಮಹಿಳಾ ಶಿಕ್ಷಕಿಯರು ಮಲೆನಾಡಿನಲ್ಲಿ ನಿರ್ಭೀತಿಯಿಂದ ಕಾಡುಗಳ ಮಧ್ಯೆ ಇರುವ ಮಕ್ಕಳ ಶ್ರೇಯೋಭಿವೃದ್ದಿಗೆ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿದ್ದರೆ, ಕೆಲವರು ಮನೆಯಿಂದ ನೂರಾರು ಮೈಲಿ ದೂರದ ಊರುಗಳಲ್ಲಿ ಧೈರ್ಯವಾಗಿ ಕೆಲಸ ನಿರ್ವಹಣೆ ಮಾಡುತ್ತಿದ್ದು ಊರವರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದು ಅನೇಕ ಜನಪರ ಕೆಲಸ ಮಾಡುತ್ತಾ ಶಾಲಾ ಅಭಿವೃದ್ಧಿಯಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ, ಮಾಡುತ್ತಿದ್ದಾರೆ, ಇವರೆಲ್ಲರಿಗೆ ಈ ವರ್ಷದ ಮಹಿಳಾ ದಿನಾಚರಣೆಯ ಈ ಶುಭ ಸಂದರ್ಭ ಇನ್ನಷ್ಟು ಹುರುಪು, ಸಂತೋಷ ನೀಡಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ಪ್ರೇರೇಪಣೆ ನೀಡಲಿ ಎಂದು ಆಶಿಸುತ್ತೇನೆ.
ಎಲ್ಲ ಮಹಿಳೆಯರಿಗೆ, ಮಹಿಳಾ ಸಾಧನೆಗೆ ಪ್ರೋತ್ಸಾಹಿಸುತ್ತಿರುವ ಸಂಘ ಸಂಸ್ಥೆಗಳಿಗೆ, ವ್ಯಕ್ತಿಗಳಿಗೆ ಮಹಿಳಾ ದಿನಾಚರಣೆಯ ಈ ಶುಭ ದಿನದಂದು ನನ್ನ ಹೃದಯ ಪೂರ್ವಕ ಅಭಿನಂದನೆಗಳನ್ನು ತಿಳಿಸಲು ಬಯಸುತ್ತೇನೆ.
(ಈ ಲೇಖನವನ್ನು ಎಲ್ಲರಿಗೂ, ಎಲ್ಲ ಗ್ರುಪ್ ಗಳಿಗೂ ಶೇರ್ ಮಾಡಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button